
ವಾಸ್ತವಕ್ಕಿಂತ ವದಂತಿಗಳದ್ದೇ ಅಬ್ಬರ: ಕೇರಳ ಸ್ಟೋರಿಯ ಕಿಚ್ಚು ಹಚ್ಚುವ ಅಸಲಿಯತ್ತು!
ಒಂದು ಕಥೆ ಹೇಳುವ ಕಲೆಯು ಹೇಗೆ ಹಂತಹಂತವಾಗಿ ವ್ಯವಸ್ಥಿತ ರಾಜಕೀಯ ಸಂದೇಶವಾಗಿ, ಸವಕಲು ಪ್ರಚಾರದ ಅಸ್ತ್ರವಾಗಿ ಬದಲಾಗುತ್ತದೆ ಎಂಬುದಕ್ಕೆ ʼದಿ ಕೇರಳ ಸ್ಟೋರಿ-2ʼ ತಕ್ಕ ಸಾಕ್ಷಿ.
ಕೇರಳದ 32,000 ಮಹಿಳೆಯರನ್ನು ಮತಾಂತರಿಸಿ ಭಯೋತ್ಪಾದನಾ ಜಾಲಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂಬುದು 'ದಿ ಕೇರಳ ಸ್ಟೋರಿ' (2023) ಚಿತ್ರದ ಮೂಲ ಕಥೆ. ಈ ಅಂಕಿ-ಅಂಶವೇ ಚಿತ್ರದ ಪ್ರಚಾರಕ್ಕೆ ಪ್ರಮುಖ ಅಸ್ತ್ರ, ಆದರೆ ಇದೇ ಅದರ ಅತ್ಯಂತ ದುರ್ಬಲವಾದ ವಾಸ್ತವಿಕ ಆಧಾರವೂ ಹೌದು. ಸುದೀಪ್ತೋ ಸೇನ್ ನಿರ್ದೇಶನದ ಮತ್ತು ಅದಾ ಶರ್ಮಾ ಅಭಿನಯದ ಈ ಸಿನಿಮಾವು, ಮುಸ್ಲಿಂ ಸಹಪಾಠಿಗಳಿಂದ ಮತಾಂತರಗೊಂಡು ಐಸಿಸ್ ನಿಯಂತ್ರಿತ ಪ್ರದೇಶಕ್ಕೆ ಸಾಗಿಸಲ್ಪಟ್ಟ ನರ್ಸಿಂಗ್ ವಿದ್ಯಾರ್ಥಿನಿಯ ಕಥೆಯನ್ನು ಹೇಳುತ್ತದೆ. ಇದು 'ಲವ್ ಜಿಹಾದ್' ಮೂಲಕ ಹಿಂದೂ ಮಹಿಳೆಯರನ್ನು ಗುರಿಯಾಗಿಸುವ
ವ್ಯವಸ್ಥಿತ ಕಾರ್ಯಾಚರಣೆಗೆ ಸಾಕ್ಷಿಯಾಗಿ ಅವಳ ವೇದನೆಗಳನ್ನು ಚಿತ್ರಿಸುವ ಪ್ರಯತ್ನ ಮಾಡುತ್ತದೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬಲವಂತದ ಮತಾಂತರದ ಪ್ರಕರಣಗಳು ಎಂದಿಗೂ ಅಸ್ತಿತ್ವದಲ್ಲಿ ಇರಲೇ ಇಲ್ಲ ಎಂಬುದು ಇಲ್ಲಿನ ಸಮಸ್ಯೆಯಲ್ಲ; ಅಂತರ್ಧರ್ಮೀಯ ವಿವಾದಗಳು ಮತ್ತು ಸಾಂದರ್ಭಿಕ ಉಗ್ರಗಾಮಿ ನೇಮಕಾತಿಯ ಹಲವಾರು ಪ್ರಕರಣಗಳು ದಶಕಗಳಿಂದ ಭಾರತೀಯ ನ್ಯಾಯಾಲಯಗಳ ಮುಂದೆ ಬಂದಿವೆ. ಆದರೆ, 32,000 ಜನರ ಪಿತೂರಿ ಎಂಬ ವ್ಯಾಪಕವಾದ ಪ್ರತಿಪಾದನೆಯೇ ಈ ಚಿತ್ರದ ವಿಭಜಕ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಈ ಅಂಕಿ-ಅಂಶವನ್ನು ಫ್ಯಾಕ್ಟ್-ಚೆಕರ್ಸ್ಗಳು ತಳ್ಳಿಹಾಕಿದ್ದಾರೆ. 'ದಿ ಕೇರಳ ಸ್ಟೋರಿ-2: ಗೋಸ್ ಬಿಯಾಂಡ್' ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದ್ದರೂ, ಚಿತ್ರದ ಪ್ರಚಾರದ ಈ ಕೇಂದ್ರಬಿಂದುವಾಗಿರುವ ಅಂಕಿ-ಅಂಶಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬುದು ಗಮನಾರ್ಹ.
