
ವಿವಾದದ ಬಗ್ಗೆ ಮೌನ ಮುರಿದ ಯಾಮಿ ಗೌತಮ್
ನನಗೆ ಪಿಆರ್ ತಂಡವಿಲ್ಲ, ಅಗ್ಗದ ತಂತ್ರಗಳು ಬೇಕಿಲ್ಲ: ಕೃತಿ ಸೆನೋನ್‌ಗೆ ತಿರುಗೇಟು ಕೊಟ್ಟ ಯಾಮಿ ಗೌತಮ್
ಯಾಮಿ ಗೌತಮ್ ಅವರು ಇಮ್ರಾನ್ ಹಶ್ಮಿ ಜೊತೆಗಿನ 'ಶಾ ಬಾನೊ' ಪ್ರೇರಿತ ಲೀಗಲ್ ಥ್ರಿಲ್ಲರ್ ಮತ್ತು ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟಿ ಯಾಮಿ ಗೌತಮ್ ಅವರು ಇತ್ತೀಚೆಗೆ ತಮ್ಮ ಮತ್ತು ನಟಿ ಕೃತಿ ಸೆನೋನ್ ನಡುವೆ ಉಂಟಾದ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ. ಈ ವಿಷಯವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಅವರು, ತಾವು ಎಂದಿಗೂ " `ಪಿಆರ್ ತಂತ್ರಗಳ' ಮೊರೆ ಹೋಗುವುದಿಲ್ಲ ಮತ್ತು ಕೇವಲ ತನ್ನ ಕೆಲಸದ ಮೇಲೆ ಮಾತ್ರ ಗಮನ ಹರಿಸುವುದಾಗಿ ತಿಳಿಸಿದ್ದಾರೆ.
ಜೀ ಸಿನಿ ಅವಾರ್ಡ್ಸ್‌ನಲ್ಲಿ ಕೃತಿ ಸೆನೋನ್ಅವರ ಗೆಲುವನ್ನು ಲೇವಡಿ ಮಾಡುವಂತಹ ವಿಡಿಯೋವೊಂದಕ್ಕೆ ಯಾಮಿ ಗೌತಮ್ ಲೈಕ್ ಮಾಡಿದ್ದು ಈ ವಿವಾದಕ್ಕೆ ಕಾರಣವಾಗಿತ್ತು. ವಿವಾದ ತಾರಕಕ್ಕೇರುತ್ತಿದ್ದಂತೆ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ ಯಾಮಿ, ಆ ವಿಡಿಯೋವನ್ನು ತಾವು ಪ್ರಜ್ಞಾಪೂರ್ವಕವಾಗಿ ಲೈಕ್ ಮಾಡಿಲ್ಲ ಎಂದು ಹೇಳಿದ್ದಾರೆ. ದಿನನಿತ್ಯ ನೂರಾರು ಪೋಸ್ಟ್‌ಗಳಲ್ಲಿ ತಮ್ಮನ್ನು ಟ್ಯಾಗ್ ಮಾಡಲಾಗುತ್ತದೆ, ಪ್ರಶಸ್ತಿ ಸಮಾರಂಭಕ್ಕೆ ಸಂಬಂಧಿಸಿದ ಟ್ಯಾಗ್ ಎಂದು ಭಾವಿಸಿ ಅಚಾನಕ್ಕಾಗಿ ಅಥವಾ ತಿಳಿಯದೇ ಅದು ಕ್ಲಿಕ್ ಆಗಿರಬಹುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕ್ಲಿಕ್‌ಬೈಟ್ ಸಂಸ್ಕೃತಿಯ ಈ ಜಗತ್ತಿನಲ್ಲಿ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಕೂಡ ಇಂತಹ ಸಣ್ಣ ವಿಷಯಗಳನ್ನು ಹಿಡಿದು ಕಾಫಿ ಟೇಬಲ್ ಗಾಸಿಪ್ ಮಾಡುವುದು ಬೇಸರದ ಸಂಗತಿ. ತಾವು ಕಷ್ಟಪಟ್ಟು ಉತ್ತಮ ಹೆಸರು ಸಂಪಾದಿಸಿದ್ದು, ತಮಗೆ ಯಾವುದೇ ಪಿಆರ್ ತಂಡ ಇಲ್ಲ ಮತ್ತು ಮನರಂಜನಾ ಪ್ರಶಸ್ತಿಗಳ ಬಗ್ಗೆ ತಮ್ಮ ನಿಲುವು ಏನೆಂಬುದನ್ನು ಬಹಳ ಹಿಂದೆಯೇ ಸ್ಪಷ್ಟಪಡಿಸಿರುವುದಾಗಿ ಅವರು ತಿಳಿಸಿದ್ದಾರೆ.
ವಿವಾದ ಏನು?
ಮಾರ್ಚ್ 1ರಂದು ನಡೆದ ಜೀ ಸಿನಿ ಅವಾರ್ಡ್ಸ್‌ನಲ್ಲಿ 'ತೇರೆ ಇಷ್ಕ್ ಮೇನ್' ಚಿತ್ರದ ನಟನೆಗಾಗಿ ಕೃತಿ ಸನನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. ಇದೇ ವಿಭಾಗದಲ್ಲಿ ಯಾಮಿ ಗೌತಮ್ ಕೂಡ 'ಹಕ್' ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದ್ದರು. ಕೃತಿ ಅವರ ಗೆಲುವಿನ ನಂತರ, ಕೃತಿ ಪ್ರಶಸ್ತಿ ಹಿಡಿದು ಸಂಭ್ರಮಿಸುತ್ತಿರುವ ದೃಶ್ಯದ ಜೊತೆಗೆ ಹಳೆಯ ಸಂದರ್ಶನವೊಂದರಲ್ಲಿ ಯಾಮಿ ಅವರು "ನಾನು ಇನ್ನು ಮುಂದೆ ಪ್ರಶಸ್ತಿಗಳ ಮೂಲಕ ಮಾನ್ಯತೆಯನ್ನು ಹುಡುಕುವುದಿಲ್ಲ" ಎಂದು ಹೇಳಿದ್ದ ಮಾತನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ವಿಡಿಯೋವನ್ನು ಯಾಮಿ ಲೈಕ್ ಮಾಡಿದ್ದನ್ನು ಗಮನಿಸಿದ ಅಭಿಮಾನಿಗಳು, ಯಾಮಿ ಅವರು ಕೃತಿ ಬಗ್ಗೆ ಅಸೂಯೆ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದ್ದರು.
ಯಾಮಿ ಗೌತಮ್ ಅವರು ಇಮ್ರಾನ್ ಹಶ್ಮಿ ಜೊತೆಗಿನ 'ಶಾ ಬಾನೊ' ಪ್ರೇರಿತ ಲೀಗಲ್ ಥ್ರಿಲ್ಲರ್ ಮತ್ತು ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ ಕೃತಿ ಸನನ್ ಅವರು ಶಾಹಿದ್ ಕಪೂರ್ ಅವರೊಂದಿಗೆ 'ಕಾಕ್ಟೇಲ್ 2', 'ನೋ ಎಂಟ್ರಿ 2' ಮತ್ತು 'ಭೇಡಿಯಾ 2' ನಂತಹ ಬಹುನಿರೀಕ್ಷಿತ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

