
ಆದಿತ್ಯ ಧರ್ ಸೃಷ್ಟಿಸಿದ 'ಧುರಂಧರ್' ಲೋಕ: ಆಶಯ ಈಡೇರಿಸುವ ಭರದಲ್ಲಿ ಮರೆಮಾಚಿದ ಸಂಗತಿಗಳು
ಧುರಂಧರ್' ಮತ್ತು 'ಧುರಂಧರ್: ದಿ ರಿವೆಂಜ್- ದ ಪೇಟ್ರಿಯಾಟ್, ಇಂಗ್ಲೋರಿಯಸ್ ಬಾಸ್ಟರ್ಡ್ಸ್, ರಂಬೋ: ಫಸ್ಟ್ ಬ್ಲಡ್ ಪಾರ್ಟ್ II ನಂತಹ ಚಿತ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತವೆ.
ಕಾಮಿಕ್ ಪುಸ್ತಕಗಳ ಪ್ರಕಾಶಕರು ಮತ್ತು ಅಂತಹ ಪ್ರಕಾರದ ಕಾದಂಬರಿಗಳಲ್ಲಿ ಬಳಕೆ ಮಾಡಲಾಗುವ ಒಂದು ಸಾಹಿತ್ಯಿಕ ತಂತ್ರವಿದೆ. ಇಂತಹ ತಂತ್ರವನ್ನು ಬಳಸಿಕೊಂಡು ಒಂದು ಕಾಲ್ಪನಿಕವಾದ ಕಾಲಗಮನದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಸತ್ಯಾಂಶಗಳು ಮತ್ತು ಘಟನೆಗಳನ್ನು ಬದಲಿಸಲು ಅವರಿಗೆ ಸಹಾಯ ಮಾಡುತ್ತದೆ. ಇದನ್ನು ಇಂಗ್ಲಿಷ್ನಲ್ಲಿ ʼರೆಟ್ಕಾನ್ʼ ಎಂದು ಕರೆಯಲಾಗುತ್ತದೆ. ಇದು ʼರೆಟೋಆಕ್ಟಿವ್ ಕಂಟಿನ್ಯೂಯಿಟಿʼ ಎಂಬುದರ ಸಂಕ್ಷಿಪ್ತ ರೂಪ.
ಬಹಳ ಸುದೀರ್ಘ ಕಾಲದಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಸೂಪರ್ಮ್ಯಾನ್ ಮತ್ತು ಬ್ಯಾಟ್ಮ್ಯಾನ್ನಂತಹ ಜನಪ್ರಿಯ ಪಾತ್ರಗಳ ಮೂಲ ಕಥೆಗಳನ್ನು ಸರಿಹೊಂದಿಸಲು ಅಥವಾ ಪೂರಕ್ಕೆ ಪೂರಾ ಬದಲಾಯಿಸಿಬಿಡಲು ಈ ತಂತ್ರವನ್ನು ಬಳಸಿಕೊಳ್ಳಲಾಗುತ್ತದೆ. ಆರ್ಥರ್ ಕಾನನ್ ಡಾಯ್ಲ್ ಅವರು ʼದ ಫೈನಲ್ ಪ್ರಾಬ್ಲಮ್ʼ ಕಥೆಯಲ್ಲಿ ಶೆರ್ಲಾಕ್ ಹೋಮ್ಸ್ ಪಾತ್ರವನ್ನು ಸಾಯಿಸಿದ ನಂತರವೂ ಮರಳಿ ತಂದಿದ್ದು ಇದೇ ತಂತ್ರದಿಂದ.