ಮೇ 5, 2023 ರಂದು ಮೊದಲ ಭಾಗ ಬಿಡುಗಡೆಯಾಗುವ ಮೊದಲು, ಈ ವಿಷಯವು ಭಾರತದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಚಿತ್ರದ ಅತಿರಂಜಿತ ಪ್ರಚಾರಕ್ಕೆ ಕಡಿವಾಣ ಹಾಕಿತು. ಚಿತ್ರದ ಪ್ರದರ್ಶನ ಮುಂದುವರಿಸಲು ಅನುಮತಿ ನೀಡಿದ ನ್ಯಾಯಾಲಯವು, “32,000 ಎಂಬ ಅಂಕಿ-ಅಂಶವು ಯಾವುದೇ ಅಧಿಕೃತ ದತ್ತಾಂಶದಿಂದ ಬೆಂಬಲಿತವಾಗಿಲ್ಲ” ಎಂಬ ಸ್ಪಷ್ಟನೆಯನ್ನು ಸೇರಿಸುವಂತೆ ನಿರ್ಮಾಪಕರಿಗೆ ನಿರ್ದೇಶಿಸಿತು. ಈ ಸಂಖ್ಯೆಗೆ ಯಾವುದೇ ಪುರಾವೆಗಳನ್ನು ನೀಡಲು ನಿರ್ಮಾಪಕರಿಗೆ ಸಾಧ್ಯವಾಗದ ಕಾರಣ, ಅವರು ಅಂತಿಮವಾಗಿ ಚಿತ್ರದ ಟೀಸರ್ನಲ್ಲಿ ಇದು ʼಮೂವರುʼ ಹುಡುಗಿಯರ ಕಥೆ ಎಂದು ತಿದ್ದುಪಡಿ ಮಾಡಿದರು.
ತಪ್ಪು ಮಾಹಿತಿ ತಂದ ಹಾನಿ
ಪ್ರಚಾರದ ಅಖಾಡದಲ್ಲಿ, ಅಡಾಲ್ಫ್ ಹಿಟ್ಲರ್ ತನ್ನ 'ಮೈನ್ ಕ್ಯಾಂಫ್' ಪುಸ್ತಕದಲ್ಲಿ ಉಲ್ಲೇಖಿಸಿದ 'ಬಿಗ್ ಲೈ' (ದೊಡ್ಡ ಸುಳ್ಳು) ತಂತ್ರವು ಸಾರ್ವಜನಿಕರ ಮನಸ್ಸಿನಲ್ಲಿ ಒಂದು ಆಘಾತಕಾರಿ ಮತ್ತು ಗಂಭೀರವಾದ ಸಂಖ್ಯೆಯನ್ನು ಬಿತ್ತುವ ಮೂಲಕ ಕೆಲಸ ಮಾಡುತ್ತದೆ. ಆ ಸಂಖ್ಯೆಯು ನಂತರ ನ್ಯಾಯಾಲಯದಲ್ಲಿ ಸುಳ್ಳೆಂದು ಸಾಬೀತಾಗಿ ಹಿಂದೆ ಪಡೆಯಲಾದರೂ, ಒಂದು ಇಡೀ ರಾಜ್ಯ ಮತ್ತು ನಿರ್ದಿಷ್ಟ ಸಮುದಾಯವನ್ನು ಬೃಹತ್ ರಹಸ್ಯ ಪಿತೂರಿಯ ಭಾಗವೆಂದು ಬಿಂಬಿಸಿ, ದ್ವೇಷದ ಕಿಚ್ಚು ಹಚ್ಚುವುದರ ಉದ್ದೇಶಿತ ಹಾನಿ ಆಗಲೇ ಸಂಭವಿಸಿರುತ್ತದೆ.
