
ತುಂಬಾಡ್ 2 ಸಿನಿತಂಡಕ್ಕೆ ಹಾಲಿವುಡ್ ತಂತ್ರಜ್ಞರು ಸೇರಿಕೊಂಡಿದ್ದಾರೆ.
Tumbbad 2| ತುಂಬಾಡ್ 2 ಚಿತ್ರತಂಡ ಸೇರಿದ ಹಾಲಿವುಡ್‌ನ 'ಹ್ಯಾರಿ ಪಾಟರ್' ತಂತ್ರಜ್ಞರು
'ಹ್ಯಾರಿ ಪಾಟರ್', 'ಸ್ಟಾರ್ ವಾರ್ಸ್' ಚಿತ್ರಗಳಿಗೆ ಕೆಲಸ ಮಾಡಿರುವ ಪ್ರಾಸ್ಥೆಟಿಕ್ ಡಿಸೈನರ್ ಶಾನ್ ಹ್ಯಾರಿಸನ್ ಈಗ ತುಂಬಾಡ್ ತಂಡವನ್ನು ಸೇರಿಕೊಂಡಿದ್ದಾರೆ.
ಖ್ಯಾತ ನಟ ಮತ್ತು ನಿರ್ಮಾಪಕ ಸೋಹಮ್ ಶಾ ನಟನೆಯ 'ತುಂಬಾಡ್' ಚಿತ್ರದ ಮುಂದುವರಿದ ಭಾಗದ ಬಗ್ಗೆ ಈಗ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. 2018ರಲ್ಲಿ ತೆರೆಕಂಡು ನಂತರ ಕಲ್ಟ್ ಕ್ಲಾಸಿಕ್ ಎನಿಸಿಕೊಂಡ ಈ ಹಾರರ್ ಥ್ರಿಲ್ಲರ್ ಸೀಕ್ವೆಲ್‌ನಲ್ಲಿ ಈಗ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳು ಕೈಜೋಡಿಸುತ್ತಿರುವುದಾಗಿ ವರದಿಯಾಗಿದೆ.
ತುಂಬಾಡ್ 2 ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರ ಎಂಟ್ರಿ
ಬಾಲಿವುಡ್ ಮೂಲಗಳ ಪ್ರಕಾರ, ಲಾಸ್ ಏಂಜಲೀಸ್ ಮೂಲದ ಪ್ರಸಿದ್ಧ ಕಾನ್ಸೆಪ್ಟ್ ಆರ್ಟಿಸ್ಟ್ ಮತ್ತು ಕ್ರೀಚರ್ ಡಿಸೈನರ್ ಸೈಮನ್ ಲೀ ಹಾಗೂ ಖ್ಯಾತ ಪ್ರಾಸ್ಥೆಟಿಕ್ ಡಿಸೈನರ್ ಶಾನ್ ಹ್ಯಾರಿಸನ್ ಈ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ತುಂಬಾಡ್ ಚಿತ್ರದ ವಿಭಿನ್ನ ಪುರಾಣ ಕಥೆ ಮತ್ತು ವಾತಾವರಣಕ್ಕೆ ತಕ್ಕಂತೆ, ಈ ಬಾರಿ ದೃಶ್ಯ ವೈಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಚಿತ್ರತಂಡ ಯೋಜಿಸಿದೆ. ಸೈಮನ್ ಲೀ ಈ ಹಿಂದೆ 'ಗಾಡ್ಜಿಲ್ಲಾ ವರ್ಸಸ್ ಕಾಂಗ್', 'ಪೆಸಿಫಿಕ್ ರಿಮ್' ಮತ್ತು 'ಲಾರ್ಡ್ ಆಫ್ ದಿ ರಿಂಗ್ಸ್' ನಂತಹ ಬೃಹತ್ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನು ಶಾನ್ ಹ್ಯಾರಿಸನ್ ಅವರು 'ಹ್ಯಾರಿ ಪಾಟರ್', 'ಸ್ಟಾರ್ ವಾರ್ಸ್' ಮತ್ತು 'ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್' ನಂತಹ ಜಾಗತಿಕ ಮಟ್ಟದ ಚಿತ್ರಗಳಿಗೆ ಪ್ರಾಸ್ಥೆಟಿಕ್ ಡಿಸೈನ್ ಮಾಡಿದ್ದಾರೆ.
ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಸಹಯೋಗ
ಸೋಹಮ್ ಶಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಸಿದ್ಧವಾಗುತ್ತಿದ್ದು, ಖ್ಯಾತ ನಿರ್ಮಾಪಕ ಡಾ. ಜಯಂತಿಲಾಲ್ ಗಡಾ ಅವರ ಪೆನ್ ಸ್ಟುಡಿಯೋಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಇನ್ನು ಚಿತ್ರದ ವಿಲನ್ ಪಾತ್ರದ ಬಗ್ಗೆಯೂ ಭಾರಿ ಚರ್ಚೆ ನಡೆಯುತ್ತಿದ್ದು, ಬಾಲಿವುಡ್ನ ಖ್ಯಾತ ನಟರಾದ ಅಕ್ಷಯ್ ಖನ್ನಾ ಅಥವಾ ನವಾಜುದ್ದೀನ್ ಸಿದ್ದಿಕಿ ಇಬ್ಬರಲ್ಲಿ ಒಬ್ಬರು ಈ ಪ್ರಬಲ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಬಾಕಿ ಇದೆ.
ಬಾಕ್ಸ್ ಆಫೀಸ್‌ನಲಲ್ಲಿ ಮ್ಯಾಜಿಕ್ ಮಾಡಿದ್ದ 'ತುಂಬಾಡ್'
ರಾಹಿ ಅನಿಲ್ ಬಾರ್ವೆ ನಿರ್ದೇಶನದ ಮೊದಲ ಭಾಗವು ಹಸ್ತರ್ ಎಂಬ ಕಾಲ್ಪನಿಕ ದೈವ ಮತ್ತು ನಿಧಿಯ ಆಸೆಯ ಸುತ್ತ ಸಾಗಿತ್ತು. 2018ರಲ್ಲಿ ಬಿಡುಗಡೆಯಾದಾಗ ಸಾಧಾರಣ ಯಶಸ್ಸು ಕಂಡಿದ್ದ ಈ ಚಿತ್ರ, 2024ರಲ್ಲಿ ಮರು ಬಿಡುಗಡೆಯಾದಾಗ ಹೊಸ ದಾಖಲೆ ಬರೆದಿತ್ತು. ಕೇವಲ ಏಳು ದಿನಗಳಲ್ಲಿ ಮೂಲ ಸಂಗ್ರಹಕ್ಕಿಂತ ಹೆಚ್ಚಿನ ಹಣ ಗಳಿಸಿ, ಒಟ್ಟಾರೆ ಸುಮಾರು 38 ಕೋಟಿ ರೂಪಾಯಿ ಲಾಭ ತಂದುಕೊಡುವ ಮೂಲಕ ಈ ಸಿನಿಮಾ ಸಕ್ಸಸ್ ಕಂಡಿದೆ. ಇದೇ ಉತ್ಸಾಹದಲ್ಲಿ ಈಗ 'ತುಂಬಾಡ್ 2' ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

