
'ಬಾರ್ಡರ್ 2' ಚಿತ್ರವು ದೇಶಾದ್ಯಂತ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ.
'ಬಾರ್ಡರ್ 2'| ಮೊದಲ ದಿನವೇ ದಾಖಲೆ ಬರೆಯಲು ಸಜ್ಜಾದ ಸನ್ನಿ ಡಿಯೋಲ್
ಟ್ರೇಡ್ ರಿಪೋರ್ಟ್‌ಗಳ ಪ್ರಕಾರ, ಚಿತ್ರವು ಮೊದಲ ದಿನಕ್ಕಾಗಿ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮುಂಗಡವಾಗಿ ಮಾರಾಟ ಮಾಡಿದೆ. ಈ ಮೂಲಕ ಸುಮಾರು 12.5 ಕೋಟಿ ರೂ. ಗಳಿಕೆಯನ್ನು ಸಿನಿಮಾ ಮೊದಲೇ ಖಚಿತಪಡಿಸಿಕೊಂಡಿದೆ.
ಬಾಲಿವುಡ್‌ನ 2026ರ ಮೊದಲ ಬ್ಲಾಕ್‌ಬಸ್ಟರ್ ಎನಿಸಿಕೊಂಡಿರುವ 'ಬಾರ್ಡರ್ 2' ಚಿತ್ರವು ದೇಶಾದ್ಯಂತ ಇಂದು ಬಿಡುಗಡೆಯಾಗಿದೆ. ಅನುರಾಗ್ ಸಿಂಗ್ ನಿರ್ದೇಶನದ ಈ ದೇಶಭಕ್ತಿ ಪ್ರಧಾನ ಚಿತ್ರವು ಗಣರಾಜ್ಯೋತ್ಸವದ ರಜಾ ದಿನಗಳ ಮುನ್ನವೇ ಚಿತ್ರಮಂದಿರಗಳಲ್ಲಿ ಕಾಲಿಟ್ಟಿದೆ.
ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಧೂಳೆಬ್ಬಿಸಿದ ಚಿತ್ರ
ಟ್ರೇಡ್ ರಿಪೋರ್ಟ್‌ಗಳ ಪ್ರಕಾರ, ಚಿತ್ರವು ಮೊದಲ ದಿನಕ್ಕಾಗಿ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮುಂಗಡವಾಗಿ ಮಾರಾಟ ಮಾಡಿದೆ. ಈ ಮೂಲಕ ಸುಮಾರು 12.5 ಕೋಟಿ ರೂ. ಗಳಿಕೆಯನ್ನು ಸಿನಿಮಾ ಮೊದಲೇ ಖಚಿತಪಡಿಸಿಕೊಂಡಿದೆ. ಕಳೆದ ವರ್ಷದ ಹಿಟ್ ಚಿತ್ರ 'ಧುರಂಧರ್' ದಾಖಲೆಯನ್ನು 'ಬಾರ್ಡರ್ 2' ಪ್ರಿ-ಸೇಲ್ಸ್ ಹಂತದಲ್ಲೇ ಹಿಂದಿಕ್ಕಿದೆ.
ಮೊದಲ ದಿನದ ಗಳಿಕೆ ಅಂದಾಜು ಎಷ್ಟು?
ಚಿತ್ರವು ಇಂದು ದೇಶಾದ್ಯಂತ ಸುಮಾರು 4,800 ಪರದೆಗಳಲ್ಲಿ ಮತ್ತು 17,000 ಶೋಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಮೊದಲ ದಿನವೇ ಭಾರತದಲ್ಲಿ 35 ರಿಂದ 40 ಕೋಟಿ ರೂ. ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕ ತರಣ್ ಆದರ್ಶ ತಿಳಿಸಿದ್ದಾರೆ. ನಾಲ್ಕು ದಿನಗಳ ಈ ವಾರಾಂತ್ಯದಲ್ಲಿ ಚಿತ್ರದ ಒಟ್ಟು ಗಳಿಕೆ 125 ಕೋಟಿ ರೂ. ದಾಟುವ ನಿರೀಕ್ಷೆಯಿದೆ.