ಈ ಬಗ್ಗೆ ಪಟ್ಟುಬಿಡದೆ ಟೀಕಿಸುತ್ತ ಬಂದಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಫೆಬ್ರವರಿ 17 ರಂದು ಚಿತ್ರದ ಎರಡನೇ ಭಾಗದ ಟ್ರೇಲರ್ ಬಿಡುಗಡೆಯಾದ ನಂತರ ತೀವ್ರ ವಾಗ್ದಾಳಿ ನಡೆಸಿದರು. ಈ ಚಿತ್ರವು ಕೋಮು ಸೌಹಾರ್ದತೆಯನ್ನು ಕದಡಲು ಮತ್ತು ರಾಜ್ಯದ ಜಾತ್ಯತೀತ ಇಮೇಜ್ಗೆ ಕಳಂಕ ತರಲು ವಿನ್ಯಾಸಗೊಳಿಸಲಾದ ʼಹೆಣೆದ ಕಥೆಗಳʼ ಸಂಗ್ರಹ ಎಂದು ಅವರು ಬಣ್ಣಿಸಿದ್ದಾರೆ. ಹಿಂದುತ್ವ ಬ್ರಿಗೇಡ್‌ಗೆ ಕೇರಳದ ಈ ಜಾತ್ಯತೀತ ಪರಂಪರೆ ಧಕ್ಕೆ ತಂದಿದೆ ಎಂಬುದು ಅವರ ವಾದ.
ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಈ ಟೀಕೆಗೆ ಧ್ವನಿಗೂಡಿಸಿದ್ದು, ಚಿತ್ರವು ಅದರ ಮೊದಲ ಭಾಗದಂತೆಯೇ ʼದ್ವೇಷ ಬಿತ್ತುವʼ ಕೆಲಸದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಚಿತ್ರದ ಸೀಕ್ವೆಲ್ (ಮುಂದಿನ ಭಾಗ) ಕೂಡ ಅನಾಹುತಕಾರಿ ಸೂತ್ರವನ್ನೇ ಪುನರಾವರ್ತಿಸಲು ಸಜ್ಜಾದಂತೆ ಕಾಣುತ್ತಿದೆ ಎಂದು ಅವರು ವಾದಿಸಿದ್ದಾರೆ. ವಿಶೇಷವಾಗಿ, ಚಿತ್ರದ ಪ್ರಚಾರದ ಸಾಮಗ್ರಿಗಳಲ್ಲಿ ಉಲ್ಲೇಖಿಸಲಾದ ದೊಡ್ಡ ಪ್ರಮಾಣದ ಧರ್ಮಾಂತರದ ಸಂಖ್ಯೆಗಳನ್ನು ಅವರು ಪ್ರಶ್ನಿಸಿದ್ದಾರೆ; ಈ ಅಂಕಿಅಂಶಗಳಿಗೆ ಯಾವುದೇ ವಿಶ್ವಾಸಾರ್ಹ ಮೂಲಗಳಿಲ್ಲ ಮತ್ತು ಅವುಗಳನ್ನು ಅತಿಶಯೋಕ್ತಿಯಿಂದ ಬಿಂಬಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಚಿತ್ರವನ್ನು ಕೇರಳದಲ್ಲಿ ಎಡರಂಗ (ಎಲ್.ಡಿ.ಎಫ್) ಮತ್ತು ಕಾಂಗ್ರೆಸ್ (ಯುಡಿಎಫ್) ಮೈತ್ರಿಕೂಟಗಳ ದೀರ್ಘಕಾಲದ ಹಿಡಿತವನ್ನು ಮುರಿಯಲು ಬಿಜೆಪಿ ನಡೆಸುತ್ತಿರುವ ಆಕ್ರಮಣಕಾರಿ ಪ್ರಯತ್ನದ ಭಾಗವೆಂದೇ ನೋಡಲಾಗುತ್ತಿದೆ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರು ತ್ರಿಶೂರ್‌ನಿಂದ ಜಯಗಳಿಸುವ ಮೂಲಕ ಕೇರಳದಲ್ಲಿ ಬಿಜೆಪಿಯ ಮೊದಲ ಸಂಸದೀಯ ಗೆಲುವನ್ನು ದಾಖಲಿಸಿದರು (19.2% ಮತ ಹಂಚಿಕೆಯೊಂದಿಗೆ). ತದನಂತರ ಡಿಸೆಂಬರ್ 2025ರಲ್ಲಿ ನಡೆದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳಲ್ಲಿ 50 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ರಾಜಧಾನಿಯ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ. ಕೇರಳದ ವೈವಿಧ್ಯಮಯ ಜನಸಂಖ್ಯೆಯನ್ನು ಗೆಲ್ಲಲು ಬಿಜೆಪಿ ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯವನ್ನು ಸೆಳೆಯುತ್ತಿದೆ; ಕೃಷಿ ಸಮಸ್ಯೆಗಳು ಮತ್ತು 'ಲವ್ ಜಿಹಾದ್' ಕುರಿತ ಅವರ ಆತಂಕಗಳನ್ನು ಆಲಿಸುವುದರ ಜೊತೆಗೆ, ಜಾರ್ಜ್ ಕುರಿಯನ್ ಅವರಂತಹ ನಾಯಕರನ್ನು ಮೋದಿ ಸಂಪುಟದ ಪ್ರಮುಖ ಪಾತ್ರಗಳಿಗೆ ಬಡ್ತಿ ನೀಡಿದೆ.
