
ವಿಜಯ್ ನಟನೆಯ 'ಜನ ನಾಯಕನ್' ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ನಟ ರಜನಿಕಾಂತ್ ಇದನ್ನು ಖಂಡಿಸಿದ್ದಾರೆ.
Jana Nayagan| ರಿಲೀಸ್‌ಗೂ ಮುನ್ನವೇ ಆನ್‌ಲೈನ್‌ನಲ್ಲಿ 'ಜನ ನಾಯಕನ್' ಸೋರಿಕೆ: ರಜನಿಕಾಂತ್, ಕಮಲ್ ಹಾಸನ್ ಆಕ್ರೋಶ
Thalapathy Vijay| ವಿಜಯ್ ನಟನೆಯ 'ಜನ ನಾಯಕನ್' ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ರಜನಿಕಾಂತ್, ಕಮಲ್ ಹಾಸನ್ ಮತ್ತು ಸೂರ್ಯ ತೀವ್ರವಾಗಿ ಖಂಡಿಸಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ನಟನೆಯ, ಬಹುನಿರೀಕ್ಷಿತ ರಾಜಕೀಯ ಥ್ರಿಲ್ಲರ್ ಸಿನಿಮಾ 'ಜನ ನಾಯಕನ್' ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಈ ಕೃತ್ಯವನ್ನು ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಮತ್ತು ಸೂರ್ಯ ಸೇರಿದಂತೆ ಹಲವು ಗಣ್ಯರು ತೀವ್ರವಾಗಿ ಖಂಡಿಸಿದ್ದಾರೆ.
ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನ ತೆರೆಕಾಣಲಿರುವ ಕೊನೆಯ ಸಿನಿಮಾವಾಗಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಆದರೆ ಶುಕ್ರವಾರ ಈ ಚಿತ್ರವು ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಕೆವಿಎನ್ ಪ್ರೊಡಕ್ಷನ್ಸ್‌ಗೆ ಆಘಾತ ನೀಡಿದೆ. ಈ ಘಟನೆಯ ಬೆನ್ನಲ್ಲೇ ಪೈರಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ರಜನಿಕಾಂತ್, "ಜನ ನಾಯಕನ್ ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿರುವುದು ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿ. ಚಲನಚಿತ್ರ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಬೇಕು ಮತ್ತು ಸರ್ಕಾರವು ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು," ಎಂದು ಎಕ್ಸ್ ಮೂಲಕ ಆಗ್ರಹಿಸಿದ್ದಾರೆ.
ಪೈರಸಿಗೆ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂದಿರುವ ಕಮಲ್ ಹಾಸನ್, "ಸೆನ್ಸಾರ್ ಮಂಡಳಿಯಲ್ಲಿನ ವಿಳಂಬವೇ ಪೈರಸಿಗೆ ದಾರಿ ಮಾಡಿಕೊಟ್ಟಿದೆ. ಇದು ಕೇವಲ ರಾಜಕೀಯವಲ್ಲ, ಬದಲಿಗೆ ಕಲೆಯ ಮೇಲಿನ ದಾಳಿ. ನೂರಾರು ತಂತ್ರಜ್ಞರ ಮತ್ತು ನಿರ್ಮಾಪಕರ ಶ್ರಮಕ್ಕೆ ಇದರಿಂದ ಧಕ್ಕೆಯಾಗಿದೆ'' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನಟ ಸೂರ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಒಂದು ತಂಡದ ವರ್ಷಗಳ ಪರಿಶ್ರಮಕ್ಕೆ ಈ ರೀತಿ ಆಗಿರುವುದು ಹೃದಯವಿದ್ರಾವಕ. ದಯವಿಟ್ಟು ಯಾರೂ ಪೈರಸಿ ಲಿಂಕ್‌ಗಳನ್ನು ಹಂಚಿಕೊಳ್ಳಬೇಡಿ ಅಥವಾ ನೋಡಿ ಪ್ರೋತ್ಸಾಹಿಸಬೇಡಿ," ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಿನಿಮಾ ಲೀಕ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಸೈಬರ್ ಕ್ರೈಂಗೆ ದೂರು ನೀಡಿದ್ದು, ಪೈರಸಿ ವಿಡಿಯೋಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ನಾಗರಿಕ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದೆ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕೂಡ ಈ ನಡೆಯನ್ನು ಖಂಡಿಸಿದ್ದು, ಸಿನಿಮಾ ಪ್ರೇಮಿಗಳು ಚಿತ್ರಮಂದಿರಗಳಲ್ಲೇ ಸಿನಿಮಾ ವೀಕ್ಷಿಸುವಂತೆ ಕೋರಿದ್ದಾರೆ.