ರೆಟ್ಕಾನ್ ಎನ್ನುವುದು ಮೂಲಭೂತವಾಗಿ ಘಟನೆ ನಡೆದ ಬಳಿಕ ಮಾಡುವ ಹೊಂದಾಣಿಕೆ. ಇದು ಕೆಲವು ನಿರ್ದಿಷ್ಟ ವಿಷಯಗಳು ಮತ್ತು ಕಥೆಯ ತಿರುವುಗಳನ್ನು ನೋಡಲು ಬಯಸುವ ಕಟ್ಟಾ ಅಭಿಮಾನಿಗಳ ಬೇಡಿಕೆಯನ್ನು ಪೂರೈಸಲು ಕಾಮಿಕ್ ಪ್ರಕಾಶಕರಿಗೆ ಸಾಧ್ಯವಾಗುತ್ತದೆ. ಕನ್ನಡದಲ್ಲಿ ಇದನ್ನು ʼಕಥಾ ಪುನರುತ್ಥಾನʼ ಎಂದು ವ್ಯಾಖ್ಯಾನಿಸಬಹುದಾಗಿದೆ. ಅಂದರೆ ಕತೆಯ ಹಿಂದಿನ ಭಾಗಗಳನ್ನು ಈಗಿನ ಅವಶ್ಯಕತೆಗೆ ತಕ್ಕಂತೆ ಬದಲಾಯಿಸುವುದು.
ʼಧುರಂಧರ್: ದ ರಿವೇಂಜ್ʼ ಚಿತ್ರದ ಕೊನೆಯ ದೃಶ್ಯದಲ್ಲಿ ಲೇಖಕ ಹಾಗೂ ನಿರ್ದೇಶಕ ಆದಿತ್ಯ ಧರ್ ಅವರು ಅಭಿಮಾನಿಗಳ ಆಸೆಯನ್ನು ಪೂರೈಸಲು ಇದೇ ರೀತಿಯ ʼಕತಾ ಪುನರುತ್ಥಾನʼ ದ ತಂತ್ರವನ್ನು ಬಳಸಿದ್ದಾರೆ. ಧರ್ ಅವರು ಧುರಂಧರ್ನ ಮೊದಲ ಅವತರಣಿಕೆಯಲ್ಲಿ ಚಿತ್ರದ ಉದ್ದಕ್ಕೂ ಕರಾಚಿಯ ಗ್ಯಾಂಗ್ಸ್ಟರ್ ʼಬಡೆ ಸಾಹೆಬ್ʼ ಎಂಬ ಹೊಸ ವಿಲನ್ ಇರುವ ಬಗ್ಗೆ ಕುತೂಹಲ ಮೂಡಿಸಿದ್ದರು. ಕಳೆದ ವಾರ ಬಿಡುಗಡೆಗೊಂಡ ʼಧುರಂಧರ್: ದ ರಿವೇಂಜ್ʼ ಚಿತ್ರದಲ್ಲಿ ಈ ವ್ಯಕ್ತಿಯೇ 1993ರ ಮುಂಬೈ ಸ್ಫೋಟದ ಹಿಂದಿನ ಸೂತ್ರಧಾರಿ, ಭೂಗತಲೋಕದ ಪಾತಕಿ ದಾವೂದ್ ಇಬ್ರಾಹಿಂ ಎಂದು ಖಚಿತಪಡಿಸಲಾಗಿದೆ.