ಕೇರಳ ಹೈಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ
'ದಿ ಕೇರಳ ಸ್ಟೋರಿ 2' ಚಿತ್ರವು ಕಾನೂನು ಅಡೆತಡೆಗಳನ್ನು ಎದುರಿಸುತ್ತಿದೆ. ಕಣ್ಣೂರಿನ ನಿವಾಸಿಯೊಬ್ಬರು ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಚಿತ್ರದ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿದ್ದಾರೆ. ಚಿತ್ರದ ಟ್ರೇಲರ್ ಕೇರಳವನ್ನು ಭಯೋತ್ಪಾದನೆ ಮತ್ತು ಬಲವಂತದ ಧರ್ಮಾಂತರದ ಕೇಂದ್ರವೆಂದು ಚಿತ್ರಿಸುತ್ತದೆ, ಇದರಿಂದಾಗಿ ಇಡೀ ರಾಜ್ಯ ಮತ್ತು ಅದರ ಜನರಿಗೆ ಕಳಂಕ ತರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಈ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸೆನ್ಸಾರ್ ಮಂಡಳಿ ಮತ್ತು ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರಿಗೆ ನೋಟಿಸ್ ನೀಡಿದ್ದು, ಫೆಬ್ರವರಿ 24 ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ. ನಿರ್ದೇಶಕ ಕಾಮಾಖ್ಯ ನಾರಾಯಣ ಸಿಂಗ್ ನೇತೃತ್ವದ ಚಿತ್ರತಂಡವು ಈ ಯೋಜನೆಯು ದಾಖಲಿತ ಕಾನೂನು ಪ್ರಕರಣಗಳನ್ನು ಆಧರಿಸಿದೆ ಎಂದು ಪ್ರತಿಪಾದಿಸುತ್ತಿದ್ದರೂ, ಅದು ಸತ್ಯಕ್ಕೆ ದೂರವಾದಂತೆ ತೋರುತ್ತಿದೆ.
ನಿಜ ಹೇಳಬೇಕೆಂದರೆ, ಈ ಸಿನೆಮಾ ಸರಣಿಯು ಸತ್ಯದೊಂದಿಗೆ ಹೊಂದಿರುವ ಸಂಬಂಧವೇ ಅದರ ಪ್ರಚಾರದ ಉದ್ದೇಶಕ್ಕೆ ಅತ್ಯಂತ ಬಲವಾದ ಪುರಾವೆಯಾಗಿದೆ. ವಿರೋಧಿಯನ್ನು 'ಅಮಾನವೀಯವಾಗಿ ಚಿತ್ರಿಸುವುದು' ಪ್ರಚಾರ ತಂತ್ರದ ಪ್ರಮುಖ ಲಕ್ಷಣ. ಮೊದಲ ಚಿತ್ರ ಮತ್ತು 'ದಿ ಕೇರಳ ಸ್ಟೋರಿ 2' ರ ಪ್ರಚಾರದ ಸಾಮಗ್ರಿಗಳಲ್ಲಿ ಯಾವುದೇ ಸೂಕ್ಷ್ಮ ಸಂಗತಿಗಳಿಲ್ಲ; ಮುಸ್ಲಿಂ ಪಾತ್ರಗಳನ್ನು ಕೇವಲ ಬೇಟೆಗಾರರು, ಕುತಂತ್ರಿಗಳು ಅಥವಾ ಕ್ರೂರ ಉಗ್ರಗಾಮಿಗಳಂತೆ ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೆ, ಹಿಂದೂ ಮಹಿಳೆಯರು ಸಹಜವಾಗಿಯೇ ಭೋಳೆ ಸ್ವಭಾವದವರು ಮತ್ತು ಅವರಿಗೆ 'ಬೇಟೆಗಾರ ಅಲ್ಪಸಂಖ್ಯಾತರಿಂದ' ರಕ್ಷಣೆ ನೀಡಲು ಪಿತೃಪ್ರಧಾನ ವ್ಯವಸ್ಥೆಯ ಅಗತ್ಯವಿದೆ ಎಂದು ಬಿಂಬಿಸುವ ಮೂಲಕ ಅವರ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಈ ಚಿತ್ರ ನಿರಾಕರಿಸುತ್ತದೆ. ಈ ಸೀಕ್ವೆಲ್ನ ʼಅಬ್ ಸಹೇಂಗೆ ನಹೀ ಲಡೇಂಗೆʼ (ಇನ್ನು ಸಹಿಸುವುದಿಲ್ಲ, ಹೋರಾಡುತ್ತೇವೆ) ಎಂಬ ಟ್ಯಾಗ್ಲೈನ್ ಜನಪ್ರಿಯಗೊಳಿಸುವ ಹಳೆಯ ಭಾಷೆಯನ್ನೇ ಬಳಸುತ್ತದೆ.
