Dhurandhar -2| ಸಿಖ್ ಧರ್ಮಕ್ಕೆ ಅಪಮಾನ ಆರೋಪ;  ನಟ ರಣವೀರ್ ಸಿಂಗ್ ವಿರುದ್ಧ ದೂರು
x

'ಧುರಂಧರ್: ದಿ ರಿವೇಂಜ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 700 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿರುವ ಬೆನ್ನಲ್ಲೇ ಕಾನೂನು ಸಂಕಷ್ಟಕ್ಕೆ ಸಿಲುಕಿದೆ.

Dhurandhar -2| ಸಿಖ್ ಧರ್ಮಕ್ಕೆ ಅಪಮಾನ ಆರೋಪ; ನಟ ರಣವೀರ್ ಸಿಂಗ್ ವಿರುದ್ಧ ದೂರು

ಚಿತ್ರದ ಪೋಸ್ಟರ್‌ನಲ್ಲಿ ರಣವೀರ್ ಸಿಂಗ್ ಅವರು ಸಿಖ್ ಸಂಪ್ರದಾಯದ ಪವಿತ್ರ ಪಗ್ಡಿ ಮತ್ತು ಕಡಾ ಧರಿಸಿ ಧೂಮಪಾನ ಮಾಡುತ್ತಿರುವುದು ಸಿಖ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.


Click the Play button to hear this message in audio format

ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೇಂಜ್’ ಚಿತ್ರದ ಪ್ರಚಾರ ಸಾಮಗ್ರಿಗಳು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಸಿಖ್ ಸಮುದಾಯದ ಸಂಘಟನೆಯೊಂದು ಮುಂಬೈ ಪೊಲೀಸರಿಗೆ ದೂರು ನೀಡಿದೆ.

‘ಸಿಖ್ಸ್ ಇನ್ ಮಹಾರಾಷ್ಟ್ರ’ ಎಂಬ ಸಂಘಟನೆಯು ಮಾರ್ಚ್ 17 ರಂದು ಮುಂಬೈನ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಚಿತ್ರದ ಪೋಸ್ಟರ್‌ವೊಂದರಲ್ಲಿ ನಟ ರಣವೀರ್ ಸಿಂಗ್ ಅವರು ಸಿಖ್ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾದ ಪಗ್ಡಿ (ಟರ್ಬನ್), ಗಡ್ಡ ಮತ್ತು ಕಡಾವನ್ನು ಧರಿಸಿ ಸಿಗರೇಟ್ ಸೇದುತ್ತಿರುವಂತೆ ಬಿಂಬಿಸಲಾಗಿದೆ.

ಧಾರ್ಮಿಕ ಚಿಹ್ನೆಗಳನ್ನು ಧರಿಸಿರುವಾಗ ಈ ರೀತಿ ಧೂಮಪಾನ ಮಾಡುವುದು ಸಿಖ್ ಸಂಪ್ರದಾಯಕ್ಕೆ ಮಾಡಿದ ಅಪಮಾನ ಎಂದು ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಚಿತ್ರದ ನಟ, ನಿರ್ದೇಶಕ ಆದಿತ್ಯ ಧರ್ ಮತ್ತು ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಘಟನೆ ಆಗ್ರಹಿಸಿದೆ.

ಆದರೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ಮೂಲಗಳು ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಿದ್ದಾಗಿದ್ದು, ಇದು ಚಿತ್ರದ ಅಧಿಕೃತ ಪ್ರಚಾರ ಸಾಮಗ್ರಿಯಲ್ಲ ಎಂದು ತಿಳಿಸಿವೆ. ಸದ್ಯ ಈ ಬಗ್ಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಮಾರ್ಚ್ 19 ರಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಜಾಗತಿಕವಾಗಿ 700 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಸಂಗ್ರಹಿಸಿದೆ ಎಂದು ವರದಿಯಾಗಿದೆ.

ಈ ಚಿತ್ರದ‌ ಮೊದಲ ಭಾಗವಾದ ಧುರಂಧರ್ ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಚಿತ್ರದಲ್ಲಿ ನಾಯಕ ಹಮ್ಜಾ ಅಲಿ ಮಜಾರಿಯ ಭೂಗತ ಜಗತ್ತಿನ ಪಯಣ ಮತ್ತು ಅವನ ಹಿಂದಿನ ಜೀವನದ ಜಸ್ಕಿರತ್ ಸಿಂಗ್ ರಂಗಿ ಎಂಬ ಪಾತ್ರದ ರೂಪಾಂತರವನ್ನು ತೋರಿಸಲಾಗಿದೆ.

ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ ನಿರ್ಮಿಸಿರುವ ಈ ಚಿತ್ರವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ಈ ಹಿಂದೆ ದಾಖಲೆ ಬರೆದಿದ್ದ ಜವಾನ್ ಮತ್ತು ಕಲ್ಕಿಯಂತಹ ಸಿನಿಮಾಗಳ ರೆಕಾರ್ಡ್ ಮುರಿಯುವ ಮುನ್ಸೂಚನೆ ನೀಡಿದೆ. ನಟಿ ಕಂಗನಾ ರಣಾವತ್ ಕೂಡ ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಇದು 'ನವ ಭಾರತದ ಆಲೋಚನೆ'ಯನ್ನು ಪ್ರತಿಬಿಂಬಿಸುವ ಸಿನಿಮಾ ಎಂದು ಬಣ್ಣಿಸಿದ್ದಾರೆ.

Read More
Next Story