
ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಇನ್‌ಫ್ಲುಯೆನ್ಸರ್‌ಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ರಶ್ಮಿಕಾ 24 ಗಂಟೆಗಳ ಗಡುವು ನೀಡಿದ್ದಾರೆ.
ಖಾಸಗಿ ಆಡಿಯೋ ಲೀಕ್: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ನಟಿ ರಶ್ಮಿಕಾ ಮಂದಣ್ಣ
ಸುಮಾರು ಎಂಟು ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಖಾಸಗಿ ಸಂಭಾಷಣೆಯ ಆಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಎಂಟು ವರ್ಷಗಳ ಹಳೆಯ ಖಾಸಗಿ ಸಂಭಾಷಣೆಯ ತುಣುಕನ್ನು ಹರಿಬಿಟ್ಟವರ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಸುದೀರ್ಘ ಪತ್ರ ಬರೆದಿರುವ ಅವರು, ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುಮಾರು ಎಂಟು ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಖಾಸಗಿ ಸಂಭಾಷಣೆಯ ಆಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆಡಿಯೋ ರಶ್ಮಿಕಾ ಅವರ ಹಳೆಯ ಎಂಗೇಜ್‌ಮೆಂಟ್ ವಿಚಾರಕ್ಕೆ ಸಂಬಂಧಿಸಿದ್ದು, ಇದನ್ನು ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ, ಈಗ ಸಂದರ್ಭಕ್ಕೆ ತಕ್ಕಂತೆ ತಿರುಚಿ ಪ್ರಸಾರ ಮಾಡಲಾಗುತ್ತಿದೆ ಎಂದು ರಶ್ಮಿಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೌನ ಮುರಿದ ರಶ್ಮಿಕಾ
ಕಳೆದ ಎಂಟು ವರ್ಷಗಳಿಂದ ತಮ್ಮ ವಿರುದ್ಧ ನಡೆಯುತ್ತಿರುವ ವೈಯಕ್ತಿಕ ದಾಳಿಗಳ ಬಗ್ಗೆ ರಶ್ಮಿಕಾ ಮೌನವಾಗಿದ್ದರು. ಆದರೆ ಈಗ ತಮ್ಮ ಕುಟುಂಬಸ್ಥರನ್ನು ಈ ವಿವಾದಕ್ಕೆ ಎಳೆದು ತಂದಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಇಷ್ಟು ವರ್ಷ ನನ್ನ ಮೇಲೆ ಮಾತ್ರ ದಾಳಿ ನಡೆದಾಗ ನಾನು ಮೌನವಾಗಿದ್ದೆ. ಆದರೆ ಇಂದು ನನ್ನ ಕುಟುಂಬ ಮತ್ತು ನನಗೆ ಹತ್ತಿರವಿರುವವರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಹೀಗಾಗಿ ಈಗ ನಾನು ಮೌನ ಮುರಿಯಲೇಬೇಕಿದೆ. ನನ್ನ ವೈಯಕ್ತಿಕ ಜೀವನದ ಮೇಲೆ ನಡೆಯುತ್ತಿರುವ ಈ ದಾಳಿಗೆ ನಾನು ಇಂದೇ ಗೆರೆ ಎಳೆಯುತ್ತಿದ್ದೇನೆʼʼ ಎಂದು ತಿಳಿಸಿದ್ದಾರೆ.
ತಮ್ಮ ತಾಯಿಯ ಸಂಭಾಷಣೆಯನ್ನು ಒಳಗೊಂಡಿರುವ ವಿಡಿಯೋ ಅಥವಾ ಸುದ್ದಿಯನ್ನು ಹಂಚಿಕೊಂಡಿರುವ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಇನ್‌ಫ್ಲುಯೆನ್ಸರ್‌ಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ರಶ್ಮಿಕಾ 24 ಗಂಟೆಗಳ ಗಡುವು ನೀಡಿದ್ದಾರೆ. ಒಂದು ವೇಳೆ ಈ ಅವಧಿಯೊಳಗೆ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕದಿದ್ದರೆ, ಅಂತಹವರ ವಿರುದ್ಧ ಮಾನಹಾನಿ ಮತ್ತು ಖಾಸಗಿತನದ ಉಲ್ಲಂಘನೆಯ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಕನ್ನಡಿಗರಿಗೆ ಧನ್ಯವಾದ
ತಮ್ಮ ಹೇಳಿಕೆಯ ಕೊನೆಯಲ್ಲಿ ಕನ್ನಡದಲ್ಲಿ ಬರೆದಿರುವ ರಶ್ಮಿಕಾ, ವರ್ಷಗಳಿಂದ ತಮಗೆ ಬೆಂಬಲವಾಗಿ ನಿಂತಿರುವ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ನನ್ನ ವೈಯಕ್ತಿಕ ಜೀವನದ ನಿರ್ಧಾರಗಳು ನನಗೆ ಸೇರಿದ್ದು. ಅದನ್ನು ಬೇರೆಯವರು ನಿರ್ಧರಿಸಲು ಸಾಧ್ಯವಿಲ್ಲ," ಎಂದು ಹೇಳುವ ಮೂಲಕ ತಮ್ಮ ಜೀವನದ ನಿರ್ಧಾರಗಳ ಬಗ್ಗೆ ಸಷ್ಟನೆ ನೀಡಿದ್ದಾರೆ.