ಸನ್ನಿ ಡಿಯೋಲ್ ಅವರು ಲೆಫ್ಟಿನೆಂಟ್ ಕರ್ನಲ್ ಫತೇ ಸಿಂಗ್ ಕಾಲೇರ್ ಆಗಿ ಮತ್ತೆ ತೆರೆ ಮೇಲೆ ಗುಡುಗಿದ್ದಾರೆ. ಅವರಿಗೆ ಸಾಥ್ ನೀಡಿರುವ ವರುಣ್ ಧವನ್ ಮೇಜರ್ ಹೋಷಿಯಾರ್ ಸಿಂಗ್ ದಹಿಯಾ ಪಾತ್ರದಲ್ಲಿ ಕಾಣಿಸಿಕೊಂಡರೆ, ದಿಲ್ಜಿತ್ ದೋಸಾಂಜ್ ವಾಯುಸೇನೆಯ ವೀರನಾಗಿ ಮಿಂಚಿದ್ದಾರೆ. ಅಹಾನ್ ಶೆಟ್ಟಿ ನೌಕಾಪಡೆಯ ಕಮಾಂಡರ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರವು 1971ರ ಇಂಡೋ-ಪಾಕ್ ಯುದ್ಧದ ವಿಭಿನ್ನ ಆಯಾಮಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.
ಕೆಲವೆಡೆ ಪ್ರದರ್ಶನ ವಿಳಂಬ
ಮುಂಬೈ ಸೇರಿದಂತೆ ಕೆಲವು ನಗರಗಳಲ್ಲಿ ತಾಂತ್ರಿಕ ಕಾರಣಗಳಿಂದ ಮುಂಜಾನೆಯ ಶೋಗಳು ವಿಳಂಬವಾಗಿದ್ದವು. ಇನ್ನು ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರದ ಬಿಡುಗಡೆಗೆ ನಿಷೇಧ ಹೇರಿರುವುದು ವಿದೇಶಿ ಗಳಿಕೆಯ ಮೇಲೆ ಕೊಂಚ ಪರಿಣಾಮ ಬೀರಬಹುದು ಎನ್ನಲಾಗಿದೆ.
ಭಾರತೀಯ ಚಿತ್ರರಂಗದ ದಂತಕಥೆ ಧರ್ಮೇಂದ್ರ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ನಿಧನ ಹೊಂದಿದ್ದರು. ಅವರು ಅಗಲಿ ಎರಡು ತಿಂಗಳು ಕಳೆಯುವಷ್ಟರಲ್ಲಿ, ಅವರ ಹಿರಿಯ ಪುತ್ರ ಸನ್ನಿ ಡಿಯೋಲ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಬಾರ್ಡರ್ 2' ಬಿಡುಗಡೆಗೊಂಡಿದ್ದು, ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.
ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ಮಾಪಕಿ ನಿಧಿ ದತ್ತಾ ಅವರು ಧರ್ಮೇಂದ್ರ ಅವರಿಗೆ ಚಿತ್ರದಲ್ಲಿ ಒಂದು ವಿಶೇಷ ಗೌರವ ಅರ್ಪಿಸಲಾಗುವುದು ಎಂದು ತಿಳಿಸಿದ್ದರು. ಈಗ ಸಿನಿಮಾ ತೆರೆಕಂಡಿದ್ದು, ಆ ವಿಶೇಷ ಗೌರವ ಏನೆಂಬುದು ಬಹಿರಂಗವಾಗಿದೆ.
