
. ಈ ತಾರಾ ಜೋಡಿಯ ಮದುವೆಗೆ ಆಯ್ದ 100 ಜನರಿಗೆ ಮಾತ್ರ ಆಮಂತ್ರಣ ನೀಡಲಾಗಿದ್ದು, ಚಿತ್ರರಂಗದ ಕೆಲವೇ ಕೆಲವು ಆಪ್ತ ಸ್ನೇಹಿತರು ಈಗಾಗಲೇ ಉದಯಪುರ ತಲುಪಿದ್ದಾರೆ.
ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ವಿವಾಹ- ಉದಯಪುರಕ್ಕೆ ಗಣ್ಯರ ಆಗಮನ
ಕೊನೆಗೂ ಹಸೆಮಣೆ ಏರುತ್ತಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ರಾಜಸ್ಥಾನದ ಉದಯಪುರದಲ್ಲಿ ಸಡಗರದಿಂದ ನಡೆಯುತ್ತಿವೆ.
ದಕ್ಷಿಣ ಭಾರತದ ಖ್ಯಾತ ನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ರಾಜಸ್ಥಾನದ ಉದಯಪುರದಲ್ಲಿ ಇಂದಿನಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ಆರಂಭಗೊಂಡಿವೆ. ಈ ತಾರಾ ಜೋಡಿಯ ಮದುವೆಗೆ ಆಯ್ದ 100 ಜನರಿಗೆ ಮಾತ್ರ ಆಮಂತ್ರಣ ನೀಡಲಾಗಿದ್ದು, ಚಿತ್ರರಂಗದ ಕೆಲವೇ ಕೆಲವು ಆಪ್ತ ಸ್ನೇಹಿತರು ಈಗಾಗಲೇ ಉದಯಪುರ ತಲುಪಿದ್ದಾರೆ.
ಉದಯಪುರಕ್ಕೆ ಆಗಮಿಸಿದ ಖ್ಯಾತ ತಾರೆಯರು
ವಿಜಯ್ ದೇವರಕೊಂಡ ಅಭಿನಯದ ಹಿಟ್ ಚಿತ್ರ 'ಪೆಳ್ಳಿ ಚೂಪುಲು' ಖ್ಯಾತಿಯ ನಿರ್ದೇಶಕ ತರುಣ್ ಭಾಸ್ಕರ್ ಅವರು ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಅವರ ಜೊತೆಗೆ ನಟಿ ಈಶಾ ರೆಬ್ಬಾ ಕೂಡ ಕಾಣಿಸಿಕೊಂಡಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರ ಆಪ್ತ ಗೆಳತಿ ಹಾಗೂ ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್ ಅವರು ಉದಯಪುರ ವಿಮಾನ ನಿಲ್ದಾಣದಲ್ಲಿ ಕಂಡುಬಂದಿದ್ದು, ಮದುವೆಯ ಕಳೆ ಹೆಚ್ಚಿಸಿದ್ದಾರೆ.
ರಶ್ಮಿಕಾ ಅಭಿನಯದ 'ದಿ ಗರ್ಲ್‌ಫ್ರೆಂಡ್' ಚಿತ್ರದ ನಿರ್ದೇಶಕ ರಾಹುಲ್ ರವೀಂದ್ರನ್ ಹಾಗೂ ದಂಪತಿಯ ಆಪ್ತ ವಸ್ತ್ರ ವಿನ್ಯಾಸಕಿ ಶ್ರವ್ಯಾ ವರ್ಮಾ ಕೂಡ ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.
'ವಿರೋಶ್' ಪ್ರೀಮಿಯರ್ ಲೀಗ್
ಈ ಮದುವೆ ಕಾರ್ಯಕ್ರಮಗಳು ಕೇವಲ ಸಂಪ್ರದಾಯಕ್ಕೆ ಸೀಮಿತವಾಗದೆ, ಅತ್ಯಂತ ಮೋಜು-ಮಸ್ತಿಯಿಂದ ಕೂಡಿವೆ. ವಿಜಯ್ ಮತ್ತು ರಶ್ಮಿಕಾ ತಮ್ಮ ಮದುವೆಗೆಂದೇ ವಿಶೇಷವಾಗಿ 'ವಿರೋಶ್ ಪ್ರೀಮಿಯರ್ ಲೀಗ್' ಎಂಬ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗಾಗಿ ನಡೆದ ಈ ಕ್ರಿಕೆಟ್ ಪಂದ್ಯದಲ್ಲಿ ಬಳಸಿದ ಬ್ಯಾಟ್ ಮೇಲೆ ದಂಪತಿಯ ಹೆಸರು ಹಾಗೂ ಮದುವೆಯ ದಿನಾಂಕವನ್ನು ಕೆತ್ತಿಸಿರುವುದು ವಿಶೇಷವಾಗಿತ್ತು.