ಹೊಸ ಕಥಾ ಪುನರುತ್ಥಾನ
ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಭಾರತೀಯ ಗೂಢಚಾರಿ ಹಮ್ಜಾ/ಜಸ್ಕಿರತ್ (ರಣವೀರ್ ಸಿಂಗ್) ತನಗೆ ಇಬ್ರಾಹಿಂನನ್ನು ಕೊಲ್ಲಲು ಸಾಧ್ಯವಾಗದೇ ಇರುವ ಬಗ್ಗೆ ವಿಷಾದದಿಂದ ನುಡಿಯುತ್ತಾನೆ. ಆದರೆ ಅವನ ಹ್ಯಾಂಡ್ಲರ್ (ಮಾರ್ಗದರ್ಶಕ) ಈ ಹೊತ್ತಿನಲ್ಲೇ ಒಂದು ʼರೆಟ್ಕಾನ್ʼನ್ನು ಹೊರಹಾಕುತ್ತಾನೆ. ಇಪ್ಪತ್ತು ವರ್ಷಗಳ ಹಿಂದೆಯೇ ಇಬ್ರಾಹಿಂಗೆ ʼಡೈಮಿಥೈಲ್ ಮರ್ಕ್ಯೂರಿʼ ಮೂಲಕ ನಿಧಾನವಾಗಿ ವಿಷ ಉಣಿಸಲಾಗಿತ್ತು ಎಂದು ಬಹುರಂಗಪಡಿಸುತ್ತಾನೆ. ಅವನ ನರಮಂಡಲದ ಹಾನಿ ಮತ್ತು ದೈಹಿಕ ಕ್ಷೀಣತೆಗೆ ಕಾರಣವೇ ಇದು ಎಂದು ಹೇಳುತ್ತಾನೆ. ಭಾರತದ ʼರಾʼ ಮುಖ್ಯಸ್ಥರಿಗೆ ಬೇಕಾಗಿದ್ದು ಕೂಡ ಇದೇ; ಆತ ಸಾಯಬಾರದು, ಬದಲಿಗೆ ಜೀವಮಾನವೆಲ್ಲ ನರಳಬೇಕು. ʼಜೋ ಮಜಾ ಜಿಂದಾ ರಖ್ ಕೆ ತಡ್ಪಾನೇ ಮೇ ಹೇ, ವೋ ಮರ್ನೆ ಮೇ ನಹೀʼ (ಆತನನ್ನು ಕೊಲ್ಲುವುದಕ್ಕಿಂತ ಜೀವಂತ ನರಳಿಸುವಂತೆ ಮಾಡುವುದರಲ್ಲಿ ಹೆಚ್ಚಿನ ಮಜಾ ಇದೆ) ಎಂಬ ಸಂಭಾಷಣೆ ಕೇಳಿಬರುತ್ತದೆ.
ಇದು ಸತತ 230 ನಿಮಿಷಗಳ ಕಾಲ ಭೀಕರ ಕೊಲೆಗಳನ್ನು ಮತ್ತು ಟಿಟ್ರಿಸ್ ಆಟದಂತೆ ಶವಗಳ ರಾಶಿಯನ್ನೇ ತೋರಿಸಿದ ಸಿನೆಮಾವೊಂದಕ್ಕೆ ಒಂದು ಕುತೂಹಲಕಾರಿ ಅಂತ್ಯದ ಭಾವನೆಯನ್ನು ಮೂಡಿಸುತ್ತದೆ.
ಈ ಮಧ್ಯೆ ವಾಸ್ತವದ ಜಗತ್ತಿನಲ್ಲಿ, ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಭಾರತ, ಅಮೆರಿಕ ಮತ್ತು ಇತರ ಹತ್ತಾರು ರಾಷ್ಟ್ರಗಳ ಕಾನೂನು ಜಾರಿ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಇಬ್ರಾಹಿಂನನ್ನು ನ್ಯಾಯಾಂಗದ ಮುಂದೆ ತರುವಲ್ಲಿ ವಿಫಲರಾಗಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸದ ಬಳಿಕವೂ ಇದು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ. ಹಾಗಾಗಿ ʼಧುರಂಧರ್: ದಿ ರಿವೇಂಜ್” ಚಿತ್ರವು ದಾವೂದ್ ಇಬ್ರಾಹಿಂ ಕತೆಯ ಮೂಲಕ ಮಾಡುತ್ತಿರುವ ಒಂದು ವಿಶಿಷ್ಟವಾದ ʼಇಚ್ಛಾ ಪೂರೈಕೆʼ ಅಥವಾ ಆಶಯ ಈಡೇರಿಕೆಯ ಕೆಲಸವಾಗಿದೆ.
