Jana Nayagan|‘ಜನ ನಾಯಕನ್’ ಪೈರಸಿ- 6 ಮಂದಿ ಬಂಧನ, 300ಕ್ಕೂ ಹೆಚ್ಚು ಲಿಂಕ್‌ಗಳಿಗೆ ಬ್ರೇಕ್‌
x

 ಜನ ನಾಯಕನ್ ಚಿತ್ರವನ್ನು ಅನಧಿಕೃತವಾಗಿ ಡಿಜಿಟಲ್ ವೇದಿಕೆಗಳಲ್ಲಿ ಹಂಚಿದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 

Jana Nayagan|‘ಜನ ನಾಯಕನ್’ ಪೈರಸಿ- 6 ಮಂದಿ ಬಂಧನ, 300ಕ್ಕೂ ಹೆಚ್ಚು ಲಿಂಕ್‌ಗಳಿಗೆ ಬ್ರೇಕ್‌

ತನಿಖೆಯಲ್ಲಿ ಆರೋಪಿಗಳು ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್‌ಗಳು ಮತ್ತು ಶೇರ್ಡ್ ಡ್ರೈವ್ ಲಿಂಕ್‌ಗಳ ಮೂಲಕ ಚಿತ್ರದ ನಕಲು ಪ್ರತಿಗಳನ್ನು ಹರಡಿರುವುದು ಬೆಳಕಿಗೆ ಬಂದಿದೆ.


Click the Play button to hear this message in audio format

ತಮಿಳು ನಟ ವಿಜಯ್ ಅಭಿನಯದ ಬಹುಚರ್ಚಿತ ಚಿತ್ರ ಜನ ನಾಯಕನ್ ಆನ್‌ಲೈನ್‌ನಲ್ಲಿ ಎಚ್‌ಡಿ ಗುಣಮಟ್ಟದಲ್ಲಿ ಅಕ್ರಮವಾಗಿ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸೈಬರ್ ಕ್ರೈಂ ವಿಂಗ್ ದೊಡ್ಡ ಮಟ್ಟದ ಕ್ರಮ ಕೈಗೊಂಡಿದ್ದು, ಆರು ಮಂದಿಯನ್ನು ಬಂಧಿಸಿದೆ.

ಚಿತ್ರದ ನಿರ್ಮಾಪಕ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಗೊಂಡಿದ್ದು, ಚಿತ್ರವನ್ನು ಅನಧಿಕೃತವಾಗಿ ಡಿಜಿಟಲ್ ವೇದಿಕೆಗಳಲ್ಲಿ ಹಂಚಿದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣದ ಬಳಿಕ ರಾಜ್ಯ ಸೈಬರ್ ಕ್ರೈಂ ತನಿಖಾ ಕೇಂದ್ರದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಕಾಪಿರೈಟ್ ಕಾಯ್ದೆ ಹಾಗೂ ಸಿನೆಮಾಟೋಗ್ರಾಫ್ ಕಾಯ್ದೆಗಳಡಿ ಆರೋಪ ದಾಖಲಿಸಲಾಗಿದೆ. ಏಪ್ರಿಲ್ 9ರಂದು ಚಿತ್ರದ ಕೆಲ ದೃಶ್ಯಗಳು ಮಾತ್ರವಲ್ಲ, ಕೆಲವು ತಾಣಗಳಲ್ಲಿ ಸಂಪೂರ್ಣ ಚಿತ್ರವೇ ಸೋರಿಕೆಯಾಗಿರುವ ಮಾಹಿತಿ ಬಹಿರಂಗವಾದ ಬಳಿಕ ತನಿಖೆ ಮತ್ತಷ್ಟು ವೇಗ ಪಡೆಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ವಿಶೇಷ ತಂಡಗಳನ್ನು ರಚಿಸಿ, ಪೈರಸಿ ಲಿಂಕ್‌ಗಳನ್ನು ಪತ್ತೆಹಚ್ಚುವುದು, ಡಿಜಿಟಲ್ ಫರೆನ್ಸಿಕ್ ವಿಶ್ಲೇಷಣೆ ನಡೆಸುವುದು ಮತ್ತು ಅಪ್‌ಲೋಡ್ ಮಾಡಿದವರ ಮೂಲ ಹುಡುಕುವ ಕಾರ್ಯಾಚರಣೆ ಆರಂಭಿಸಿದರು.

ಕ್ಲೌಡ್​ ಮೂಲಕ ಹಂಚಿಕೆ

ತನಿಖೆಯಲ್ಲಿ ಆರೋಪಿಗಳು ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್‌ಗಳು ಮತ್ತು ಶೇರ್ಡ್ ಡ್ರೈವ್ ಲಿಂಕ್‌ಗಳ ಮೂಲಕ ಚಿತ್ರದ ನಕಲು ಪ್ರತಿಗಳನ್ನು ಹರಡಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಮಹತ್ವದ ಡಿಜಿಟಲ್ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ 300ಕ್ಕೂ ಹೆಚ್ಚು ಅಕ್ರಮ ಲಿಂಕ್‌ಗಳನ್ನು ತಡೆಗಟ್ಟುವ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಇನ್ನೂ ಕೆಲವು ಲಿಂಕ್‌ಗಳನ್ನು ತೆಗೆದುಹಾಕುವ ಕೆಲಸ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳು, ವೆಬ್‌ಸೈಟ್‌ಗಳು ಮತ್ತು ಫೈಲ್ ಶೇರ್ ಮಾಡುವ ಸೇವೆಗಳ ಮೇಲೆ ಸೈಬರ್ ವಿಂಗ್ ನಿಗಾ ಇಟ್ಟಿದ್ದು, ಇನ್ನಷ್ಟು ಮಂದಿಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

ಈ ನಡುವೆ, ಪೈರಸಿ ಕಾನೂನುಬದ್ಧವಾಗಿ ಗಂಭೀರ ಅಪರಾಧವಾಗಿದ್ದು, ಚಿತ್ರವನ್ನು ಡೌನ್‌ಲೋಡ್ ಮಾಡುವುದು, ವೀಕ್ಷಿಸುವುದು ಅಥವಾ ಹಂಚಿಕೊಳ್ಳುವುದೂ ಶಿಕ್ಷಾರ್ಹ ಕೃತ್ಯವೆಂದು ಸೈಬರ್ ಕ್ರೈಂ ವಿಂಗ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಕೂಡ ಅಕ್ರಮ ಲಿಂಕ್‌ಗಳನ್ನು ತಕ್ಷಣ ಅಳಿಸಿಹಾಕುವಂತೆ ಮನವಿ ಮಾಡಿದ್ದು, ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ರಾಜಕೀಯ ಅಂಶಗಳನ್ನೊಳಗೊಂಡ ಕಮರ್ಷಿಯಲ್‌ ಚಿತ್ರವೆಂದು ಹೇಳಲಾಗುತ್ತಿರುವ ಜನ ನಾಯಕನ್ ಚಿತ್ರವನ್ನು ಎಚ್. ವಿನೋತ್ ನಿರ್ದೇಶಿಸಿದ್ದಾರೆ. ವಿಜಯ್, ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್ ಮತ್ತು ಗೌತಮ್ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Read More
Next Story