
ನಿರ್ಮಾಪಕ ಕಲ್ಪತಿ ಸುರೇಶ್ ಪುತ್ರನ ಆರತಕ್ಷತೆಯಲ್ಲಿ ವಿಜಯ್-ತ್ರಿಶಾ ಜೋಡಿ
ಪತ್ನಿಯಿಂದ ಡಿವೋರ್ಸ್ ನೋಟಿಸ್ ಬೆನ್ನಲ್ಲೇ ತ್ರಿಶಾ ಜೊತೆ ಕಾಣಿಸಿಕೊಂಡ ವಿಜಯ್
ತಮಿಳು ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನದ ವದಂತಿಗಳ ನಡುವೆಯೇ, ನಟಿ ತ್ರಿಶಾ ಜೊತೆ ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಅವರ ಸಂಬಂಧದ ಬಗ್ಗೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಮಾತುಗಳಿಗೆ ಇದೀಗ ಹೊಸ ಪುಷ್ಟಿ ಸಿಕ್ಕಂತಾಗಿದೆ. ಚೆನ್ನೈನಲ್ಲಿ ಗುರುವಾರ ನಡೆದ ಖ್ಯಾತ ಚಿತ್ರ ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಅವರ ಪುತ್ರನ ವಿವಾಹ ಆರತಕ್ಷತೆಯಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ವಿಶೇಷವೆಂದರೆ, ನಟ ವಿಜಯ್ ಅವರ ಪತ್ನಿ ಸಂಗೀತಾ ಅವರು ಇತ್ತೀಚೆಗಷ್ಟೇ ವಿಜಯ್ ವಿರುದ್ಧ ಅಕ್ರಮ ಸಂಬಂಧದ ಆರೋಪ ಹೊರಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಈ ವಿವಾದದ ಬೆನ್ನಲ್ಲೇ ವಿಜಯ್ ಮತ್ತು ತ್ರಿಶಾ ಸಾರ್ವಜನಿಕವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಸಮಾರಂಭಕ್ಕೆ ಒಂದೇ ಕಾರಿನಲ್ಲಿ ಆಗಮಿಸಿದ ಈ ಜೋಡಿ, ವೇದಿಕೆಯ ಮೇಲೆ ನವಜೋಡಿಗೆ ಶುಭ ಹಾರೈಸುವಾಗಲೂ ಪಕ್ಕದಲ್ಲೇ ನಿಂತು ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಇಬ್ಬರೂ ಜೊತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅವರ ಸಂಬಂಧದ ಅಧಿಕೃತ ಘೋಷಣೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಕಳೆದ ವರ್ಷ ವಿಜಯ್ ಹುಟ್ಟುಹಬ್ಬದಂದು ತ್ರಿಶಾ ಹಂಚಿಕೊಂಡಿದ್ದ ವಿಶೇಷ ಶುಭಾಶಯದ ಪೋಸ್ಟ್ ಈ ಎಲ್ಲಾ ಚರ್ಚೆಗಳಿಗೆ ಮೂಲ ಕಾರಣವಾಗಿತ್ತು. 'ಗಿಲ್ಲಿ', 'ತಿರುಪಾಚಿ', 'ಆತಿ' ಮತ್ತು 'ಕುರುವಿ'ಯಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿರುವ ಈ ಜೋಡಿ ಸುಮಾರು ಎರಡು ದಶಕಗಳಿಂದ ಪರಸ್ಪರ ಪರಿಚಿತರು. ಕಳೆದ ವರ್ಷ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ತ್ರಿಶಾ ಅವರು ವಿಜಯ್ ಬಗ್ಗೆ ಅತೀವ ಮೆಚ್ಚುಗೆಯ ಮಾತುಗಳನ್ನಾಡಿದ್ದರು. "ಅವರ ಹೊಸ ಪಯಣಕ್ಕೆ ಶುಭವಾಗಲಿ, ಅವರ ಪ್ರತಿಯೊಂದು ಕನಸು ನನಸಾಗಲಿ" ಎಂದು ಹಾರೈಸಿದ್ದರು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ವಿಜಯ್ ತಮ್ಮ ರಾಜಕೀಯ ಜೀವನದ ದೃಷ್ಟಿಯಿಂದ ವಿಚ್ಛೇದನದ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆ ಎಂದು ವಾದಿಸಿದರೆ, ಇನ್ನು ಕೆಲವರು ಅವರ ಮಕ್ಕಳ ಭವಿಷ್ಯಕ್ಕಾಗಿ ಅಧಿಕೃತವಾಗಿ ದೂರಾಗಿಲ್ಲ ಎನ್ನುತ್ತಿದ್ದಾರೆ. ಆದರೆ ಈ ವದಂತಿಗಳ ಬಗ್ಗೆ ನಟ ವಿಜಯ್ ಆಗಲಿ ಅಥವಾ ನಟಿ ತ್ರಿಶಾ ಆಗಲಿ ಇದುವರೆಗೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