ಅದು ಏನು ಹೇಳುತ್ತಿದೆ ಎಂಬುದನ್ನು ಗಮನಿಸಿ: “ನೋಡಿ, ನಾವು ದಾವೂದ್ನನ್ನು ಹತ್ಯೆ ಮಾಡುವಲ್ಲಿ ವಿಫಲವಾಗಿಲ್ಲ. ಬದಲಾಗಿ ಆತನನ್ನು ಉದ್ದೇಶಪೂರ್ವಕವಾಗಿ ಜೀವಂತವಾಗಿ ಇರಿಸಿದ್ದೇವೆ.” ದಾವೂದ್ ಕರಾಚಿಯ ಕ್ಲಿಪ್ಟನ್ನಲ್ಲಿ ಇರುವ ತನ್ನ ʼವೈಟ್ ಹೌಸ್”ನಲ್ಲಿ ಐಷಾರಾಮಿ ಜೀವನ ನಡೆಸುತ್ತಿಲ್ಲ. ಬದಲಾಗಿ ಆತ ಅಶಕ್ತನಾಗಿ, ರಕ್ತ ವಾಂತಿ ಮಾಡುತ್ತ ನರಳುತ್ತಿದ್ದಾನೆ ಎಂಬಂತೆ ಬಿಂಬಿಸಲಾಗಿದೆ. ಇದು ಮೂಲಭೂತವಾಗಿ ತಮ್ಮ ಸರ್ಕಾರದ ಸರ್ವಶಕ್ತತೆಯ ಬಗ್ಗೆ ನಂಬಿಕೆ ಇಡಲು ಬಯಸುವ ವಯಸ್ಕರಿಗಾಗಿ ಹೆಣೆದ ಒಂದು ಕಾಲ್ಪನಿಕ ಕತೆಯಂತೆ ಕಾಣುತ್ತದೆ.
ಸರ್ಕಾರದ ಇಚ್ಛೆ ಪೂರೈಸುವ ಚಿತ್ರಗಳು
ಮೇಲೆ ವಿವರಿಸಲಾದ ನಿರೂಪಣಾ ತಂತ್ರವನ್ನು ಬಳಸಿಕೊಳ್ಳುವ ಮೂಲಕ ʼಧುರಂಧರ್ʼ ಮತ್ತು ಅದರ ಮುಂದುವರಿದ ಭಾಗವು ತಮ್ಮನ್ನು ʼಇಚ್ಛಾ ಪೂರೈಕೆಯ ಮಿಲಿಟರಿ ಡ್ರಾಮಾಗಳʼ ಸುದೀರ್ಘ ಸಂಪ್ರದಾಯದಲ್ಲಿ ಗುರುತಿಸಿಕೊಂಡಿದೆ. ಈ ಸಾಲಿಗೆ ಸೇರುವ ಇತರ ಚಿತ್ರಗಳೆಂದರೆ ದ ಪೇಟ್ರಿಯಾಟ್ (2000), ಇಂಗ್ಲೋರಿಯಸ್ ಬಾಸ್ಟರ್ಡ್ಸ್ (2009), ರಂಬೋ: ಫಸ್ಟ್ ಬ್ಲಡ್ ಪಾರ್ಟ್-II (1985), ಅಮೆರಿಕನ್ ಸ್ನೈಪರ್ (2014) ಇನ್ನೂ ಅನೇಕ. ಈ ಎಲ್ಲ ಚಿತ್ರಗಳಲ್ಲಿಯೂ ಕೂಡ ತೀವ್ರಗಾಮಿ ವ್ಯಕ್ತಿಗತವಾದ ಮಧ್ಯಪ್ರವೇಶವು ಇತಿಹಾಸದ ಹಾದಿಯನ್ನೇ ಬದಲಿಸುತ್ತದೆ ಮತ್ತು ಸೋಲನ್ನು ನಾಟಕೀಯವಾಗಿ ವಿಜಯವನ್ನಾಗಿ ಪರಿವರ್ತಿಸುತ್ತದೆ. (ಧುರಂಧರ್ ಚಿತ್ರಲೋಕದಲ್ಲಿ ಹಮ್ಜಾ ಅಥವಾ ಜಸ್ಕಿರತ್).