ವಿವೇಚನಾ ಶಕ್ತಿ ಕುಂದಿಸುವ ಹುನ್ನಾರ
ಅಲ್ಲದೆ, ಕಥೆಯ ವ್ಯಾಪ್ತಿಯನ್ನು ಕೇರಳದಿಂದ ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ವಿಸ್ತರಿಸುವ ಮೂಲಕ, ಈ ಸರಣಿಯು ಸಮಸ್ಯೆಯನ್ನು ರಾಷ್ಟ್ರವ್ಯಾಪಿ ಹರಡುವ ಪ್ರಯತ್ನದಂತಡ ಕಾಣುತ್ತಿದೆ. ಒಂದು ವೇಳೆ ನೀವು 'ದಿ ಕೇರಳ ಸ್ಟೋರಿ' ನೋಡುವ ಧೈರ್ಯ ಮಾಡಿದರೆ, ಆ ಚಿತ್ರವು 'ಅಟ್ರೋಸಿಟಿ ಪೋರ್ನ್' ಅನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಅರಿವಾಗುತ್ತದೆ. ಬಲವಂತದ ಧರ್ಮಾಂತರ ಮತ್ತು ಧಾರ್ಮಿಕ ಅಪವಿತ್ರಗೊಳಿಸುವ (ಉದಾಹರಣೆಗೆ ಬಲವಂತವಾಗಿ ಗೋಮಾಂಸ ತಿನ್ನಿಸುವುದು) ಅತ್ಯಂತ ಭೀಕರ ಮತ್ತು ಭಾವನಾತ್ಮಕವಾದ ಕುತಂತ್ರದಿಂದ ಕೂಡಿದ ದೃಶ್ಯಗಳನ್ನು ಇಲ್ಲಿ ಬಳಸಲಾಗಿದೆ. ಇದು ಪ್ರೇಕ್ಷಕರ ವಿವೇಚನಾ ಶಕ್ತಿಯನ್ನು ಕುಂದಿಸಿ, ಅವರಲ್ಲಿ ತಕ್ಷಣದ ಕೋಪ ಅಥವಾ ಭಯದ ಪ್ರತಿಕ್ರಿಯೆಯನ್ನು ಪ್ರಚೋದಿಸುವ ತಂತ್ರವಾಗಿದೆ.
