
ಧುರಂಧರ್ 2' ಚಿತ್ರದಲ್ಲಿ 'ಬಡೆ ಸಾಹಬ್' ಪಾತ್ರಕ್ಕಾಗಿ ನಟ ಡೇನಿಶ್ ಇಕ್ಬಾಲ್ ಬರೋಬ್ಬರಿ 9 ಗಂಟೆಗಳ ಕಾಲ ಮೇಕಪ್‌ಗಾಗಿ ಕಳೆಯುತ್ತಿದ್ದರು.
'ಧುರಂಧರ್ 2' ಚಿತ್ರದಲ್ಲಿ ಮಿಂಚಿದ ಡೇನಿಶ್ ಇಕ್ಬಾಲ್: ರಣವೀರ್ ಸಿಂಗ್ ಸರಳತೆಗೆ ನಟ ಫಿದಾ
ಧುರಂಧರ್ 2 ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟ ಡೇನಿಶ್ ಇಕ್ಬಾಲ್, ಸಹನಟ ರಣವೀರ್ ಸಿಂಗ್ ಅವರ ಗುಣವನ್ನು ಕೊಂಡಾಡಿದ್ದಾರೆ.
ಬಾಲಿವುಡ್‌ನ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ 'ಧುರಂಧರ್ 2'ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಅತೀ ಪ್ರಮುಖವಾದ 'ಬಡೆ ಸಾಹಬ್' ಅಲಿಯಾಸ್ ದಾವೂದ್ ಇಬ್ರಾಹಿಂ ಪಾತ್ರವನ್ನು ನಿರ್ವಹಿಸಿರುವ ನಟ ಡೇನಿಶ್ ಇಕ್ಬಾಲ್ ಸಿನಿಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಡೇನಿಶ್ ಅವರು ಚಿತ್ರದ ನಾಯಕ ರಣವೀರ್ ಸಿಂಗ್ ಮತ್ತು ತಮ್ಮ ಪಾತ್ರದ ಕಠಿಣ ತಯಾರಿ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ರಣವೀರ್ ಸಿಂಗ್ ಬಗ್ಗೆ ಮೆಚ್ಚುಗೆಯ ಮಾತು
"ರಣವೀರ್ ಸಿಂಗ್ ಎಂದರೆ ಕೇವಲ ಎನರ್ಜಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಅವರನ್ನು ಭೇಟಿಯಾದಾಗ ಅವರಲ್ಲಿದ್ದ ವಿನಯ ಮತ್ತು ನಡವಳಿಕೆ ಕಂಡು ಬೆರಗಾದೆ" ಎಂದು ಡೇನಿಶ್ ಹೇಳಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ರಣವೀರ್ ಬಹಳ ಸಹಕಾರ ನೀಡುತ್ತಿದ್ದರು. ಪ್ರತಿಯೊಂದು ಟೇಕ್ ಮುಗಿದ ನಂತರವೂ ಡೇನಿಶ್ ಬಳಿ ಬಂದು, "ಸರ್, ಅದ್ಭುತವಾಗಿ ನಟಿಸಿದ್ದೀರಿ" ಎಂದು ಪ್ರೋತ್ಸಾಹಿಸುತ್ತಿದ್ದರಂತೆ. ರಣವೀರ್ ಅವರ ಈ ಪ್ರೀತಿ ಮತ್ತು ಗೌರವ ಕೇವಲ ಮಾತಿಗೆ ಸೀಮಿತವಾಗಿರದೆ, ಅದು ಅವರ ಮನದಾಳದಿಂದ ಬರುತ್ತಿತ್ತು ಎಂದು ಡೇನಿಶ್ ಸ್ಮರಿಸಿದ್ದಾರೆ.
ಪಾತ್ರಕ್ಕಾಗಿ ನಡೆದ 9 ಗಂಟೆಗಳ ಕಸರತ್ತು
ಚಿತ್ರದಲ್ಲಿ ದಾವೂದ್ ಇಬ್ರಾಹಿಂ ಅವರ ವಯಸ್ಸಾದ ಲುಕ್ ಪಡೆಯಲು ಡೇನಿಶ್ ಪಟ್ಟ ಶ್ರಮ ಸಾಮಾನ್ಯವಾದುದಲ್ಲ. ಈ ಪ್ರೊಸ್ತೆಟಿಕ್ ಮೇಕಪ್‌ಗಾಗಿ ಅವರು ಪ್ರತಿದಿನ ಬರೋಬ್ಬರಿ 8 ರಿಂದ 9 ಗಂಟೆಗಳ ಕಾಲ ಕುಳಿತುಕೊಳ್ಳಬೇಕಿತ್ತು. ಇನ್ನು ಚಿತ್ರೀಕರಣ ಮುಗಿದ ನಂತರ ಅದನ್ನು ತೆಗೆಯಲು ಮತ್ತೆ 3 ರಿಂದ 4 ಗಂಟೆ ಬೇಕಾಗುತ್ತಿತ್ತು. ಮೇಕಪ್ ಹಾಕಿಕೊಂಡ ಮೇಲೆ ಆಹಾರ ಸೇವಿಸುವುದು ಕೂಡ ಅಸಾಧ್ಯವಾಗಿತ್ತು, ಕೇವಲ ಜ್ಯೂಸ್ ಕುಡಿದು ಇಡೀ ದಿನ ಕಳೆಯುತ್ತಿದ್ದರು. ಮೊದಲು ಮೇಕಪ್ ಇಲ್ಲದೆ ಡೇನಿಶ್ ಅವರನ್ನು ನೋಡಿದ್ದ ರಣವೀರ್ ಮತ್ತು ತಂಡದವರು, ಮೇಕಪ್ ನಂತರದ ಅವರ ರೂಪಾಂತರ ಕಂಡು ದಂಗಾಗಿದ್ದರಂತೆ.
ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಮಾರ್ಚ್ 19 ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ 100 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ರಣವೀರ್ ಸಿಂಗ್ ಇಲ್ಲಿ ಹಮ್ಜಾ ಅಲಿ ಮಜಾರಿ ಎಂಬ ಗುಪ್ತಚರನ ಪಾತ್ರದಲ್ಲಿದ್ದರೆ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಡೇನಿಶ್ ಪಟ್ಟ ಶ್ರಮಕ್ಕೆ ಈಗ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ.