ಟೆರೆಂಟಿನೋ ಅವರ ʼಇಂಗ್ಲೋರಿಯಸ್ ಬಾಸ್ಟರ್ಡ್ಸ್ʼ ಚಿತ್ರದಲ್ಲಿ ಅಮೆರಿಕನ್ ಸೈನಿಕರ ಒಂದು ವಿಲಕ್ಷಣ ಗುಂಪು ಹಿಟ್ಲರ್ ಮತ್ತು ಆತನ ಆಪ್ತರನ್ನು ಒಂದೇ ಏಟಿಗೆ ಹತ್ಯೆ ಮಾಡುವ ಮೂಲಕ ಎರಡನೇ ಮಹಾಯುದ್ಧವನ್ನೇ ರಾತ್ರೋರಾತ್ರಿ ಒಂದು ನಿರ್ಣಾಯಕ ಗೆಲುವಿನೊಂದಿಗೆ ಅಂತ್ಯಗೊಳಿಸುವುದನ್ನು ತೋರಿಸಲಾಗಿದೆ. ಇನ್ನೊಂದು ಚಿತ್ರ ದ ಪೇಟ್ರಿಯಾಟ್ನಲ್ಲಿ ಮೆಲ್ ಗಿಬ್ಸನ್ ಒಬ್ಬ ದಯಾಳು ಅಮೆರಿಕನ್ ಭೂಮಾಲಿಕನ ಪಾತ್ರವನ್ನು ಮಾಡಿದ್ದಾರೆ. ಈತನ ಯುದ್ಧಭೂಮಿ ಸಾಹಸಗಳು ಅಂತಿಮವಾಗಿ ಬ್ರಿಟಿಷ್ ವಸಾಹತುಶಾಹಿ ಸರ್ಕಾರವನ್ನು ಅಮೆರಿಕದಿಂದಲೇ ಕಾಲ್ಕೀಳುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ.
ಇನ್ನು ರಂಬೋ-II ಚಿತ್ರದಲ್ಲಿ ರಂಬೋ ಹಾಸ್ಯಾಸ್ಪದವಾಗಿ ಚಿತ್ರಿಸಲಾದ ಕ್ರೂರ ವಿಯಟ್ನಾಮಿ ಮತ್ತು ರಷ್ಯಾದ ಮಿಲಿಟರಿ ಅಧಿಕಾರಿಯನ್ನು ಕೊಲ್ಲುವ ಮೂಲಕ ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕ ಅನುಭವಿಸಿದ ಅವಮಾನಕಾರಿ ಸೋಲನ್ನು ಅಳಿಸಿಹಾಕುತ್ತದೆ.
ಖ್ಯಾತ ಮನೋವಿಜ್ಞಾನಿ ಫ್ರಾಯ್ಡ್ ಕನಸುಗಳೇ ನಮ್ಮ ಮೂಲಭೂತ ಇಚ್ಛಾ ಪೂರೈಕೆಯ ಸಾಧನಗಳೆಂದು ಪ್ರತಿಪಾದನೆ ಮಾಡಿದ್ದರು. ಹಾಗಾಗಿ ಈ ಹಾಲಿವುಡ್ ಸಿನೆಮಾಗಳು ಅಮೆರಿಕದ ಪ್ರೇಕ್ಷಕರು ತಮ್ಮ ಆಸೆ-ಆಕಾಂಕ್ಷೆಗಳನ್ನು ವ್ಯಕ್ತಪಡಿಸುವ ಕನಸುಗಳಂತೆ ಗೋಚರಿಸುತ್ತವೆ. ಆದರೆ ಇವು ಅಷ್ಟಕ್ಕೆ ಸೀಮಿತವಾಗಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಯಾಕೆಂದರೆ ಎಲ್ಲಾ ಚಿತ್ರಗಳು ಆಯಾ ರಾಷ್ಟ್ರಗಳ ಅಪರಾಧಗಳನ್ನು ಮತ್ತು ತಪ್ಪು ಹೆಜ್ಜೆಗಳನ್ನು ಮರೆಮಾಚುತ್ತವೆ.
