
ನಟ ರಾಜಪಾಲ್ ಯಾದವ್‌ಗೆ 1.11 ಕೋಟಿ ರೂ. ನೆರವು ನೀಡಿದ ನಿರ್ಮಾಪಕನಿಗೆ ಇಡಿ ಶಾಕ್!
'ಭೂಲ್ ಭುಲೈಯಾ', 'ಹಂಗಾಮಾ' ಖ್ಯಾತಿಯ ನಟ ರಾಜಪಾಲ್ ಯಾದವ್ ಅವರು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.
ಜೈಲಿನಲ್ಲಿರುವ ಬಾಲಿವುಡ್ ನಟ ರಾಜಪಾಲ್ ಯಾದವ್ ಅವರಿಗೆ 1.11 ಕೋಟಿ ರೂ. ಆರ್ಥಿಕ ನೆರವು ಘೋಷಿಸುವ ಮೂಲಕ ಸಂಗೀತ ನಿರ್ಮಾಪಕ ರಾವ್ ಇಂದರ್ಜೀತ್ ಸಿಂಗ್ ಯಾದವ್ ಸುದ್ದಿಯಲ್ಲಿದ್ದಾರೆ. ಆದರೆ, ಈ ನೆರವು ಘೋಷಿಸಿದ ನಿರ್ಮಾಪಕನೇ ಈಗ ಜಾರಿ ನಿರ್ದೇಶನಾಲಯದ (ED) ಹದ್ದಿನ ಕಣ್ಣಿನಲ್ಲಿದ್ದು, ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಸಂಚಲನ ಮೂಡಿಸಿದೆ.
ರಾಜಪಾಲ್ ಯಾದವ್‌ಗೆ 1.11 ಕೋಟಿ ರೂ. ನೆರವು
'ಭೂಲ್ ಭುಲೈಯಾ', 'ಹಂಗಾಮಾ' ಖ್ಯಾತಿಯ ನಟ ರಾಜಪಾಲ್ ಯಾದವ್ ಅವರು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತೇಹರ್ ಜೈಲಿನಲ್ಲಿದ್ದಾರೆ. 2010ರಲ್ಲಿ ತಮ್ಮ 'ಅಟಾ ಪಟಾ ಲಾ ಪಾತಾ' ಚಿತ್ರಕ್ಕಾಗಿ 5 ಕೋಟಿ ರೂ. ಸಾಲ ಪಡೆದಿದ್ದರು. ಚಿತ್ರ ಸೋತಿದ್ದರಿಂದ ಸಾಲ ತೀರಿಸಲಾಗದೆ ಅದು ಬಡ್ಡಿ ಸಮೇತ 9 ಕೋಟಿ ರೂ.ಗೆ ಏರಿತ್ತು.
ಈ ಕಷ್ಟದ ಸಮಯದಲ್ಲಿ GemTunes ಸಂಗೀತ ಸಂಸ್ಥೆಯ ಮಾಲೀಕ ರಾವ್ ಇಂದರ್ಜೀತ್ ಸಿಂಗ್ ಯಾದವ್ ಅವರು ರಾಜಪಾಲ್ ಅವರಿಗೆ 1.11 ಕೋಟಿ ರೂ. ಆರ್ಥಿಕ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. "ಚಲನಚಿತ್ರ ರಂಗವು ಒಂದು ಕುಟುಂಬವಿದ್ದಂತೆ, ಕಲಾವಿದರು ಕಷ್ಟದಲ್ಲಿದ್ದಾಗ ಪರಸ್ಪರ ಬೆಂಬಲಿಸಬೇಕು" ಎಂದು ಅವರು ಹೇಳಿದ್ದಾರೆ.
