
Dhurandhar 2| ಸಾವಿರ ಕೋಟಿ ಕಲೆಕ್ಷನ್ ಬೆನ್ನಲ್ಲೇ ಬಿಗ್ ಶಾಕ್- 'ಧುರಂಧರ್ 2'ಗೆ ಕಾನೂನು ಸಂಕಷ್ಟ
1989ರ 'ತ್ರಿದೇವ್' ಚಿತ್ರದ 'ರಂಗ್ ದೇ ಲಾಲ್ (ಓಯೆ ಓಯೆ)' ಹಾಡನ್ನು ಅನಧಿಕೃತವಾಗಿ ಬಳಸಿದ್ದಕ್ಕಾಗಿ ಆದಿತ್ಯ ಧರ್ ವಿರುದ್ಧ ತ್ರಿಮೂರ್ತಿ ಫಿಲ್ಮ್ಸ್ ಮೊಕದ್ದಮೆ ಹೂಡಿದೆ.
ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಸಿ ನಾಗಾಲೋಟ ಮುಂದುವರಿಸಿರುವ ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2: ದಿ ರಿವೆಂಜ್' ಸಿನಿಮಾ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಲ್ಲಿ ಅನುಮತಿಯಿಲ್ಲದೆ ಹಾಡೊಂದನ್ನು ಬಳಸಿಕೊಂಡ ಆರೋಪದ ಮೇಲೆ ನಿರ್ಮಾಣ ಸಂಸ್ಥೆ 'ತ್ರಿಮೂರ್ತಿ ಫಿಲ್ಮ್ಸ್' ನ್ಯಾಯಾಲಯದ ಮೆಟ್ಟಿಲೇರಿದೆ.
ಹಾಡಿನ ಹಕ್ಕುಗಳ ವಿವಾದ
1989ರ ಸೂಪರ್ ಹಿಟ್ ಚಿತ್ರ 'ತ್ರಿದೇವ್'ನ ಜನಪ್ರಿಯ ಹಾಡು 'ರಂಗ್ ದೇ ಲಾಲ್' (ಓಯೆ ಓಯೆ) ಅನ್ನು 'ಧುರಂಧರ್ 2' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ, ಈ ಹಾಡನ್ನು ಬಳಸಲು ಅಗತ್ಯವಿರುವ ಯಾವುದೇ ಪರವಾನಗಿ ಅಥವಾ ಅನುಮತಿಯನ್ನು ಆದಿತ್ಯ ಧರ್ ಅವರ ಬಿ62 ಸ್ಟುಡಿಯೋಸ್ ಪಡೆದುಕೊಂಡಿಲ್ಲ ಎಂದು 'ಬಾರ್ ಅಂಡ್ ಬೆಂಚ್' ವರದಿ ಮಾಡಿದೆ. ಕಲ್ಯಾಣ್‌ಜಿ-ಆನಂದ್‌ಜಿ ಮತ್ತು ವಿಜು ಶಾ ಸಂಗೀತ ನೀಡಿರುವ, ಆನಂದ್ ಬಕ್ಷಿ ಸಾಹಿತ್ಯವಿರುವ ಈ ಹಾಡಿನ ಪೂರ್ಣ ಹಕ್ಕುಗಳು ತಮ್ಮ ಬಳಿ ಇವೆ ಎಂದು ತ್ರಿಮೂರ್ತಿ ಫಿಲ್ಮ್ಸ್ ವಾದಿಸಿದೆ.
ಕಾನೂನು ಕ್ರಮ ಮತ್ತು ಬೇಡಿಕೆ
ಸಿನಿಮಾ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಪ್ರಚಾರದ ವಸ್ತುಗಳಲ್ಲಿ ಈ ಹಾಡಿನ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ತ್ರಿಮೂರ್ತಿ ಫಿಲ್ಮ್ಸ್ ಇಂಜೆಕ್ಷನ್ ಆರ್ಡರ್ (ತಡೆಯಾಜ್ಞೆ) ಕೋರಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿರುವುದರಿಂದ ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ 'ಧುರಂಧರ್ 2':
ಆದಿತ್ಯ ಧರ್ ನಿರ್ದೇಶನದ, ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬೆಂಬಲವಿರುವ ಈ ಸ್ಪೈ ಆಕ್ಷನ್ ಡ್ರಾಮಾದಲ್ಲಿ ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 2025ರ 'ಧುರಂಧರ್' ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರವು ಜಸ್ಕಿರತ್ ಸಿಂಗ್ ರಂಗಿ ಎಂಬ ಪಾತ್ರದ ಭೂಗತ ಲೋಕದ ಬೆಳವಣಿಗೆಯ ಕಥೆಯನ್ನು ಹೊಂದಿದೆ.
ತಾರಾಗಣ
ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಂಜಯ್ ದತ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಮತ್ತು ಯಾಮಿ ಗೌತಮ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾನೂನು ಸಂಘರ್ಷದ ನಡುವೆಯೂ ಸಿನಿಮಾ ಭಾರತದಲ್ಲಿ 1,000 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲು ದಾಟಿದೆ. ಇತ್ತೀಚೆಗಷ್ಟೇ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಈ ಚಿತ್ರವನ್ನು 'ಅತ್ಯಗತ್ಯವಾಗಿ ನೋಡಲೇಬೇಕಾದ ಸಿನಿಮಾ' ಎಂದು ಹೊಗಳಿದ್ದರು.