ಇದಕ್ಕೆ ಒಂದು ಉದಾಹರಣೆಯನ್ನು ಹೇಳುವುದಾದರೆ ಇಂಗ್ಲೋರಿಯಸ್ ಬಾಸ್ಟರ್ಡ್ಸ್ ಚಿತ್ರವು ಹಿಟ್ಲರನ ಮತಾಂಧತೆ ಮತ್ತು ವರ್ಣಭೇದ ನೀತಿಯನ್ನು ಅನೇಕ ಬಾರಿ ಟೀಕಿಸುತ್ತದೆ. ಆದರೆ 1940ರ ದಶಕದ ಅಮೆರಿಕನ್ ಸಶಸ್ತ್ರ ಪಡೆಗಳಲ್ಲಿ ಪ್ರಚಲಿತದಲ್ಲಿದ್ದ ವರ್ಣಭೇದ ನೀತಿಯನ್ನು ಅತ್ಯಂತ ಜಾಣ್ಮೆಯಿಂದ ನಿರ್ಲಕ್ಷಿಸುತ್ತದೆ.
ಇನ್ನು ದ ಪೇಟ್ರಿಯಾಟ್ ಚಿತ್ರವು ದಕ್ಷಿಣ ಕೆರೊಲಿನಾದ ಮಿಲಿಷಿಯಾ ನಾಯಕ ಫ್ರಾನ್ಸಿಸ್ ಮಾರಿಯನ್ ಜೀವನವನ್ನು ಭಾಗಶಃ ಆಧರಿಸಿದೆ. ಈತ ಆಫ್ರಿಕ ಮತ್ತು ಅಮೆರಿಕದ ಗುಲಾಮರನ್ನು ಹೊಂದಿದ್ದ ಮತ್ತು ಹೆಚ್ಚಿನ ಸಂಖ್ಯೆಯ ಸ್ಥಳೀಯ ಅಮೆರಿಕನ್ನರನ್ನು ಹತ್ಯೆ ಮಾಡಿದ್ದ ಹಾಗೂ ಅತ್ಯಾಚಾರ ಮಾಡಿದ್ದ ವ್ಯಕ್ತಿ. ಆದರೆ ಆತನ ಜೀವನದ ಈ ಕರಾಳ ಮುಖಗಳನ್ನು ಚಲನಚಿತ್ರದಲ್ಲಿ ಸಂಪೂರ್ಣವಾಗಿ ಮರೆಮಾಚಲಾಗಿದೆ. ಬದಲಿಗೆ, ಮೆಲ್ ಗಿಬ್ಸನ್ ನಿರ್ವಹಿಸಿದ ಬೆಂಜಮಿನ್ ಮಾರ್ಟನ್ ಪಾತ್ರವನ್ನು ಕಪ್ಪು ವರ್ಣದ ಸ್ವತಂತ್ರ ವ್ಯಕ್ತಿಗಳಿಗೆ ಕೆಲಸ ನೀಡುವ ಉದ್ಯೋಗದಾತನಂತೆ ಬಿಂಬಿಸಲಾಗಿದೆ. ಈ ನಿರೂಪಣಾ ನಿರ್ಧಾರವು 2000ನೇ ಇಸವಿಯಲ್ಲಿ ನಿರ್ದೇಶಕ ಸ್ಪೈಕ್ ಲೀ ಸೇರಿದಂತೆ ಹಲವರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.