ED ದಾಳಿ ಮತ್ತು ಜಪ್ತಿ
ರಾಜಪಾಲ್ ಅವರಿಗೆ ನೆರವು ಘೋಷಿಸಿದ ಬೆನ್ನಲ್ಲೇ, ಇಂದರ್ಜೀತ್ ಸಿಂಗ್ ಅವರ ಮೇಲೆ ಇಡಿ (ED) ದಾಳಿ ನಡೆಸಿದೆ. ದೆಹಲಿ, ಗುರುಗ್ರಾಮ್ ಮತ್ತು ರೋಹ್ಟಕ್‌ನ ಸುಮಾರು 10 ಸ್ಥಳಗಳಲ್ಲಿ ಶೋಧ ನಡೆಸಿದ ಅಧಿಕಾರಿಗಳು ಐದು ಐಷಾರಾಮಿ ಕಾರುಗಳು, 17 ಲಕ್ಷ ರೂ. ನಗದು, ಬ್ಯಾಂಕ್ ಲಾಕರ್ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ
ರಾವ್ ಇಂದರ್ಜೀತ್ ಸಿಂಗ್ ಯಾದವ್ ಯಾರು?
ಇವರು 'GemTunes' ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೆಮ್ ರೆಕಾರ್ಡ್ಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕರು. ಹರಿಯಾಣವಿ, ಪಂಜಾಬಿ ಮತ್ತು ಹಿಂದಿ ಪ್ರಾದೇಶಿಕ ಸಂಗೀತ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ 12 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಸೆಲೆಬ್ರಿಟಿಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಸಹಾಯದ ಹಸ್ತ ಚಾಚಿದರೂ, ಇಂದರ್ಜೀತ್ ಅವರ ಹಿನ್ನೆಲೆ ಆತಂಕಕಾರಿಯಾಗಿದೆ. ಅಧಿಕಾರಿಗಳ ಪ್ರಕಾರ ಇವರು ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಕ್ರಮ ವಸೂಲಿ ಮತ್ತು ಒತ್ತಾಯದ ಸಾಲ ವಸೂಲಿ ಮೂಲಕ ಹಣ ಸಂಪಾದಿಸಿದ ಆರೋಪ ಇವರ ಮೇಲಿದೆ. ರೋಹ್ಟಕ್‌ನಲ್ಲಿ ನಡೆದ ಹಣಕಾಸು ವ್ಯವಹಾರ ನಡೆಸುತ್ತಿದ್ದ ಮಂಜಿತ್ ದಿಘಾಲ್ ಕೊಲೆ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದಿದೆ. ಗಾಯಕ ರಾಹುಲ್ ಫಜಿಲ್‌ಪುರಿಯಾ ಅವರ ನಿವಾಸದ ಮೇಲಿನ ಗುಂಡಿನ ದಾಳಿ ಮತ್ತು ಅವರ ಸಹಾಯಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ. ಕಳೆದ ವರ್ಷ ರೋಹ್ಟಕ್ ಕೊಲೆ ಪ್ರಕರಣದ ನಂತರ ಇಂದರ್ಜೀತ್ ಸಿಂಗ್ ಯುಎಇಗೆ (UAE) ಪರಾರಿಯಾಗಿದ್ದು, ಅಲ್ಲಿಂದಲೇ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಾಜಪಾಲ್ ಯಾದವ್ ಜೈಲು ಸೇರಿದ್ದು ಏಕೆ?
ರಾಜಪಾಲ್ ಯಾದವ್ ಅವರು 2010ರಲ್ಲಿ ತಮ್ಮ ಸ್ವಂತ ನಿರ್ಮಾಣದ 'ಅಟಾ ಪಟಾ ಲಾ ಪಾತಾ' ಚಿತ್ರದ ನಿರ್ಮಾಣಕ್ಕಾಗಿ ಸುಮಾರು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದರಿಂದ ಅವರು ಸಾಲ ಮರುಪಾವತಿ ಮಾಡಲು ವಿಫಲರಾದರು. ಇದು ಕಾನೂನು ಹೋರಾಟಕ್ಕೆ ಕಾರಣವಾಯಿತು ಮತ್ತು ಬಡ್ಡಿ ಸೇರಿ ಬಾಕಿ ಮೊತ್ತವು ಸುಮಾರು 9 ಕೋಟಿ ರೂಪಾಯಿಗಳಿಗೆ ಏರಿತ್ತು.
ರಾಜಪಾಲ್ ಯಾದವ್ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ದೆಹಲಿ ಹೈಕೋರ್ಟ್‌ನಲ್ಲಿ ಕೊನೆಯ ಕ್ಷಣದವರೆಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಜೈಲಿಗೆ ಶರಣಾಗಬೇಕಾಯಿತು.

