
ಮಾಮಲ್ಲಪುರಂನಲ್ಲಿ ಶಿಸ್ತಿನ ಇಫ್ತಾರ್ ನಡೆಸಿದ ವಿಜಯ್
Thalapathy Vijay| ಈ ಬಾರಿ ಸೈಲೆಂಟ್ ಆಗಿ 'ಇಫ್ತಾರ್' ನಡೆಸಿದ ದಳಪತಿ ವಿಜಯ್
ಕಳೆದ ವರ್ಷದ ವಿವಾದದಿಂದ ಪಾಠ ಕಲಿತ ಟಿವಿಕೆ ಅಧ್ಯಕ್ಷ ವಿಜಯ್, ಈ ಬಾರಿ ಮಾಮಲ್ಲಪುರಂನಲ್ಲಿ ಅತ್ಯಂತ ಶಿಸ್ತುಬದ್ಧ ಹಾಗೂ ಸೀಮಿತ ಅತಿಥಿಗಳೊಂದಿಗೆ ಇಫ್ತಾರ್ ಕೂಟ ನಡೆಸಿದ್ದಾರೆ.
ಚೆನ್ನೈನಲ್ಲಿ ಕಳೆದ ವರ್ಷ ನಡೆದ ಇಫ್ತಾರ್ ಕೂಟವು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಈ ಬಾರಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಬುಧವಾರ ಸಂಜೆ ಮಾಮಲ್ಲಪುರಂನಲ್ಲಿ ನಡೆದ ವಿಶೇಷ ಇಫ್ತಾರ್ ಕೂಟವು ಶಿಸ್ತು ಮತ್ತು ಪೂರ್ವ ಯೋಜಿತ ವ್ಯವಸ್ಥೆಗೆ ಸಾಕ್ಷಿಯಾಯಿತು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣಾ ಆಯೋಗದ ಅನುಮತಿ ಪಡೆದು ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮಕ್ಕೆ ಕೇವಲ ಒಂದು ಸಾವಿರ ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ತಮಿಳುನಾಡಿನಾದ್ಯಂತ ಆಯ್ದ ಅತಿಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಸ್ಥಳದಲ್ಲಿ ಯಾರಿಗೂ ಹೊಸದಾಗಿ ಪ್ರವೇಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.
ಕಳೆದ ವರ್ಷ ರಾಯಪೇಟೆಯ ವೈಎಂಸಿಎ ಮೈದಾನದಲ್ಲಿ ನಡೆದ ಕೂಟಕ್ಕೆ ಸುಮಾರು ಮೂರು ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ಈ ವೇಳೆ ಉಂಟಾದ ಗೊಂದಲ ಹಾಗೂ ಸಂಘಟನಾ ವೈಫಲ್ಯದ ಬಗ್ಗೆ ಸುನ್ನತ್ ಜಮಾತ್ ಪೊಲೀಸ್ ದೂರು ದಾಖಲಿಸಿತ್ತು. ಅಲ್ಲದೆ ಬರೇಲಿಯ ಸುನ್ನಿ ಮುಸ್ಲಿಂ ಸಂಘಟನೆಯೊಂದು ವಿಜಯ್ ವಿರುದ್ಧ ಫತ್ವಾ ಹೊರಡಿಸಿತ್ತು. ಈ ಎಲ್ಲ ಕಹಿ ಘಟನೆಗಳಿಂದ ಪಾಠ ಕಲಿತಿರುವ ವಿಜಯ್, ಈ ಬಾರಿ ಹೋಟೆಲ್ನಲ್ಲಿ ಸೀಮಿತ ಸಂಖ್ಯೆಯ ಅತಿಥಿಗಳೊಂದಿಗೆ ಶಾಂತಿಯುತವಾಗಿ ಕಾರ್ಯಕ್ರಮ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ನೇರ ಪ್ರಸಾರದ ಮೂಲಕ ಅಭಿಮಾನಿಗಳಿಗೆ ಮನೆಯಿಂದಲೇ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಸಜ್ಜಾಗುತ್ತಿರುವ ವಿಜಯ್, ತಮ್ಮ ಕೊನೆಯ ಸಿನಿಮಾ 'ಜನನಾಯಕನ್' ಬಿಡುಗಡೆಯ ಬಳಿಕ ಪೂರ್ಣ ಪ್ರಮಾಣದ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ತಲುಪುವ ವಿಜಯ್ ಅವರ ಈ ಪ್ರಯತ್ನವು ಈ ಬಾರಿ ಯಾವುದೇ ವಿವಾದಕ್ಕೆ ಅವಕಾಶ ನೀಡದಂತೆ ಬಹಳ ಯೋಜಿತವಾಗಿ ನಡೆದಿದೆ.
