
'ದಿ ಕೇರಳ ಸ್ಟೋರಿ' ಖ್ಯಾತಿಯ ಅದಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ವರ್ತಿಸಿದ ನೆಟ್ಟಿಗನಿಗೆ ತಮ್ಮ ಚಪ್ಪಲಿ ತೋರಿಸಿ ಖಡಕ್ ಉತ್ತರ ನೀಡಿದ್ದಾರೆ.
Adah Sharma| ನಿಮ್ಮ ಸೈಜ್ ಎಷ್ಟು? ನೆಟ್ಟಿಗನ ಪ್ರಶ್ನೆಗೆ ಚಪ್ಪಲಿ ತೋರಿಸಿದ ಖ್ಯಾತ ನಟಿ
`ದಿ ಕೇರಳ ಸ್ಟೋರಿ' ಖ್ಯಾತಿಯ ಅದಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ವರ್ತಿಸಿದ ನೆಟ್ಟಿಗನಿಗೆ ತಮ್ಮ ಚಪ್ಪಲಿ ತೋರಿಸಿ ಖಡಕ್ ಉತ್ತರ ನೀಡಿದ್ದಾರೆ.
'ದಿ ಕೇರಳ ಸ್ಟೋರಿ' ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ನಟಿ ಅದಾ ಶರ್ಮಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರ 'ರಣವಿಕ್ರಮ' ಚಿತ್ರದ ಮೂಲಕ ಕನ್ನಡಿಗರಿಗೂ ಹತ್ತಿರವಾಗಿದ್ದ ಈ ಬೆಡಗಿ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮಗೆ ಎದುರಾದ ಅಸಭ್ಯ ಪ್ರಶ್ನೆಗೆ ಖಡಕ್ ಉತ್ತರ ನೀಡುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ.
ಸಿನಿಮಾ ಮತ್ತು ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಅದಾ ಶರ್ಮಾ, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ ಸಂವಾದದ ವೇಳೆ ನೆಟ್ಟಿಗನೊಬ್ಬ 'ನಿಮ್ಮ ಸೈಜ್ ಎಷ್ಟು? ಎಂದು ಅಸಭ್ಯವಾಗಿ ಕೇಳಿದ್ದನು. ಇದಕ್ಕೆ ಕಿಂಚಿತ್ತೂ ಎದೆಗುಂದದೆ, ತಮ್ಮ ಚಪ್ಪಲಿಯನ್ನು ತೋರಿಸಿದ ನಟಿ, `ನನ್ನ ಸೈಜ್ 9, ಇದು ನನ್ನ ಚಪ್ಪಲಿ ಸೈಜ್' ಎಂದು ಕೌಂಟರ್ ನೀಡಿದ್ದಾರೆ. ಮುಜುಗರದ ಪ್ರಶ್ನೆಗಳಿಗೆ ಮೌನ ವಹಿಸುವ ಬದಲು ದಿಟ್ಟವಾಗಿ ಉತ್ತರಿಸಿದ ಅವರ ಈ ನಡೆಗೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ಅದಾ ಶರ್ಮಾ ಅವರ ಸಿನಿಮಾ ಪಯಣದ ಬಗ್ಗೆ ನೋಡುವುದಾದರೆ, 'ಹಾರ್ಟ್ ಅಟ್ಯಾಕ್' ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಇವರು 'ದಿ ಕೇರಳ ಸ್ಟೋರಿ'ಯ ಅತಿ ದೊಡ್ಡ ಯಶಸ್ಸಿನ ನಂತರ ಬಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ. ವಿಶೇಷವೆಂದರೆ, ಸುಮಾರು 11 ವರ್ಷಗಳ ನಂತರ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದು, 'ರಾಮರಸ' ಎಂಬ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಅವರೊಂದಿಗೆ ನಟಿಸುತ್ತಿದ್ದಾರೆ. ಪ್ರಸ್ತುತ ಅವರು 'ಸೂಪರ್ ವೆಲ್ಲಿ' ಎಂಬ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
'ದಿ ಕೇರಳ ಸ್ಟೋರಿ' ಸಿನಿಮಾ ಕೇವಲ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲದೆ, ಬಿಡುಗಡೆಯಾದ ಸಮಯದಿಂದಲೂ ದೊಡ್ಡ ಮಟ್ಟದ ವಿವಾದಗಳಿಗೆ ಗುರಿಯಾಗಿತ್ತು. ಈ ಸಿನಿಮಾದ ಟೀಸರ್ ಬಿಡುಗಡೆಯಾದಾಗ, ಕೇರಳದ ಸುಮಾರು 32,000 ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಿ ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿಸಲಾಗಿದೆ ಎಂಬ ಅಂಶವನ್ನು ಪ್ರಸ್ತಾಪಿಸಲಾಗಿತ್ತು. ಈ ಅಂಕಿಅಂಶವು ದೇಶಾದ್ಯಂತ ಭಾರಿ ಚರ್ಚೆಗೆ ನಾಂದಿ ಹಾಡಿತು. ಅನೇಕ ರಾಜಕೀಯ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಸಂಖ್ಯೆ ಸುಳ್ಳು ಮತ್ತು ಆಧಾರರಹಿತ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲ ವಿವಾದಗಳ ನಡುವೆ ನಾಯಕಿ ಅದಾ ಶರ್ಮಾ ಅವರು ಚಿತ್ರದ ಪರವಾಗಿ ಗಟ್ಟಿಯಾಗಿ ನಿಂತರು. ಇದು ಕೇವಲ ಒಂದು ಸಿನಿಮಾ ಅಲ್ಲ, ಬದಲಿಗೆ ಭಯೋತ್ಪಾದನೆಯ ವಿರುದ್ಧದ ಧ್ವನಿ ಎಂದು ಅವರು ಪ್ರತಿಪಾದಿಸಿದ್ದರು. ಚಿತ್ರದ ತಯಾರಿಯ ಸಮಯದಲ್ಲಿ ತಾವು ಅನುಭವಿಸಿದ ಮಾನಸಿಕ ಒತ್ತಡದ ಬಗ್ಗೆ ಮಾತನಾಡುತ್ತಾ, ಸಂತ್ರಸ್ತೆಯರ ನೋವಿನ ಕಥೆಗಳನ್ನು ಕೇಳಿದಾಗ ತಮಗೆ ನಿದ್ರೆ ಬಾರದಂತಾಗಿತ್ತು ಎಂದು ಅವರು ಹಂಚಿಕೊಂಡಿದ್ದರು. ವಿವಾದಗಳು ಏನೇ ಇದ್ದರೂ, ಈ ಸಿನಿಮಾ ಅದಾ ಶರ್ಮಾ ಅವರಿಗೆ ವೃತ್ತಿಜೀವನದಲ್ಲಿ ದೊಡ್ಡ ಬ್ರೇಕ್ ನೀಡಿತು ಮತ್ತು ರಾಷ್ಟ್ರಮಟ್ಟದಲ್ಲಿ ಅವರ ನಟನೆಯನ್ನು ಗುರುತಿಸುವಂತೆ ಮಾಡಿತ್ತು.

