
ಹಳದಿ ಶಾಸ್ತ್ರದಲ್ಲಿ ರಶ್ಮಿಕಾ-ವಿಜಯ್ ಬಣ್ಣದ ಆಟ
ರಶ್ಮಿಕಾ-ವಿಜಯ್ ಹಳದಿ ಶಾಸ್ತ್ರದಲ್ಲಿ 'ಬಣ್ಣದ ಯುದ್ಧ': ಮದುವೆಯ ಒಳಗಿನ ಗುಟ್ಟು ಬಿಚ್ಚಿಟ್ಟ ಸ್ಟಾರ್ ಜೋಡಿ
ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ-ವಿಜಯ್ ಜೋಡಿ, ಇದೀಗ ತಮ್ಮ ಹಳದಿ ಶಾಸ್ತ್ರದ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಖ್ಯಾತ ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಸಂಭ್ರಮದ ಒಂದೊಂದೇ ಸುಂದರ ಕ್ಷಣಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಹಸೆಮಣೆ ಏರಿದ ಈ ಜೋಡಿ, ತಮ್ಮ ಮದುವೆಯ ಹಿಂದಿನ ಧಾರ್ಮಿಕ ವಿಧಿವಿಧಾನಗಳ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಫೆಬ್ರವರಿ 25 ರಂದು ನಡೆದ ಇವರ ಹಳದಿ ಶಾಸ್ತ್ರದ ಸಮಾರಂಭವು ಕೇವಲ ಸಂಪ್ರದಾಯಕ್ಕೆ ಸೀಮಿತವಾಗದೆ, ಬಣ್ಣಗಳ ಓಕುಳಿಯಾಟವಾಗಿ ಬದಲಾದ ಸ್ವಾರಸ್ಯಕರ ಸಂಗತಿಯನ್ನು ರಶ್ಮಿಕಾ ವಿವರಿಸಿದ್ದಾರೆ.
ತಮ್ಮ ಹಳದಿ ಸಂಭ್ರಮದ ಬಗ್ಗೆ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ಅದು ಹಳದಿ ಶಾಸ್ತ್ರಕ್ಕಿಂತ ಹೆಚ್ಚಾಗಿ ಹೋಳಿ ಹಬ್ಬದಂತೆ ಭಾಸವಾಯಿತು ಎಂದಿದ್ದಾರೆ. ಅಂದು ಅತಿಥಿಗಳೆಲ್ಲರೂ ಒಬ್ಬರಿಗೊಬ್ಬರು ಬಣ್ಣ ಮತ್ತು ನೀರಿನಲ್ಲಿ ಮಿಂದೆದ್ದ ಕಾರಣ, ಈಗಲೂ ತಮ್ಮ ಕೂದಲಿನಲ್ಲಿ ಕೆಂಪು ಬಣ್ಣದ ಕುರುಹು ಉಳಿದಿದೆ ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ವಿಶೇಷವೆಂದರೆ, ಅಂದು ನಡೆದ ಆಟಗಳಲ್ಲಿ ತಮ್ಮ 'ಟೀಮ್ ಬ್ರೈಡ್' ಜೊತೆಗೂಡಿ ತಾವು ಗೆದ್ದಿರುವುದಾಗಿ ಮತ್ತು ಸ್ವತಃ ವಿಜಯ್ ಕೂಡ ತಮ್ಮ ತಂಡವನ್ನೇ ಬೆಂಬಲಿಸಿದ್ದರು ಎಂದು ರಶ್ಮಿಕಾ ಖುಷಿಯಿಂದ ಹಂಚಿಕೊಂಡಿದ್ದಾರೆ.
ಇನ್ನು ವಿಜಯ್ ದೇವರಕೊಂಡ ಅವರು ಈ ಸಂಭ್ರಮದ ಬಗ್ಗೆ ಮಾತನಾಡುತ್ತಾ, ಹಿಂದಿನ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಿಂದಾಗಿ ಎಲ್ಲರೂ ಸುಸ್ತಾಗಿದ್ದರೂ, ಮರುದಿನ ಬೆಳಿಗ್ಗೆ ಹಳದಿ ಶಾಸ್ತ್ರದ ಉತ್ಸಾಹ ಎಲ್ಲರನ್ನೂ ಎಚ್ಚರವಾಗಿರಿಸಿತ್ತು ಎಂದಿದ್ದಾರೆ.
ಹಳದಿ ಶಾಸ್ತ್ರದಲ್ಲಿ ಎಲ್ಲರೂ ಪರಸ್ಪರ ಬಣ್ಣ ಎರಚಾಡಿ ಯುದ್ಧದಂತ ವಾತಾವರಣ ನಿರ್ಮಿಸಿದ್ದರು. ಈ ಸಂಭ್ರಮದಲ್ಲಿ ತಾವು ಧರಿಸಿದ್ದ ಪ್ರೀತಿಯ ಕುರ್ತಾ ಕೂಡ ಬಣ್ಣಗಳಿಂದ ಹಾಳಾಯಿತು, ಆದರೆ ಆ ಕ್ಷಣದ ಸಂತೋಷಕ್ಕೆ ಅದು ಸಾರ್ಥಕವಾಯಿತು ಎಂದು ವಿಜಯ್ ನೆನಪಿಸಿಕೊಂಡಿದ್ದಾರೆ.
ಉದಯಪುರದ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆದ ಈ ಅದ್ಧೂರಿ ವಿವಾಹವು ಪ್ರಕೃತಿಯ ಮಡಿಲಲ್ಲಿ ಅತ್ಯಂತ ಸುಂದರವಾಗಿ ನೆರವೇರಿತು. ತಾಯ್ನಾಡಿನಲ್ಲೇ ಮದುವೆಯಾಗಬೇಕೆಂಬ ಹಂಬಲ ಹೊಂದಿದ್ದ ವಿಜಯ್ ಅವರಿಗೆ ಈ ತಾಣ ಮತ್ತು ಅಲ್ಲಿನ ಆತಿಥ್ಯ ಬಹಳ ಇಷ್ಟವಾಗಿದ್ದು, ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಕುಟುಂಬದೊಂದಿಗೆ ಅಲ್ಲಿಗೆ ರಜೆ ಕಳೆಯಲು ಹೋಗುವ ಆಲೋಚನೆ ಇರುವುದಾಗಿಯೂ ತಿಳಿಸಿದ್ದಾರೆ.
ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಈಗ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

