
ಖ್ಯಾತ ನಟಿ ಅದಿತಿ ರಾವ್ ಹೈದರಿ ಪೇಯ್ಡ್ ನೆಗೆಟಿವಿಟಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಗಾಸಿಪ್‌ಗಳಿಗೆ ಕಿವಿಗೊಡಬೇಡಿ: ‘ಪೇಯ್ಡ್ ನೆಗೆಟಿವಿಟಿ’ ಬಗ್ಗೆ ನಟಿ ಅದಿತಿ ರಾವ್ ಹೈದರಿ ಆತಂಕ
ಖ್ಯಾತ ನಟಿ ಅದಿತಿ ರಾವ್ ಹೈದರಿ ಅವರು ಇತ್ತೀಚಿನ ಡಿಜಿಟಲ್ ಯುಗದಲ್ಲಿ ಸೆಲೆಬ್ರಿಟಿಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರ ಮತ್ತು ಪೇಯ್ಡ್ ನೆಗೆಟಿವಿಟಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ನಟಿ ಅದಿತಿ ರಾವ್ ಹೈದರಿ ಅವರು ಇತ್ತೀಚೆಗೆ ಗಾಸಿಪ್ ಹಾಗೂ ಸೆಲೆಬ್ರಿಟಿಗಳ ವಿರುದ್ಧ ನಡೆಯುವ ಅಪಪ್ರಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಎರಡು ದಶಕಗಳಾಗುತ್ತಾ ಬಂದರೂ, ಇಂದಿನ `ಪೇಯ್ಡ್ ನೆಗೆಟಿವಿಟಿ’ ಅಂದರೆ ಹಣ ನೀಡಿ ಹರಡಿಸುವ ನಕಾರಾತ್ಮಕ ಸುದ್ದಿಗಳು ತಮಗೆ ಅಚ್ಚರಿ ಮೂಡಿಸಿವೆ ಎಂದು ಅವರು ಹೇಳಿದ್ದಾರೆ.
ಡಿಜಿಟಲ್ ಕ್ರಾಂತಿಯ ಬಳಿಕ ಸುಳ್ಳು ಸುದ್ದಿಗಳು ಹರಡುವ ವೇಗ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ನಟಿ, ʻʻನಂಬಿಕಸ್ಥ ಎಂದು ಅಂದುಕೊಂಡಿರುವ ವೇದಿಕೆಗಳಲ್ಲೇ ಇಂದು ತಪ್ಪು ಮಾಹಿತಿಗಳು ಬಿತ್ತರವಾಗುತ್ತಿವೆ. ಇದು ನಟರ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತಿದ್ದು, ಕಲಾವಿದರ ಸುತ್ತಲಿದ್ದ ಒಂದು ಗೌಪ್ಯತೆ ಅಥವಾ ಕುತೂಹಲ ಈಗ ಮಾಯವಾಗುತ್ತಿದೆ. ನನ್ನ ಬಗ್ಗೆ ಬರುವ ಕಸದಂತಹ ಸುದ್ದಿಗಳನ್ನು ನಾನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತೇನೆ, ಏಕೆಂದರೆ ಅದರ ಹಿಂದೆ ಯಾವುದೋ ಒಂದು ಅಜೆಂಡಾ ಇರುತ್ತದೆ ಎಂಬುದು ನನಗೆ ತಿಳಿದಿದೆ" ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ತಾಯಿಯ ಮಾತೇ ದೈವವಾಕ್ಯ
ತಮ್ಮ ಮೇಲೆ ಬರುವ ಟೀಕೆಗಳನ್ನು ಎದುರಿಸುವ ಬಗ್ಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ತಮ್ಮ ತಾಯಿಯ ಮಾತೇ ತಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಯಾರಾದರೂ ಕೆಟ್ಟದಾಗಿ ನಡೆದುಕೊಂಡರೆ ಅದು ಅವರ ಸ್ವಭಾವದ ಸಮಸ್ಯೆಯೇ ಹೊರತು ನಮ್ಮದಲ್ಲ ಎಂದು ತಾಯಿ ಕಲಿಸಿದ ಪಾಠವೇ ತಮ್ಮನ್ನು ಸದಾ ದೃಢವಾಗಿರಿಸಿದೆ ಎಂದು ಅವರು ಸ್ಮರಿಸಿದ್ದಾರೆ. ವೃತ್ತಿಜೀವನದ ಏರಿಳಿತಗಳ ನಡುವೆಯೂ ಸಕಾರಾತ್ಮಕವಾಗಿ ಉಳಿಯುವುದು ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಚಿತ್ರರಂಗದಲ್ಲಿ ಹೊರಗಿನವರ ಹೋರಾಟ
ಚಿತ್ರರಂಗದಲ್ಲಿ 'ಹೊರಗಿನವರು' ಎದುರಿಸುವ ಸವಾಲುಗಳ ಬಗ್ಗೆಯೂ ಅದಿತಿ ಮುಕ್ತವಾಗಿ ಮಾತನಾಡಿದ್ದಾರೆ. ಹಿಟ್ ಸಿನಿಮಾಗಳನ್ನು ನೀಡಿದರೂ ಸಹ, ಚಿತ್ರರಂಗದ ಹಿನ್ನೆಲೆ ಇಲ್ಲದವರಿಗೆ ಮುಂದಿನ ಅವಕಾಶಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಪ್ರತಿಭೆಯು ಗೆಲುವು-ಸೋಲನ್ನು ಮೀರಿರುತ್ತದೆ, ಆದರೆ ವಾಣಿಜ್ಯ ಯಶಸ್ಸು ಮಾತ್ರ ಹೊಸ ಅವಕಾಶಗಳ ಹಾದಿಯನ್ನು ಸುಗಮಗೊಳಿಸುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಇತ್ತೀಚೆಗೆ 'ಹೀರಾಮಂಡಿ' ಸರಣಿಯ ಮೂಲಕ ಜನಪ್ರಿಯತೆ ಗಳಿಸಿರುವ ಅದಿತಿ, ಉತ್ತಮ ಸ್ಕ್ರಿಪ್ಟ್‌ಗಳಿಗಾಗಿ ಕಾಯುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ಇತ್ತೀಚೆಗೆ 'ಹೀರಾಮಂಡಿ' ಮೂಲಕ ಸದ್ದು ಮಾಡಿದ್ದ ಅದಿತಿ, ಗುಣಮಟ್ಟದ ಕಥೆಗಳಿಗಾಗಿ ತಮ್ಮ ಹುಡುಕಾಟ ಮುಂದುವರಿಯಲಿದೆ ಎಂದಿದ್ದಾರೆ.

