
ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ 'ಮಾತೃಭೂಮಿ' ಟೀಸರ್
ಸಲ್ಮಾನ್ ಖಾನ್ ನಟನೆಯ 'ಬ್ಯಾಟಲ್ ಆಫ್ ಗಲ್ವಾನ್' ಸಿನಿಮಾದ 'ಮಾತೃಭೂಮಿ' ಸಾಂಗ್
ಅಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಸೈನಿಕರ ಅಪ್ರತಿಮ ಧೈರ್ಯವನ್ನು ತೆರೆಯ ಮೇಲೆ ತರಲಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ 'ಮಾತೃಭೂಮಿ' ಎಂಬ ದೇಶಭಕ್ತಿ ಗೀತೆಯ ಟೀಸರ್ ಅನ್ನು ಗಣರಾಜ್ಯೋತ್ಸವದ ಅಂಗವಾಗಿ ಚಿತ್ರತಂಡ ಹಂಚಿಕೊಂಡಿದೆ.
ಕೇವಲ 15 ಸೆಕೆಂಡ್‌ಗಳ ಈ ಕಿರು ವಿಡಿಯೋ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕಠಿಣ ಹವಾಮಾನದ ನಡುವೆ ಗರ್ವದಿಂದ ಹಾರಾಡುತ್ತಿರುವ ತ್ರಿವರ್ಣ ಧ್ವಜವು ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುತ್ತಿದೆ.
'ಮಾತೃಭೂಮಿ' ಎಂಬ ದೇಶಭಕ್ತಿ ಗೀತೆಯ ಟೀಸರ್
ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಮಿಯಾ ಅವರು ಸಂಯೋಜನೆ ನೀಡಿದ್ದು, ಸಮೀರ್ ಅಂಜಾನ್ ಅವರಸಾಹಿತ್ಯವಿದೆ. ವಿಶೇಷವೆಂದರೆ, ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ಅವರ ಸುಮಧುರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದ್ದು, ಸಂಗೀತ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಅಪೂರ್ವ ಲಖಿಯಾ ನಿರ್ದೇಶನದ ಈ ಯುದ್ಧ ಆಧಾರಿತ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಲ್ವಾನ್ ಕಣಿವೆಯ ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರವು ಏಪ್ರಿಲ್ 17ರಂದು ತೆರೆಕಾಣಲಿದೆ.
ಇನ್ನು ಗಣರಾಜ್ಯೋತ್ಸವದ ಅಂಗವಾಗಿ ಸನ್ನಿ ಡಿಯೋಲ್ ಅಭಿನಯದ ಬಹುನಿರೀಕ್ಷಿತ ಯುದ್ಧ ಆಧಾರಿತ ಚಿತ್ರ 'ಬಾರ್ಡರ್ 2' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಆರಂಭ ಪಡೆದಿದೆ. ಕಳೆದ ವರ್ಷದ ಬ್ಲಾಕ್‌ಬಸ್ಟರ್ 'ಧುರಂಧರ್' ಚಿತ್ರದ ದಾಖಲೆಯನ್ನು ಹಿಂದಿಕ್ಕುವ ಮೂಲಕ ಈ ವರ್ಷ ಬಾಲಿವುಡ್‌ಗೆ ಭರ್ಜರಿ ಮುನ್ನುಡಿ ಬರೆದಿದೆ.
ಧುರಂಧರ್ ದಾಖಲೆ ಉಡೀಸ್
ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ 1300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿದ್ದ 'ಧುರಂಧರ್' ಚಿತ್ರ ಮೊದಲ ದಿನ 28.6 ಕೋಟಿ ರೂಪಾಯಿ ಗಳಿಸಿತ್ತು. ಆದರೆ, 'ಬಾರ್ಡರ್ 2' ಮೊದಲ ದಿನವೇ ಸುಮಾರು 30 ಕೋಟಿ ರೂಪಾಯಿ ನಿವ್ವಳ ಕಲೆಕ್ಷನ್ ಮಾಡುವ ಮೂಲಕ ಆ ದಾಖಲೆಯನ್ನು ಮುರಿದಿದೆ. 1997ರ ಐಕಾನಿಕ್ ಸಿನಿಮಾ 'ಬಾರ್ಡರ್'ನ ಮುಂದುವರಿದ ಭಾಗವಾಗಿರುವ ಈ ಚಿತ್ರಕ್ಕೆ ಸನ್ನಿ ಡಿಯೋಲ್ ಅವರ ಹಿಂದಿನ ಯಶಸ್ವಿ ಚಿತ್ರ 'ಗದರ್ 2' ಕ್ರೇಜ್ ಕೂಡ ಪೂರಕವಾಗಿ ಕೆಲಸ ಮಾಡಿದೆ.
'ಬಾರ್ಡರ್ 2' ಮೊದಲ ದಿನವೇ ಸುಮಾರು 30 ಕೋಟಿ ರೂಪಾಯಿ ನಿವ್ವಳ ಕಲೆಕ್ಷನ್ ಮಾಡಿದೆ.
ಗಣರಾಜ್ಯೋತ್ಸವ ರಜೆಯ ಲಾಭ
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶುಕ್ರವಾರ ರಜೆ ಇದ್ದ ಕಾರಣ ಚಿತ್ರಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಚಿತ್ರದ ಕಥೆ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಮಾತ್ರ ಚಿತ್ರಮಂದಿರಗಳತ್ತ ಮುಗಿಬೀಳುತ್ತಿದ್ದಾರೆ. ಸನ್ನಿ ಡಿಯೋಲ್ ಜೊತೆಗೆ ವರುಣ್ ಧವನ್ ಮತ್ತು ದಿಲ್ಜಿತ್ ದೋಸಾಂಜ್ ಇರುವುದು ಯುವ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಸನ್ನಿ ಡಿಯೋಲ್ ಅವರೇ ನಟಿಸಿದ್ದ 'ಗದರ್ 2' ಚಿತ್ರದ ಆರಂಭಿಕ ದಾಖಲೆಗಿಂತ ಕಡಿಮೆ ಇದ್ದರೂ, ಸೀಕ್ವೆಲ್ ಸಿನಿಮಾಗಳ ಸಾಲಿನಲ್ಲಿ ಇದು ಅತ್ಯಂತ ದೊಡ್ಡ ಮಟ್ಟದ ಓಪನಿಂಗ್ ಎಂದು ವ್ಯಾಪಾರ ವಿಶ್ಲೇಷಕರು ಬಣ್ಣಿಸಿದ್ದಾರೆ. ವಾರಾಂತ್ಯದಲ್ಲಿ ಮತ್ತು ಗಣರಾಜ್ಯೋತ್ಸವದ ರಜಾ ದಿನಗಳಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

