
ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ತ್ರಿಶಾ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಘನತೆಯಿಂದ ವರ್ತಿಸಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತ್ರಿಶಾ ಮನೆಯಿಂದ ವಿಜಯ್ ಹೊರಬರಲಿ ಎಂದ ಬಿಜೆಪಿ ನಾಯಕನಿಗೆ ತಿರುಗೇಟು
ವಿಜಯ್ ಮೊದಲು ತ್ರಿಶಾ ಮನೆಯಿಂದ ಹೊರಗೆ ಬರಲಿ, ಆಮೇಲೆ ರಾಜಕೀಯ ಮಾಡಲಿ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನಯಿನಾರ್ ನಾಗೇಂದ್ರನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ರಾಜಕೀಯ ಟೀಕೆಗಳ ನಡುವೆ ನಟಿ ತ್ರಿಶಾ ಕೃಷ್ಣನ್ ಅವರ ಹೆಸರನ್ನು ಎಳೆತಂದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನಯಿನಾರ್ ನಾಗೇಂದ್ರನ್ ಅವರ ಹೇಳಿಕೆ ಇದೀಗ ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸೋಮವಾರ ತಮ್ಮ ವಕೀಲರ ಮೂಲಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ತ್ರಿಶಾ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಘನತೆಯಿಂದ ವರ್ತಿಸಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿವಾದದ ಹಿನ್ನೆಲೆ
2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜಕೀಯ ಪಕ್ಷವನ್ನು (ಟಿವಿಕೆ) ಘೋಷಿಸಿರುವ ನಟ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ನಯಿನಾರ್ ನಾಗೇಂದ್ರನ್ ಮಾತನಾಡಿದ್ದರು. ವಿಜಯ್ ಅವರ ರಾಜಕೀಯ ಅನುಭವವನ್ನು ವ್ಯಂಗ್ಯವಾಡಿದ್ದ ಅವರು, "ಪಾಪ ಅವರಿಗೆ ಅನುಭವವಿಲ್ಲ. ಮೊದಲು ಅವರು ತಮ್ಮ ಮನೆಯಿಂದ ಹೊರಬರಬೇಕು, ಅದರಲ್ಲೂ ಮುಖ್ಯವಾಗಿ ತ್ರಿಶಾ ಅವರ ಮನೆಯಿಂದ ಹೊರಬಂದರೆ ಏನಾದರೂ ಸಾಧಿಸಲು ಸಾಧ್ಯ," ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿಜಯ್ ಮತ್ತು ತ್ರಿಷಾ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಪರೋಕ್ಷವಾಗಿ ಕೆಟ್ಟದಾಗಿ ಬಿಂಬಿಸುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಗೌರವವಿಲ್ಲದ ಕಡೆ ಧ್ವನಿ ಎತ್ತಲೇಬೇಕು
ತಮ್ಮ ವಕೀಲ ನಿತ್ಯೇಶ್ ನಟರಾಜ್ ಅವರ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ತ್ರಿಶಾ, "ನನ್ನ ವಿರುದ್ಧ ನಡೆದಿರುವ ಇಂತಹ ಕೆಟ್ಟ ಹಾಗೂ ಅಸಭ್ಯ ಟೀಕೆಯನ್ನು ರಾಜ್ಯದ ಉನ್ನತ ಸ್ಥಾನದಲ್ಲಿರುವ ರಾಜಕೀಯ ನಾಯಕರಿಂದ ನಿರೀಕ್ಷಿಸಿರಲಿಲ್ಲ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ʻʻತಮ್ಮನ್ನು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಬೇಡಿ. ಸಿನಿಮಾ ವೃತ್ತಿಜೀವನವನ್ನಷ್ಟೇ ಪರಿಗಣಿಸಿ, ಅನಗತ್ಯ ರಾಜಕೀಯ ಬೆಳವಣಿಗೆಗಳಿಗೆ ತಮ್ಮ ಹೆಸರನ್ನು ಬಳಸಬೇಡಿ. ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವುದು ಅಸಂಸ್ಕೃತ ನಡವಳಿಕೆಯಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈ ಹೇಳಿಕೆಯನ್ನು ಹಂಚಿಕೊಂಡಿರುವ ತ್ರಿಶಾ, ʻʻಗೌರವವಿಲ್ಲದ ನಡವಳಿಕೆಯನ್ನು ಯಾವಾಗಲೂ ಖಂಡಿಸಲೇಬೇಕು" ಎಂದು ಬರೆದುಕೊಂಡಿದ್ದಾರೆ.
ರಾಜಕೀಯ ಕೆಸರೆರಚಾಟ
ನಯಿನಾರ್ ನಾಗೇಂದ್ರನ್ ಅವರ ಹೇಳಿಕೆಯನ್ನು ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ತೀವ್ರವಾಗಿ ಖಂಡಿಸಿವೆ. "ಬಿಜೆಪಿಯವರು ಮಹಿಳೆಯರನ್ನು ಗೌರವಿಸುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿʼʼ ಎಂದು ಡಿಎಂಕೆ ವಕ್ತಾರರು ಟೀಕಿಸಿದರೆ, "ವೈಯಕ್ತಿಕ ದಾಳಿ ನಡೆಸುವುದು ರಾಜಕೀಯ ನೈತಿಕತೆಯಲ್ಲ" ಎಂದು ಕಾಂಗ್ರೆಸ್ ಕಿಡಿಕಾರಿದೆ. ಆದರೆ, ಬಿಜೆಪಿ ನಾಯಕರು ನಾಗೇಂದ್ರನ್ ಅವರ ಬೆಂಬಲಕ್ಕೆ ನಿಂತಿದ್ದು, ಹೇಳಿಕೆಯನ್ನು ಡಿಎಂಕೆ ತಿರುಚುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

