ದೈವಾರಾಧನೆಗೆ ಅಪಮಾನ: ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್‌
x

ದೈವಾರಾಧನೆಗೆ ಅಪಮಾನ: ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್‌

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕರಾವಳಿಯ 'ದೈವಾರಾಧನೆ' ಸಂಪ್ರದಾಯವನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


Click the Play button to hear this message in audio format

ಕರಾವಳಿಯ ಪವಿತ್ರ ದೈವಾರಾಧನೆ ಸಂಪ್ರದಾಯವನ್ನು ಅವಹೇಳನ ಮಾಡಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕಳೆದ ನವೆಂಬರ್ ನಲ್ಲಿ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ವೇದಿಕೆಯ ಮೇಲೆ 'ಕಾಂತಾರ: ಚಾಪ್ಟರ್ 1' ಚಿತ್ರದ ನಟ ರಿಷಬ್ ಶೆಟ್ಟಿ ಅವರ ಸಮ್ಮುಖದಲ್ಲೇ ದೈವದ ನರ್ತನವನ್ನು ಅನುಕರಿಸಿದ್ದರು. ಅಷ್ಟೇ ಅಲ್ಲದೆ, ಪವಿತ್ರ 'ಚಾವುಂಡಿ ದೈವ'ವನ್ನು 'ಹೆಣ್ಣು ಭೂತ' ಎಂದು ಸಂಬೋಧಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ದೂರಿನ ವಿವರ

ವಕೀಲ ಪ್ರಶಾಂತ್ ಮೆತ್ತಲ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ರಣವೀರ್ ಸಿಂಗ್ ಉದ್ದೇಶಪೂರ್ವಕವಾಗಿಯೇ ದೈವಾರಾಧನೆ ಅಣಕಿಸಿದ್ದಾರೆ. ದೈವದ ದೃಶ್ಯವನ್ನು ವೇದಿಕೆ ಮೇಲೆ ಮಾಡದಂತೆ ವಿನಂತಿಸಿದ್ದರೂ ರಣವೀರ್ ಸಿಂಗ್ ಅದನ್ನು ನಿರ್ಲಕ್ಷಿಸಿ ಪಂಜುರ್ಲಿ ಮತ್ತು ಗುಳಿಗ ದೈವದ ಅಭಿವ್ಯಕ್ತಿಗಳನ್ನು ಹಾಸ್ಯಾಸ್ಪದವಾಗಿ ಪ್ರದರ್ಶಿಸಿದ್ದಾರೆ. ಕರಾವಳಿ ಭಾಗದಲ್ಲಿ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆರಾಧಿಸುವ ಚಾವುಂಡಿ ದೈವವನ್ನು 'ಭೂತ' ಎಂದು ಕರೆದಿರುವುದು ಕೋಟ್ಯಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೆಂಗಳೂರಿನ ನ್ಯಾಯಾಲಯದ ನಿರ್ದೇಶನ ಮೇರೆಗೆ ಹೈಗ್ರೌಂಡ್ಸ್ ಪೊಲೀಸರು ರಣವೀರ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿ ಸೆಕ್ಷನ್ 196( ಸಾರ್ವಜನಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಭಂಗ), ಸೆಕ್ಷನ್ 299(ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆ ಕೆರಳಿಸುವುದು), ಸೆಕ್ಷನ್ 302(ಮಾತು ಅಥವಾ ಸನ್ನೆಗಳ ಮೂಲಕ ಧಾರ್ಮಿಕ ನಂಬಿಕೆಗಳಿಗೆ ಅವಮಾನ) ಅಡಿ ಪ್ರಕರಣ ದಾಖಲಿಸಲಾಗಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿತ್ತು. ಈ ಬಗ್ಗೆ ನಟ ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಕ್ಷಮೆ ಯಾಚಿಸಿದ್ದರೂ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಬೆನ್ನಲ್ಲೇ, ಅದರ ಪ್ರೀಕ್ವೆಲ್ ಆಗಿ 'ಕಾಂತಾರ: ಚಾಪ್ಟರ್ 1' ಬಿಡುಗಡೆಯಾಗಿತ್ತು.

ಮೊದಲ ಭಾಗದಲ್ಲಿ 1990ರ ಕಾಲಘಟ್ಟದ ಕಥೆ ನೋಡಿದ್ದ ಪ್ರೇಕ್ಷಕರಿಗೆ, 'ಚಾಪ್ಟರ್ 1' ಸುಮಾರು 1500 ವರ್ಷಗಳ ಹಿಂದಿನ ಇತಿಹಾಸಕ್ಕೆ ಕರೆದೊಯ್ಯುವಂತಿತ್ತು. ಕ್ರಿ.ಶ. 4ನೇ ಶತಮಾನದ ಕದಂಬರ ಕಾಲದ ಹಿನ್ನೆಲೆಯಲ್ಲಿ ಸಾಗಿರುವ ಕಥೆಯಲ್ಲಿ ದೈವದ ಉಗಮ, ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷ ಹಾಗೂ ರಾಜವಂಶಗಳ ಆಡಳಿತದ ನಡುವೆ ದೈವತ್ವವು ಹೇಗೆ ನೆಲೆ ನಿಂತಿತು ಎಂಬುದನ್ನು ನಿರ್ದೇಶಕರು ರೋಚಕವಾಗಿ ಕಟ್ಟಿಕೊಟ್ಟಿದ್ದರು.

ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತವಿತ್ತು. ಚಿತ್ರದಲ್ಲಿ ರುಕ್ಮಿಣಿ ವಸಂತ್ ರಾಜಕುಮಾರಿ ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Read More
Next Story