ಸನ್ನಿ ಡಿಯೋಲ್ ಹೆಸರಿಗಿಂತ ಮೊದಲು ತಂದೆಯ ಹೆಸರು
ಸಿನಿಮಾ ಆರಂಭವಾಗುತ್ತಿದ್ದಂತೆ ಬರುವ ಆರಂಭಿಕ ಕ್ರೆಡಿಟ್ಸ್‌ನಲ್ಲಿ ಸನ್ನಿ ಡಿಯೋಲ್ ಅವರ ಹೆಸರನ್ನು ಅತ್ಯಂತ ಭಾವನಾತ್ಮಕವಾಗಿ ಪ್ರದರ್ಶಿಸಲಾಗಿದೆ. ಸ್ವತಃ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ, ಸನ್ನಿ ಡಿಯೋಲ್ ಈ ಚಿತ್ರದಲ್ಲಿ ತಮ್ಮ ಹೆಸರನ್ನು "ಧರ್ಮೇಂದ್ರ ಜೀ ಕಾ ಬೇಟಾ" (ಧರ್ಮೇಂದ್ರ ಅವರ ಪುತ್ರ) ಎಂದು ಪರಿಚಯಿಸಿಕೊಂಡಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅವರ ಹೆಸರಿನ ಕೆಳಗೆ "ಧರ್ಮೇಂದ್ರ ಅವರ ಮಗ" ಎಂದು ನಮೂದಿಸುವ ಮೂಲಕ ತಮ್ಮ ತಂದೆಗೆ ಗೌರವ ಸಲ್ಲಿಸಿದ್ದಾರೆ.
ಭಾವಪರವಶರಾದ ಅಭಿಮಾನಿಗಳು
ಸನ್ನಿ ಡಿಯೋಲ್ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಯೊಬ್ಬರು ಪ್ರತಿಕ್ರಿಯಿಸುತ್ತಾ, "ಇದು ಕೇವಲ ಹೆಸರಲ್ಲ, ತಂದೆ-ಮಗನ ನಡುವಿನ ಗಾಢವಾದ ಭಾವನೆ. ಸನ್ನಿ ಪಾಜಿ ತಮ್ಮ ತಂದೆಯ ಮೇಲಿರುವ ಪ್ರೀತಿಯನ್ನು ಈ ಮೂಲಕ ತೋರಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆಗೆ ವರುಣ್ ಧವನ್ ಮತ್ತು ದಿಲ್ಜಿತ್ ದೋಸಾಂಜ್ ಅವರ ನಟನೆಗೂ ಪ್ರೇಕ್ಷಕರು ಫಿದಾ ಆಗಿದ್ದಾರೆ.
'ಬಾರ್ಡರ್' ಚಿತ್ರಕ್ಕೆ ಧರ್ಮೇಂದ್ರ ಅವರೇ ಸ್ಫೂರ್ತಿ
ಇತ್ತೀಚೆಗೆ ನಡೆದ ʻಘರ್ ಕಬ್ ಆವೋಗೆʼ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಸನ್ನಿ ಡಿಯೋಲ್ ಅವರು ಒಂದು ರಹಸ್ಯ ಬಿಚ್ಚಿಟ್ಟಿದ್ದರು. "ನಾನು 'ಬಾರ್ಡರ್' ಸಿನಿಮಾ ಮಾಡಲು ಮುಖ್ಯ ಕಾರಣ ನನ್ನ ತಂದೆ. ಅವರು ನಟಿಸಿದ್ದ 'ಹಕೀಕತ್' ಚಿತ್ರವನ್ನು ನೋಡಿ ನಾನು ಪ್ರಭಾವಿತನಾಗಿದ್ದೆ. ಅಂದೇ ನಾನು ಕೂಡ ತಂದೆಯಂತೆ ಇಂತಹ ಒಂದು ದೇಶಪ್ರೇಮದ ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೆ" ಎಂದು ಸ್ಮರಿಸಿದ್ದರು.
ಧರ್ಮೇಂದ್ರ ಅವರ ಕೊನೆಯ ಸಿನಿಮಾ 'ಇಕ್ಕಿಸ್'
ಧರ್ಮೇಂದ್ರ ಅವರ ಕೊನೆಯ ಚಿತ್ರ 'ಇಕ್ಕಿಸ್' ಮೂರು ವಾರಗಳ ಹಿಂದಷ್ಟೇ ಬಿಡುಗಡೆಯಾಗಿ 2026ರ ಮೊದಲ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರದಲ್ಲಿ ಅಗಸ್ತ್ಯ ನಂದಾ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇದು ಧರ್ಮೇಂದ್ರ ಅವರ ವೃತ್ತಿಜೀವನದ ವಿದಾಯದ ಚಿತ್ರವಾಗಿದೆ.

