
ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಮಂಗಳವಾರ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತೀಯ ಚಿತ್ರರಂಗದ ದಂತಕಥೆ, ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಆಸ್ಪತ್ರೆಗೆ ದಾಖಲು
ತಂದೆಯ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ನಟ ಸಲ್ಮಾನ್ ಖಾನ್, ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ ಹಾಗೂ ಅಳಿಯಂದಿರಾದ ಅತುಲ್ ಅಗ್ನಿಹೋತ್ರಿ ಮತ್ತು ಆಯುಷ್ ಶರ್ಮಾ ಆಸ್ಪತ್ರೆಗೆ ಧಾವಿಸಿದ್ದಾರೆ.
ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮಂಗಳವಾರ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಸಲೀಂ ಖಾನ್ ಅವರಿಗೆ ನಿಖರವಾಗಿ ಯಾವ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂಬ ಬಗ್ಗೆ ಅವರ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ತಂದೆಯ ಆರೋಗ್ಯ ಹದಗೆಟ್ಟ ವಿಷಯ ತಿಳಿಯುತ್ತಿದ್ದಂತೆಯೇ ನಟ ಸಲ್ಮಾನ್ ಖಾನ್ ಬಿಗಿ ಭದ್ರತೆಯೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸಲ್ಮಾನ್ ಖಾನ್ ಅವರ ಜೊತೆಗೆ ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ, ಅಳಿಯಂದಿರಾದ ಅತುಲ್ ಅಗ್ನಿಹೋತ್ರಿ ಮತ್ತು ಆಯುಷ್ ಶರ್ಮಾ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಸಲೀಂ ಖಾನ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಸಲೀಂ ಖಾನ್ ಅವರು ಕಳೆದ ನವೆಂಬರ್‌ನಲ್ಲಿ ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವಯಸ್ಸಿನಲ್ಲೂ ಅವರು ಅತ್ಯಂತ ಸಕ್ರಿಯರಾಗಿದ್ದು, ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಪ್ರತಿನಿತ್ಯ ವಾಕಿಂಗ್ ಮಾಡುವ ಅಭ್ಯಾಸ ಹೊಂದಿರುವ ಅವರು ಇತ್ತೀಚಿನವರೆಗೂ ಮಾಧ್ಯಮಗಳೊಂದಿಗೆ ಮತ್ತು ಸಂದರ್ಶನಗಳಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸುತ್ತಿದ್ದರು.
ಭಾರತೀಯ ಚಿತ್ರರಂಗದ ದಂತಕಥೆಯಾಗಿರುವ ಸಲೀಂ ಖಾನ್ ಅವರು ಜಾವೇದ್ ಅಖ್ತರ್ ಅವರೊಂದಿಗೆ ಸೇರಿ 'ಶೋಲೆ', 'ಜಂಜೀರ್', 'ದೀವಾರ್' ಮತ್ತು 'ಡಾನ್' ನಂತಹ ಐತಿಹಾಸಿಕ ಸಿನಿಮಾಗಳನ್ನು ನೀಡಿದ್ದಾರೆ. ಬಾಲಿವುಡ್‌ನಲ್ಲಿ 'ಆಂಗ್ರಿ ಯಂಗ್ ಮ್ಯಾನ್' ಎಂಬ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದ ಕೀರ್ತಿ ಈ ಜೋಡಿಗೆ ಸಲ್ಲುತ್ತದೆ. ಸಲೀಂ ಖಾನ್ ಅವರು ಕಥೆ ಮತ್ತು ಪಾತ್ರಗಳನ್ನು ರೂಪಿಸುವಲ್ಲಿ ನಿಪುಣರಾಗಿದ್ದರೆ, ಜಾವೇದ್ ಅಖ್ತರ್ ಸಂಭಾಷಣೆಯ ಜವಾಬ್ದಾರಿ ಹೊರುತ್ತಿದ್ದರು.
ಎರಡು ಮದುವೆಯಾಗಿದ್ದ ಸಲೀಂ ಖಾನ್
ಸಲೀಂ ಖಾನ್ ಅವರು ಎರಡು ಮದುವೆಯಾಗಿದ್ದಾರೆ. ಅವರ ಮೊದಲ ಪತ್ನಿ ಸುಶೀಲಾ ಚರಕ್ ಮತ್ತು ಎರಡನೇ ಪತ್ನಿ ಹೆಲೆನ್ ರಿಚರ್ಡ್ಸನ್. ಅವರು ಸಲ್ಮಾನ್, ಸೋಹೈಲ್, ಅರ್ಬಾಜ್, ಅಲ್ವಿರಾ ಮತ್ತು ಅರ್ಪಿತಾ ಖಾನ್ ಅವರ ತಂದೆಯಾಗಿದ್ದಾರೆ.
ಸಲೀಂ ಖಾನ್ ಅವರ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆಸ್ಪತ್ರೆಯ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕುಟುಂಬದ ಸದಸ್ಯರು ಅಧಿಕೃತ ಹೇಳಿಕೆ ನೀಡುವವರೆಗೆ ಅಭಿಮಾನಿಗಳು ಆತಂಕದಲ್ಲಿದ್ದಾರೆ.