ಯಾವಾಗ ಸಿನಿಮಾವು ಸತ್ಯದ ಅನ್ವೇಷಣೆಗಿಂತ ಕೋಪವನ್ನು ಪ್ರಚೋದಿಸುವುದಕ್ಕೆ ಆದ್ಯತೆ ನೀಡುತ್ತದೆಯೋ, ಆಗ ಅದು ಕಲೆಯಾಗಿ ಉಳಿಯದೆ ಒಂದು ರೀತಿಯ ಮನೋವೈಜ್ಞಾನಿಕ ಕಾರ್ಯಾಚರಣೆ ಅಥವಾ ಸರಳವಾಗಿ ಹೇಳುವುದಾದರೆ ಪ್ರಚಾರದ ಕೆಲಸವಾಗಿ ಬದಲಾಗುತ್ತದೆ ಎಂದು ವಾದಿಸಬಹುದು. ಅದಿತಿ ಭಾಟಿಯಾ, ಉಲ್ಕಾ ಗುಪ್ತಾ ಮತ್ತು ಐಶ್ವರ್ಯಾ ಓಜಾ ಅಭಿನಯದ 'ದಿ ಕೇರಳ ಸ್ಟೋರಿ 2' ಚಿತ್ರದಲ್ಲಿ ಅಪ್ರಾಪ್ತ ಬಾಲಕಿ, ಕ್ರೀಡಾಪಟು ಮತ್ತು ಯುಪಿಎಸ್ಸಿ ವಿದ್ಯಾರ್ಥಿನಿಯರು ಅನ್ಯಧರ್ಮೀಯರೊಂದಿಗೆ ಸಂಬಂಧ ಬೆಳೆಸಿದ ನಂತರ ವಂಚನೆ ಮತ್ತು ಹಿಂಸೆಯನ್ನು ಎದುರಿಸುವ ಕಥೆಯಿದ್ದು, ಇದು ಮೊದಲ ಭಾಗಕ್ಕಿಂತಲೂ ಹೆಚ್ಚು ಭೀಕರವಾಗಿರುವ ಸಾಧ್ಯತೆಯಿದೆ.
ಕಾಲ್ಪನಿಕ ನಿರೂಪಣೆಗೆ ʼಅಧಿಕೃತ ಸತ್ಯʼದ ಮುದ್ರೆ
ನಿಜವಾದ ಕಲೆಯು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಪ್ರಶ್ನಿಸುತ್ತದೆ, ಆದರೆ 'ದಿ ಕೇರಳ ಸ್ಟೋರಿ'ಗೆ ರಾಜಕೀಯ ಅಧಿಕಾರದ ಉನ್ನತ ಮಟ್ಟದ ವ್ಯಕ್ತಿಗಳಿಂದಲೇ ಪ್ರಚಾರ ಸಿಕ್ಕಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಚಿತ್ರವನ್ನು ಅನುಮೋದಿಸಿದಾಗ ಮತ್ತು ರಾಜ್ಯಗಳು ಅದಕ್ಕೆ ʼತೆರಿಗೆ ಮುಕ್ತʼ ಸವಲತ್ತು ನೀಡಿದಾಗ, ಸ್ವತಂತ್ರ ಚಲನಚಿತ್ರ ನಿರ್ಮಾಣ ಮತ್ತು ಸರ್ಕಾರಿ ಪ್ರಾಯೋಜಿತ ಸಂದೇಶಗಳ ನಡುವಿನ ವ್ಯತ್ಯಾಸವೇ ಅಳಿಸಿಹೋಗುತ್ತದೆ. ಇಂತಹ ಅಧಿಕೃತ ಬೆಂಬಲವು ಒಂದು ಕಾಲ್ಪನಿಕ ನಿರೂಪಣೆಗೆ ʼಅಧಿಕೃತ ಸತ್ಯʼದ ಮುದ್ರೆ ಒತ್ತಿದಂತಾಗುತ್ತದೆ. ನಾವು ಈಗಾಗಲೇ ಗಮನಿಸಿರುವಂತೆ, ಇದು ಚಿತ್ರದ ನಿಖರತೆಯನ್ನು ಪ್ರಶ್ನಿಸುವವರನ್ನು 'ದೇಶದ್ರೋಹಿ' ಅಥವಾ 'ಭಯೋತ್ಪಾದನಾ ಬೆಂಬಲಿಗ' ಎಂದು ಮುದ್ರೆ ಒತ್ತಲು ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ.
ಇದು ವಿಮರ್ಶಕರ ಧ್ವನಿಯನ್ನು ಪರಿಣಾಮಕಾರಿಯಾಗಿ ಅಡಗಿಸುತ್ತದೆ ಮತ್ತು ಚಿತ್ರದ ಸತ್ಯಾಸತ್ಯತೆಗಿಂತ ಅದರ ವಾಣಿಜ್ಯ ಯಶಸ್ಸನ್ನೇ ಅದು ಸತ್ಯ ಎಂಬುದಕ್ಕೆ ಸಾಕ್ಷಿಯಾಗಿ ಬಳಸುವ ಒಂದು ಚಕ್ರವನ್ನು ಸೃಷ್ಟಿಸುತ್ತದೆ. ಮೊದಲ ಚಿತ್ರ ಬಿಡುಗಡೆಯಾದಾಗಿನಿಂದ ಕಾಲೇಜುಗಳಲ್ಲಿ ಅನೇಕ ಉದ್ವಿಗ್ನ ಘಟನೆಗಳು ವರದಿಯಾಗಿವೆ. ಒಂದು ಫೀಚರ್ ಫಿಲ್ಮ್ನ ಭವ್ಯ ನಿರ್ಮಾಣದ ಮೂಲಕ ʼಪಿತೂರಿ ಸಿದ್ಧಾಂತʼವನ್ನು ನ್ಯಾಯಸಮ್ಮತಗೊಳಿಸುವ ಮೂಲಕ, ಈ ಸರಣಿಯು ಆನ್ಲೈನ್ ಟ್ರೋಲ್ಗಳು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಒಂದು ಸುಳ್ಳು "ಮಾಹಿತಿ ಮೂಲ"ವನ್ನು ಒದಗಿಸುತ್ತದೆ.