ಉದಯಪುರ ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಅತ್ಯಂತ ಐಷಾರಾಮಿ 'ಐಟಿಸಿ ಮೆಮೆಂಟೋಸ್' ಹೋಟೆಲ್‌ನಲ್ಲಿ ಈ ವಿವಾಹ ಮಹೋತ್ಸವ ನಡೆಯುತ್ತಿದೆ. ಸುಮಾರು 117 ಖಾಸಗಿ ವಿಲ್ಲಾಗಳನ್ನು ಹೊಂದಿರುವ ಈ ಹೋಟೆಲ್ ಸುತ್ತಲೂ ನದಿ ಮತ್ತು ಸರೋವರಗಳಿದ್ದು, ಅತ್ಯಂತ ಸುಂದರ ಪ್ರಕೃತಿಯ ನಡುವೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫೆಬ್ರವರಿ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ವಿವಿಧ ವಿಧಿವಿಧಾನಗಳು ನಡೆಯಲಿದ್ದು, ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ವಿವಾಹ ನೆರವೇರಲಿದೆ ಎಂದು ತಿಳಿದುಬಂದಿದೆ.
ಗೀತಾ ಗೋವಿಂದಂ ಸಿನಿಮಾದ ಹಾಡಿಗೆ ನೃತ್ಯ?
ಇಂದು ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಈ ಜೋಡಿಯು ವಿಶೇಷ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಜೂಮ್ ಸಂಸ್ಥೆಯು ವಿಶೇಷವಾಗಿ ವರದಿ ಮಾಡಿದೆ. ರಶ್ಮಿಕಾ ಮತ್ತು ವಿಜಯ್ ಅವರ ಈ ಜೋಡಿ ನೃತ್ಯಕ್ಕಾಗಿ ಅವರದ್ದೇ ಅಭಿನಯದ ಸೂಪರ್ ಹಿಟ್ ಚಿತ್ರ 'ಗೀತಾ ಗೋವಿಂದಂ' ಸಿನಿಮಾದ 'ಇಂಕೇಂ ಇಂಕೇಂ ಇಂಕೇಂ ಕಾವಾಲೆ' ಹಾಡನ್ನು ಆಯ್ಕೆ ಮಾಡಲಾಗಿದ್ದು, ಅದಕ್ಕೆ ವಿಶೇಷವಾಗಿ ನೃತ್ಯ ಸಂಯೋಜನೆ ಮಾಡಲಾಗಿದೆ ಎಂಬ ಮಾಹಿತಿ ಇದೆ.
ಮಾರ್ಚ್ 3 ರಂದು ವಿವಾಹ ಆರತಕ್ಷತೆ?
ವರದಿಗಳ ಪ್ರಕಾರ ವಿಜಯ್ ಮತ್ತು ರಶ್ಮಿಕಾ ಅವರ ಅದ್ಧೂರಿ ಆರತಕ್ಷತೆ ಮಾರ್ಚ್ 3 ರಂದು ತಾಜ್ ಕೃಷ್ಣಾದಲ್ಲಿ ನಡೆಯುವ ಸಾಧ್ಯತೆಯಿದೆ. ಉದ್ಯಮದ ಜನರಿಂದ ಹಿಡಿದು ರಾಜಕಾರಣಿಗಳು ಮತ್ತು ಇತರ ವಿಐಪಿಗಳವರೆಗೆ, ಹಲವಾರು ಉನ್ನತ ವ್ಯಕ್ತಿಗಳು ಆರತಕ್ಷತೆಗೆ ಹಾಜರಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