ಚುನಾವಣಾ ಆಯೋಗದ ಅಂಗಳಕ್ಕೆ 'ಜನ ನಾಯಕನ್' ಸಿನಿಮಾ
ವಿಜಯ್ ದಳಪತಿ ಅವರ ಕೊನೆಯ ಸಿನಿಮಾ 'ಜನ ನಾಯಕನ್' ಸಿನಿಮಾ ಸೆನ್ಸಾರ್ ಮಂಡಳಿಯ ಕಠಿಣ ನಿಯಮಗಳ ನಡುವೆ ಸಿಲುಕಿಕೊಂಡಿದ್ದು, ಇದೀಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (CBFC) ಈ ಚಿತ್ರವನ್ನು ಭಾರತೀಯ ಚುನಾವಣಾ ಆಯೋಗದ ಪರಿಶೀಲನೆಗೆ ಶಿಫಾರಸು ಮಾಡಿದೆ ಎಂಬ ಮಾಹಿತಿ ಇದೆ. ಈ ಸಿನಿಮಾ ಜನವರಿ 9ರಂದೇ ತೆರೆಗೆ ಬರಬೇಕಿತ್ತು. ಆದರೆ ಚಿತ್ರದಲ್ಲಿರುವ ಅತ್ಯಂತ ಸಂವೇದನಾಶೀಲ ರಾಜಕೀಯ ಸಂಭಾಷಣೆಗಳು ಮತ್ತು ದೃಶ್ಯಗಳ ಕಾರಣದಿಂದಾಗಿ ಕಳೆದ ಹಲವು ತಿಂಗಳುಗಳಿಂದ ಚಿತ್ರದ ಬಿಡುಗಡೆ ಸ್ಥಗಿತಗೊಂಡಿದೆ.
ಮಾರ್ಚ್ 17 ರಂದು ಮುಂಬೈನಲ್ಲಿ ನಡೆದ ವಿಶೇಷ ಮರು-ಸೆನ್ಸಾರ್ ಪ್ರಕ್ರಿಯೆಯಲ್ಲಿ ತಮಿಳುನಾಡಿನ ಅಧಿಕಾರಿಗಳನ್ನೊಳಗೊಂಡ ಸಮಿತಿಯು ಚಿತ್ರವನ್ನು ವೀಕ್ಷಿಸಿದೆ. ತಮಿಳುನಾಡಿನಲ್ಲಿ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಈ ಚಿತ್ರದ ವಿಷಯಗಳು ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕವನ್ನು ಮಂಡಳಿಯು ವ್ಯಕ್ತಪಡಿಸಿದೆ. ದಳಪತಿ ವಿಜಯ್ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಈ ಹಿಂದೆ ಚಿತ್ರತಂಡವು ಸೆನ್ಸಾರ್ ವಿಳಂಬದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತ್ತಾದರೂ, ನಂತರ ಅರ್ಜಿಯನ್ನು ಹಿಂಪಡೆದು ಮರು-ಪರಿಶೀಲನೆಗೆ ಒಪ್ಪಿಕೊಂಡಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗದ ಒಪ್ಪಿಗೆ ಸಿಗುವುದು ಅನಿವಾರ್ಯವಾಗಿದ್ದು, ಚಿತ್ರದ ಭವಿಷ್ಯ ಈಗ ಆಯೋಗದ ಕೈಯಲ್ಲಿದೆ. ಅನಿರುದ್ಧ್ ರವಿಚಂದರ್ ಸಂಗೀತದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಅವರಂತಹ ದೊಡ್ಡ ತಾರಾಗಣವಿರುವ ಈ ಚಿತ್ರವು ಈಗ ಚುನಾವಣೆಯ ನಂತರ ಅಂದರೆ ಮೇ ಅಥವಾ ಜೂನ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸಿನಿವಲಯದಲ್ಲಿ ಚರ್ಚೆಯಾಗುತ್ತಿದೆ.