ಪ್ರಜಾಪ್ರಭುತ್ವದಲ್ಲಿ, ಒಬ್ಬ ಕಥೆಗಾರನ ಜವಾಬ್ದಾರಿಯು ಸಮಾಜದ ನಡುವೆ ಸೇತುವೆಗಳನ್ನು ಕಟ್ಟುವುದು ಅಥವಾ ಕನಿಷ್ಠಪಕ್ಷ ಸಮಾಜದ ಸಂಕೀರ್ಣತೆ ಮತ್ತು ವಿರೋಧಾಭಾಸಗಳನ್ನು ತೋರಿಸುವುದಾಗಿದೆ. ಆದರೆ 'ದಿ ಕೇರಳ ಸ್ಟೋರಿ' ಸರಣಿಯು ಇದಕ್ಕೆ ತದ್ವಿರುದ್ಧವಾದುದನ್ನು ಮಾಡುತ್ತದೆ. ಜಾರ್ಜ್ ಆರ್ವೆಲ್ ತಮ್ಮ 'ಪಾಲಿಟಿಕ್ಸ್ ಅಂಡ್ ದಿ ಇಂಗ್ಲಿಷ್ ಲ್ಯಾಂಗ್ವೇಜ್' ಕೃತಿಯಲ್ಲಿ, ರಾಜಕೀಯ ಭಾಷೆಯು “ಸುಳ್ಳುಗಳನ್ನು ಸತ್ಯದಂತೆ ಕೇಳಿಸುವಂತೆ ಮತ್ತು ಕೊಲೆಯನ್ನು ಗೌರವಾನ್ವಿತವನ್ನಾಗಿ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ" ಎಂದು ಎಚ್ಚರಿಸಿದ್ದರು. ಈ ಎಚ್ಚರಿಕೆಯನ್ನು ಇಲ್ಲಿ ರೋಗನಿರ್ಣಯದ ಸಾಧನವಾಗಿ ಬಳಸಬಹುದು. ತತ್ವಜ್ಞಾನಿ ಹನ್ನಾ ಅರೆಂಡ್ 'ದಿ ಒರಿಜಿನ್ಸ್ ಆಫ್ ಟೋಟಲಿಟೇರಿಯನಿಸಂ'ನಲ್ಲಿ ಬರೆದಂತೆ, "ಪ್ರಚಾರದ ಆದರ್ಶ ಗುರಿ ಎಂದರೆ ಸಿದ್ಧಾಂತಕ್ಕೆ ಬದ್ಧನಾದ ವ್ಯಕ್ತಿಯಲ್ಲ, ಬದಲಿಗೆ ಸತ್ಯ ಮತ್ತು ಕಲ್ಪನೆಯ ನಡುವಿನ ವ್ಯತ್ಯಾಸವೇ ಇಲ್ಲದ ವ್ಯಕ್ತಿ."
