ಸಿಂಪಲ್‌ ಬ್ಯೂಟಿ ಕ್ವೀನ್‌ ಸಾಯಿ ಪಲ್ಲವಿ ಸುತ್ತ ಯಾಕಿಷ್ಟು ನೆಗೆಟಿವಿಟಿ?
x

ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆಯಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.

ಸಿಂಪಲ್‌ ಬ್ಯೂಟಿ ಕ್ವೀನ್‌ ಸಾಯಿ ಪಲ್ಲವಿ ಸುತ್ತ ಯಾಕಿಷ್ಟು ನೆಗೆಟಿವಿಟಿ?

ಬಾಲಿವುಡ್‌ನ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ 'ರಾಮಾಯಣ'ದಲ್ಲಿ ಸೀತೆಯ ಪಾತ್ರಕ್ಕೆ ಆಯ್ಕೆಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಈಗ ವಿವಾದದಲ್ಲಿ ಸಿಲುಕಿದ್ದಾರೆ.


Click the Play button to hear this message in audio format

ಬಿಗ್ ಬಜೆಟ್ ಸಿನಿಮಾ 'ರಾಮಾಯಣ' ಚಿತ್ರದ ಸೀತೆ ಪಾತ್ರಕ್ಕೆ ಆಯ್ಕೆಯಾಗಿರುವ ನಟಿ ಸಾಯಿ ಪಲ್ಲವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ಕೇಳಿಬರುತ್ತಿವೆ. ಕಳೆದ ದಶಕದಲ್ಲಿ ತೆಲುಗು ಮತ್ತು ದಕ್ಷಿಣ ಭಾರತದಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ಸಾಯಿ ಪಲ್ಲವಿ, ಈಗ ಕೆಲವೊಂದು ಹಳೆಯ ವಿವಾದಗಳಿಂದಾಗಿ ಮತ್ತೆ ಟ್ರೋಲಿಗರ ಗುರಿಯಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಅವರು ನೀಡಿದ್ದ "ಪಾಕಿಸ್ತಾನದ ಜನರೂ ನಮ್ಮಂತೆಯೇ ಮನುಷ್ಯರು" ಎಂಬ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಕಾರಣಕ್ಕಾಗಿಯೇ ಅವರನ್ನು ಸೀತೆಯ ಪಾತ್ರಕ್ಕೆ ಆಯ್ಕೆ ಮಾಡಿರುವುದನ್ನು ಒಂದು ವರ್ಗದ ಜನರು ವಿರೋಧಿಸುತ್ತಿದ್ದಾರೆ. ಇತ್ತೀಚೆಗೆ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ-ಸೀತೆಯ ರೂಪದಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆರಂಭದಲ್ಲಿ ಇದು ಚಿತ್ರದ ಶೂಟಿಂಗ್ ಸೆಟ್‌ನಿಂದ ಸೋರಿಕೆಯಾದ ಚಿತ್ರ ಎಂದು ನಂಬಲಾಗಿತ್ತು. ಆದರೆ, ವಾಸ್ತವದಲ್ಲಿ ಅದು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾದ ನಕಲಿ ಚಿತ್ರವಾಗಿತ್ತು.

ದುರದೃಷ್ಟವಶಾತ್, ಸತ್ಯಾಸತ್ಯತೆ ತಿಳಿಯದ ಅನೇಕ ನೆಟ್ಟಿಗರು ಈ AI ಚಿತ್ರವನ್ನೇ ಆಧಾರವಾಗಿಟ್ಟುಕೊಂಡು ಸಾಯಿ ಪಲ್ಲವಿ ಈ ಪಾತ್ರಕ್ಕೆ ಸರಿಹೊಂದುವುದಿಲ್ಲ ಎಂದು ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ಸಾಕಷ್ಟು ಸಮಯ ಬಾಕಿ ಇರುವಾಗಲೇ ಈ ಮಟ್ಟದ ವಿರೋಧ ವ್ಯಕ್ತವಾಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾಯಿ ಪಲ್ಲವಿ ಅವರ ನಟನಾ ಕೌಶಲದ ಬಗ್ಗೆ ಯಾರಿಗೂ ಅನುಮಾನವಿಲ್ಲದಿದ್ದರೂ, ಸೈದ್ಧಾಂತಿಕ ಕಾರಣಗಳಿಗಾಗಿ ಅವರ ಮೇಲೆ ಟ್ರೋಲ್‌ ಮಾಡುತ್ತಿದ್ದಾರೆ.

