
ಸ್ಯಾಂಡಲ್‌ವುಡ್ ತಾರೆಗಳ ಸಮಾಗಮದೊಂದಿಗೆ ಸಂಪನ್ನಗೊಂಡಿತ್ತು.
ಸ್ಯಾಂಡಲ್‌ವುಡ್ ತಾರೆಗಳ ಸಮಾಗಮದೊಂದಿಗೆ ಕುಣಿಗಲ್ ಉತ್ಸವ ಸಂಪನ್ನ
ಕುಣಿಗಲ್ ಉತ್ಸವದ ಅಂಗವಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ 70 ಸಾವಿರ ಲಾಡುಗಳನ್ನು ಕ್ಷೇತ್ರದ ಮನೆ ಮನೆಗೆ ತಲುಪಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು.
ಕುಣಿಗಲ್‌ನ ಬಿ.ಕೆ.ಬಿ.ಎಂ.ಎಸ್. ಮೈದಾನದಲ್ಲಿ ಶಾಸಕ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ 'ಕುಣಿಗಲ್ ಉತ್ಸವ'ವು ಭಾನುವಾರ ರಾತ್ರಿ ಅತ್ಯಂತ ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಅಂತಿಮ ದಿನದಂದು ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಈ ಬೃಹತ್ ತಾರಾಮೇಳಕ್ಕೆ ಸಾಕ್ಷಿಯಾದರು.
ಸಿನಿಮಾ ಸೆಟ್ ಮಾದರಿಯಲ್ಲೇ ನಿರ್ಮಿಸಲಾಗಿದ್ದ ವೈಭವಯುತ ವೇದಿಕೆಯಲ್ಲಿ ಸ್ಯಾಂಡಲ್‌ವುಡ್‌ನ ನಟರಾದ ಕಿಚ್ಚ ಸುದೀಪ್, ಹಿರಿಯ ನಟಿ ಮಾಲಾಶ್ರೀ, ಅನು ಪ್ರಭಾಕರ್, 'ನೆನಪಿರಲಿ' ಪ್ರೇಮ್, ಡಾಲಿ ಧನಂಜಯ್, ಜೈದ್ ಖಾನ್, ನಟಿ ಆರಾಧನಾ ರಾಮ್ ಹಾಗೂ ಚಲನಚಿತ್ರ ನಿರ್ಮಾಪಕ ಸಂಜಯಗೌಡ್ರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಂಭ್ರಮ ಹೆಚ್ಚಿಸಿದರು. ಕೊರೆಯುವ ಚಳಿಯನ್ನೂ ಲೆಕ್ಕಿಸದೇ ನೆರೆದಿದ್ದ ಅಭಿಮಾನಿಗಳು ನವೀನ್ ಸಜ್ಜು ಮತ್ತು ಚಂದನ್ ಶೆಟ್ಟಿ ಅವರ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಸತತ ಮೂರು ಗಂಟೆಗಳ ಕಾಲ ಮನೆರಂಜನೆ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, "ಕುಣಿಗಲ್ ಜನರ ಈ ಉತ್ಸಾಹ ಮತ್ತು ಶಾಸಕ ರಂಗನಾಥ್ ಮೇಲೆ ಅವರು ಇಟ್ಟಿರುವ ವಿಶ್ವಾಸವನ್ನು ಕಂಡು ನಿಜಕ್ಕೂ ಸಂತೋಷವಾಗಿದೆ. ಮನುಷ್ಯ ಹುಟ್ಟುತ್ತಲೇ ತಂದೆ-ತಾಯಿ, ಗುರು, ದೇವರು ಮತ್ತು ಸಮಾಜದ ಋಣ ಹೊತ್ತು ಬರುತ್ತಾನೆ. ನಾವು ಈಗಾಗಲೇ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜದ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಉತ್ಸವದ ಅಂಗವಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಪ್ರಸಾದವಾಗಿ 70 ಸಾವಿರ ಲಾಡುಗಳನ್ನು ಮನೆ ಮನೆಗೆ ತಲುಪಿಸಲಾಗುವುದು" ಎಂದರು.
ಶಾಸಕ ಡಾ. ರಂಗನಾಥ್ ಮಾತನಾಡಿ, ನಾವು ಈ ಕಾರ್ಯಕ್ರಮಕ್ಕೆ ಕೇವಲ 10 ಸಾವಿರ ಜನರನ್ನು ನಿರೀಕ್ಷಿಸಿದ್ದೆವು, ಆದರೆ 35 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಈ ಉತ್ಸವವನ್ನು ಒಂದು ಐತಿಹಾಸಿಕ ದಾಖಲೆಯನ್ನಾಗಿ ಮಾಡಿದ್ದಾರೆ. ಜನರ ಪ್ರೀತಿಯೇ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಎಲ್.ಆರ್. ಶಿವರಾಮೇಗೌಡ, ಉದಯ್, ಇಕ್ಬಾಲ್ ಹುಸೇನ್ ಮತ್ತಿತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