ತಿಳುವಳಿಕೆ ಸಾಮರ್ಥ್ಯಕ್ಕೆ ಕುಂದು
ಯಾವುದೋ ಒಂದು ಪರಿಶೀಲಿಸದ ಅಂಕಿಅಂಶವನ್ನೇ ತನ್ನ ಮೂಲ ಮಂತ್ರವನ್ನಾಗಿ ಸಿನಿಮಾ ಬಿಂಬಿಸಿದಾಗ, ಅದನ್ನು ನಂತರ ಹಿಂಪಡೆಯುವುದು ಅರ್ಥಹೀನವಾಗುತ್ತದೆ. ಆ ಅರ್ಥದಲ್ಲಿ, ಈ ಸರಣಿಯ ದೊಡ್ಡ ಸಾಧನೆ ಬಾಕ್ಸ್ ಆಫೀಸ್ ಗಳಿಕೆಯಲ್ಲ (ಕೇವಲ 20-30 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ವಿಶ್ವಾದ್ಯಂತ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ), ಬದಲಿಗೆ ಅದು ಸಾರ್ವಜನಿಕರ ಜ್ಞಾನ ವ್ಯವಸ್ಥೆಯಲ್ಲಿ ತುಕ್ಕು ಹಿಡಿಯುವಂತೆ ಮಾಡುವ ಪ್ರಕ್ರಿಯೆ. ಅಂದರೆ ಸತ್ಯ ಯಾವುದು ಮತ್ತು ಸುಳ್ಳು ಯಾವುದು ಎಂದು ವಿಂಗಡಿಸುವ ಸಾರ್ವಜನಿಕರ ಸಾಮರ್ಥ್ಯವನ್ನು ಇದು ಮೆಲ್ಲಗೆ ಕುಂದಿಸುತ್ತದೆ.
ಉಂಬರ್ಟೊ ಇಕೊ ತಮ್ಮ 'ಉರ್-ಫ್ಯಾಸಿಸಂ' ಪ್ರಬಂಧದಲ್ಲಿ ವಾದಿಸಿದಂತೆ, ಸರ್ವಾಧಿಕಾರಿ ಪ್ರವೃತ್ತಿಯ ಒಂದು ಶಾಶ್ವತ ಲಕ್ಷಣವೆಂದರೆ ಸಮಾಜದಲ್ಲಿ ಯಾವಾಗಲೂ ಒಂದು ತುರ್ತು ಪರಿಸ್ಥಿತಿಯ ಭಾವನೆಯನ್ನು ಕಾಯ್ದುಕೊಳ್ಳುವುದು. ಅಂದರೆ "ನಾವು ಸಹಿಸುವುದಿಲ್ಲ, ನಾವು ಹೋರಾಡುತ್ತೇವೆ" ಎಂಬ ಭಾವನೆಯನ್ನು ಸದಾ ಜಾಗೃತವಾಗಿ ಇರಿಸುವುದು. ಇಂದಿನ ಭಾರತದಲ್ಲಿ, ಅಂತಹ ಭಾಷೆಯು ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟುವಂತೆ ವಿನ್ಯಾಸಗೊಳಿಸಲಾಗಿದೆ.
ಕಲೆಯು ಅದರ ಅತ್ಯಂತ ಶ್ರದ್ಧೆಯ ರೂಪದಲ್ಲಿ, ಬುಡಕಟ್ಟು ಅಥವಾ ಪುರಾತನ ಪ್ರವೃತ್ತಿಗಳನ್ನು ವಿಶ್ಲೇಷಿಸಿ ಅವುಗಳನ್ನು ಸಂಕೀರ್ಣಗೊಳಿಸುತ್ತದೆ. ಆದರೆ ಯಾವಾಗ ಸಿನಿಮಾವು ತನ್ನ ಚೌಕಟ್ಟನ್ನು ಕಿರಿದಾಗಿಸಿ, ಇಡೀ ಸಮುದಾಯಗಳನ್ನೇ ವ್ಯಂಗ್ಯಚಿತ್ರದಂತಹ ಬೆದರಿಕೆಗಳನ್ನಾಗಿ ಬಿಂಬಿಸುತ್ತದೆಯೋ, ಆಗ ಅದು ಯಾವುದೇ ಗಂಭೀರ ಅರ್ಥದಲ್ಲಿ ಕಲೆಯಾಗಿ ಉಳಿಯುವುದಿಲ್ಲ; ಬದಲಿಗೆ ಅದೊಂದು ಪ್ರಚಾರದ ಅಸ್ತ್ರವಾಗುತ್ತದೆ. ಪ್ರಚಾರವು ಪ್ರತಿಯೊಬ್ಬರನ್ನೂ ನಂಬಿಸದಿರಬಹುದು, ಆದರೆ ಅದು ಉಳಿದವರನ್ನು ದಣಿಸುವಲ್ಲಿ ಯಶಸ್ವಿಯಾಗುತ್ತದೆ. ಆ ದಣಿವು ಅಥವಾ ಆಯಾಸದಲ್ಲಿ, ಕಲ್ಪನೆಯು ಸತ್ಯದಂತೆ ಕಾಣಲಾರಂಭಿಸುತ್ತದೆ.

