
ನಿರ್ದೇಶಕ ಪಾರ್ಥಿಬನ್ ಅವರು ತ್ರಿಶಾ ಬಗ್ಗೆ ನೀಡಿದ ಹೇಳಿಕೆ ಈ ವಿವಾದಕ್ಕೆ ತುಪ್ಪ ಸುರಿದಂತಾಗಿದೆ.
ಮೈಕ್ರೋಫೋನ್ ಸಿಕ್ಕರೆ ಬುದ್ಧಿವಂತಿಕೆ ಬರುವುದಿಲ್ಲ, ಮೂರ್ಖತನ ಪ್ರದರ್ಶನವಷ್ಟೇ: ಪಾರ್ಥಿಬನ್ ವಿರುದ್ಧ ತ್ರಿಶಾ ಕಿಡಿ
ಮೈಕ್ರೋಫೋನ್ ಸಿಕ್ಕ ತಕ್ಷಣ ಆಡುವ ಮಾತುಗಳು ಬುದ್ಧಿವಂತಿಕೆಯಿಂದ ಕೂಡಿರುವುದಿಲ್ಲ, ಅದು ಕೇವಲ ಆ ವ್ಯಕ್ತಿಯ ಮೂರ್ಖತನವನ್ನು ಸಾರುತ್ತದೆ ಎಂದು ತ್ರಿಶಾ ಕಿಡಿಕಾರಿದ್ದಾರೆ.
ನಟಿ ತ್ರಿಶಾ ಮತ್ತು ನಟ ವಿಜಯ್ ಅವರ ಸುತ್ತ ಇತ್ತೀಚೆಗೆ ಹಬ್ಬಿರುವ ವಿವಾದಾತ್ಮಕ ಸುದ್ದಿಗಳು ತಮಿಳು ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿವೆ. ನಟ ವಿಜಯ್ ಅವರ ಪತ್ನಿ ಸಂಗೀತ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ತ್ರಿಶಾ ಈ ವಿಚಾರವಾಗಿ ಪರೋಕ್ಷವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ತ್ರಿಶಾ ಅವರ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಸಹನಟ ಹಾಗೂ ನಿರ್ದೇಶಕ ಪಾರ್ಥಿಬನ್ ಅವರು ನೀಡಿದ ಹೇಳಿಕೆ ಈ ವಿವಾದಕ್ಕೆ ತುಪ್ಪ ಸುರಿದಂತಾಗಿದೆ. ತ್ರಿಶಾ ಅವರ ಫೋಟೋ ನೋಡಿ ಪ್ರತಿಕ್ರಿಯಿಸಿದ ಪಾರ್ಥಿಬನ್,"ಈ ಕುಂದವೈ (ತ್ರಿಶಾ ಪಾತ್ರದ ಹೆಸರು) ಸ್ವಲ್ಪ ಸಮಯ ಮನೆಯಲ್ಲೇ ಇರುವುದು ಒಳ್ಳೆಯದು. ಅವರು ಹೊರಗೆ ಬರುವುದರಿಂದ ಅನಗತ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ," ಎಂದು ವ್ಯಂಗ್ಯವಾಡಿದ್ದರು. ಪಾರ್ಥಿಬನ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದವು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ತ್ರಿಶಾ, ತಮ್ಮ ಎಕ್ಸ್ ಖಾತೆಯಲ್ಲಿ ಪಾರ್ಥಿಬನ್ ಹೆಸರನ್ನು ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ. "ಮೈಕ್ರೋಫೋನ್ ಸಿಕ್ಕ ತಕ್ಷಣ ಆಡುವ ಮಾತುಗಳು ಬುದ್ಧಿವಂತಿಕೆಯಿಂದ ಕೂಡಿರುತ್ತವೆ ಅಥವಾ ಹಾಸ್ಯಮಯವಾಗಿರುತ್ತವೆ ಎಂದರ್ಥವಲ್ಲ. ಅದು ಕೇವಲ ಮೂರ್ಖತನವನ್ನು ಜೋರಾಗಿ ಪ್ರದರ್ಶಿಸುತ್ತದೆ ಅಷ್ಟೇ. ಜ್ಞಾನವಿಲ್ಲದೆ ಬಳಸುವ ಅಸಭ್ಯ ಪದಗಳು ಆ ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸುತ್ತದೆಯೇ ಹೊರತು, ಅದನ್ನು ಯಾರಿಗೆ ಗುರಿ ಮಾಡಲಾಗಿದೆಯೋ ಅವರನ್ನಲ್ಲ," ಎಂದು ತ್ರಿಶಾ ಕಿಡಿಕಾರಿದ್ದಾರೆ. ಅಲ್ಲದೆ, ಆ ಸಮಾರಂಭದಲ್ಲಿ ತಮ್ಮ ಹೆಸರನ್ನು ಕೊನೆಯ ಕ್ಷಣದಲ್ಲಿ ಸೇರಿಸುವಂತೆ ಪಾರ್ಥಿಬನ್ ಅವರೇ ಒತ್ತಾಯಿಸಿದ್ದರು ಎಂಬ ಆಘಾತಕಾರಿ ವಿಷಯವನ್ನು ತ್ರಿಶಾ ಬಹಿರಂಗಪಡಿಸಿದ್ದಾರೆ.
ಈ ಎಲ್ಲದಕ್ಕೂ ಮುಖ್ಯ ಕಾರಣ ವಿಜಯ್ ಮತ್ತು ಸಂಗೀತ ಅವರ ವಿಚ್ಛೇದನದ ಸುದ್ದಿ. ಸಂಗೀತ ಅವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಜಯ್ ಅವರು ಬೇರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. 2021ರಲ್ಲಿ ತಮಗೆ ಈ ವಿಚಾರ ತಿಳಿಯಿತು ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ನಡೆದ ಉದ್ಯಮಿ ಕಲ್ಪತಿ ಸುರೇಶ್ ಅವರ ಮಗನ ಮದುವೆಗೆ ವಿಜಯ್ ಮತ್ತು ತ್ರಿಶಾ ಒಟ್ಟಾಗಿ ಆಗಮಿಸಿದ್ದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿತ್ತು. ಸದ್ಯ ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 20ಕ್ಕೆ ನಿಗದಿಯಾಗಿದೆ.