ಸಾಯಿ ಪಲ್ಲವಿ ಅವರು ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದರಲ್ಲಿನ ಮಲರ್ ಟೀಚರ್ ಪಾತ್ರ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತು. ನಂತರ ಅವರು ದುಲ್ಕರ್ ಸಲ್ಮಾನ್ ಜೊತೆ 'ಕಾಲಿ' ಚಿತ್ರದಲ್ಲಿ ನಟಿಸಿದರು. ತೆಲುಗು ಚಿತ್ರರಂಗಕ್ಕೆ 'ಫಿದಾ' ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಅವರು, ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರದ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. ಮುಂದೆ ನಾನಿ ಜೊತೆ 'ಮಿಡಲ್ ಕ್ಲಾಸ್ ಅಬ್ಬಾಯಿ', ಶರ್ವಾನಂದ್ ಜೊತೆ 'ಪಡಿ ಪಡಿ ಲೆಚೆ ಮನಸು' ಮತ್ತು ವರುಣ್ ತೇಜ್ ಜೊತೆ ಮತ್ತೊಮ್ಮೆ ತೆಲುಗು ಪರದೆಯ ಮೇಲೆ ಮಿಂಚಿದರು.

ತಮಿಳಿನಲ್ಲಿ ಧನುಷ್ ನಟನೆಯ 'ಮಾರಿ 2' ಚಿತ್ರದ 'ರೌಡಿ ಬೇಬಿ' ಹಾಡು ಇಡೀ ವಿಶ್ವದಾದ್ಯಂತ ಸದ್ದು ಮಾಡಿತು. ಸೂರ್ಯ ಅವರ ಜೊತೆ 'ಎನ್.ಜಿ.ಕೆ' ಹಾಗೂ ಸಾಯಿ ಧರಮ್ ತೇಜ್ ಜೊತೆಗಿನ ಚಿತ್ರಗಳಲ್ಲಿಯೂ ಅವರು ಕಾಣಿಸಿಕೊಂಡರು. ನಂತರದ 'ಲವ್ ಸ್ಟೋರಿ', 'ಶ್ಯಾಮ್ ಸಿಂಗ ರಾಯ್' ಮತ್ತು 'ವಿರಾಟ ಪರ್ವಂ' ಸಿನಿಮಾಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ವಿಶೇಷವಾಗಿ 'ಗರ್ಗಿ' ಚಿತ್ರದಲ್ಲಿನ ಅವರ ಅಭಿನಯ ವಿಮರ್ಶಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಶಿವಕಾರ್ತಿಕೇಯನ್ ಜೊತೆಗಿನ 'ಅಮರನ್' ನಾಗ ಚೈತನ್ಯ ಜೊತೆಗಿನ 'ತಂಡೇಲ್' ಸಿನಿಮಾದಲ್ಲಿ ಅವರ ನಟನೆ ಮರೆಯುವಂತಿಲ್ಲ. ಸದ್ಯ ಬಾಲಿವುಡ್‌ನ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಸೀತೆಯಾಗಿ ಮತ್ತು ಜುನೈದ್ ಖಾನ್ ಜೊತೆಗಿನ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೂ ಅವರು ಕಾಲಿಡುತ್ತಿದ್ದಾರೆ.

Read More
Next Story