ರಾಜ್‌ಪಾಲ್ ಯಾದವ್‌ ಪೊಲೀಸರಿಗೆ ಶರಣಾಗುವಂತೆ ಹೈಕೋರ್ಟ್ ಆದೇಶ
x

ಸಾಲ ಮರುಪಾವತಿ ಮಾಡುವುದಾಗಿ ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಪದೇ ಪದೇ ಉಲ್ಲಂಘಿಸಿದ ಕಾರಣಕ್ಕಾಗಿ ನಟ ರಾಜಪಾಲ್ ಯಾದವ್ ವಿರುದ್ಧ ದೆಹಲಿ ಹೈಕೋರ್ಟ್ ಪೊಲೀಸರಿಗೆ ಶರಣಾಗುವಂತೆ ತಿಳಿಸಿದ್ದಾರೆ. 

ರಾಜ್‌ಪಾಲ್ ಯಾದವ್‌ ಪೊಲೀಸರಿಗೆ ಶರಣಾಗುವಂತೆ ಹೈಕೋರ್ಟ್ ಆದೇಶ

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, ಫೆಬ್ರವರಿ 4ರ ಸಂಜೆ 4 ಗಂಟೆಯೊಳಗೆ ಜೈಲಿಗೆ ಶರಣಾಗುವಂತೆ ಆದೇಶಿಸಿದೆ.


Click the Play button to hear this message in audio format

ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಈಡೇರಿಸದ ಕಾರಣ ಬುಧವಾರ ಸಂಜೆ 4 ಗಂಟೆಯೊಳಗೆ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠವು ಆದೇಶಿಸಿದೆ.

ಪ್ರಕರಣ ಏನು?

'ಮುರಳಿ ಪ್ರಾಜೆಕ್ಟ್ಸ್' ಎಂಬ ಸಂಸ್ಥೆಯಿಂದ ಸಿನಿಮಾ ನಿರ್ಮಾಣಕ್ಕಾಗಿ ಪಡೆದಿದ್ದ ಸಾಲದ ಮರುಪಾವತಿ ಮಾಡುವಲ್ಲಿ ನಟ ವಿಫಲರಾಗಿದ್ದರು. ಈ ಸಂಬಂಧ ನೀಡಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಹಿಂದೆ ವಿಚಾರಣಾ ನ್ಯಾಯಾಲಯವು ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ನಟ, ಹಣವನ್ನು ಶೀಘ್ರವೇ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಈ ಕಾರಣಕ್ಕೆ ಕಳೆದ 2024ರ ಜೂನ್‌ನಿಂದ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಲಾಗಿತ್ತು.

ಸಾಲದ ಮೊತ್ತವನ್ನು ಕಂತುಗಳಲ್ಲಿ ಪಾವತಿಸುವುದಾಗಿ ರಾಜ್‌ಪಾಲ್ ಯಾದವ್ ಪದೇ ಪದೇ ಗಡುವು ಪಡೆದಿದ್ದರು. ಆದರೆ, ನೀಡಿದ್ದ ಸಮಯ ಮುಗಿದರೂ ಪಾವತಿ ಮಾಡದಿದ್ದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಡಿಮ್ಯಾಂಡ್ ಡ್ರಾಫ್ಟ್‌ಗಳಲ್ಲಿ ತಾಂತ್ರಿಕ ದೋಷವಿದೆ ಎಂಬ ನಟನ ಸಮರ್ಥನೆಯನ್ನು ನ್ಯಾಯಾಲಯವು ತಿರಸ್ಕರಿಸಿದ್ದು, ಇದು ಕೇವಲ ಕಾಲಹರಣದ ತಂತ್ರ ಎಂದು ಆಕ್ಷೇಪಿಸಿದೆ. ನ್ಯಾಯಾಲಯವು ಸಾಕಷ್ಟು ಔದಾರ್ಯ ತೋರಿದ್ದರೂ, ಅದರ ಸದುಪಯೋಗ ಪಡೆದುಕೊಳ್ಳುವಲ್ಲಿ ನಟ ವಿಫಲರಾಗಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಮುಂಬೈನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಕಾರಣ ಶರಣಾಗಲು ಹೆಚ್ಚಿನ ಸಮಯ ಕೋರಲಾಗಿತ್ತು. ಆದರೆ, ಕಾನೂನು ಪ್ರಕ್ರಿಯೆಯನ್ನು ಗೌರವಿಸಬೇಕಾದ ಅನಿವಾರ್ಯತೆಯನ್ನು ಮನಗಂಡ ನ್ಯಾಯಾಲಯ, ಇಂದೇ ಶರಣಾಗಲು ಆದೇಶಿಸಿದೆ. ನಾಳೆ (ಫೆಬ್ರವರಿ 5) ಈ ಆದೇಶದ ಅನುಷ್ಠಾನದ ಬಗ್ಗೆ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಲಿದ್ದಾರೆ.

Read More
Next Story