'ಮಾಯಾವಿ ಚಿಂತನೆʼ ಮನವರಿಕೆ ಮಾಡುವ ಪರಿ
ಧುರಂಧರ್: ದಿ ರಿವೆಂಜ್ ಚಿತ್ರವು ಒಟ್ಟಾರೆಯಾಗಿ ಬಿಜೆಪಿ ಮತ್ತು ಅದರಲ್ಲೂ ವಿಶೇಷವಾಗಿ ನರೇಂದ್ರ ಮೋದಿ ಸರ್ಕಾರದ ಪರವಾಗಿ ವಾದಿಸಲು ಈ 'ಇಚ್ಛಾ ಪೂರೈಕೆಯ' ಚೌಕಟ್ಟನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದಿತ್ಯ ಧರ್ ಅವರ ಚಲನಚಿತ್ರಗಳ (ಅವರ ಚೊಚ್ಚಲ ಚಿತ್ರ ಉರಿ ಸೇರಿದಂತೆ) ಅಬ್ಬರದ ಶೈಲಿಯಲ್ಲಿ, ಪಠಾಣ್ಕೋಟ್ (2016), ಪುಲ್ವಾಮಾ (2019), ಗಲ್ವಾನ್ (2020) ಮತ್ತು ಪಹಲ್ಗಾಮ್ (2025) ಭಯೋತ್ಪಾದನಾ ದಾಳಿಗಳಿಗೆ ಸಂಬಂಧಿಸಿದ ಗುಪ್ತಚರ ವೈಫಲ್ಯಗಳನ್ನು ಕೇವಲ ತಾತ್ಕಾಲಿಕ ಅಡೆತಡೆಗಳಂತೆ ಬಿಂಬಿಸಲಾಗಿದೆ. ಇವುಗಳ ಹೊರತಾಗಿ ಸರ್ಕಾರದ ದಾಖಲೆಗಳು ದೋಷರಹಿತ, ಅತ್ಯಂತ ಪ್ರಬಲ ಮತ್ತು ಎಂದಿಗೂ ವಿಫಲವಾಗದೇ ಇರುವಂಥವು ಎಂಬಂತೆ ಚಿತ್ರಿಸಲಾಗಿದೆ. ಧರ್ ಈ ರೀತಿಯ 'ಮಾಯಾವಿ ಚಿಂತನೆಯನ್ನು' ಪ್ರೇಕ್ಷಕರಿಗೆ ಹೇಗೆ ಮನವರಿಕೆ ಮಾಡಿಕೊಡುತ್ತಾರೆ?
ಮೊದಲನೆಯದಾಗಿ, ಧುರಂಧರ್: ದಿ ರಿವೆಂಜ್ ಚಿತ್ರವು ಬಿಜೆಪಿ ವಿರುದ್ಧ ಯಾವುದೇ ಟೀಕೆ ವ್ಯಕ್ತವಾದರೂ ಅದನ್ನು ಪಾಕಿಸ್ತಾನದ ಧನಸಹಾಯದಿಂದ ಕೂಡಿದ್ದು ಎಂದು ಬಿಂಬಿಸುತ್ತದೆ. ಚಿತ್ರದಲ್ಲಿ ಒಂದು ದೃಶ್ಯವಿದೆ: 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆದ್ದಾಗ ಐಎಸ್ಐನ ಜನರಲ್ ಇಕ್ಬಾಲ್ (ಅರ್ಜುನ್ ರಾಂಪಾಲ್) ತನ್ನ ಮೇಲಧಿಕಾರಿಗಳಿಂದ ತರಾಟೆಗೆ ಒಳಗಾಗುತ್ತಿರುತ್ತಾನೆ. "ನೀವು ಭಾರತೀಯ ಸಮಾಜವಾದಿಗಳು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎನ್ಜಿಒಗಳು ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ಇಷ್ಟೊಂದು ಹಣವನ್ನು ಏಕೆ ಖರ್ಚು ಮಾಡಿದ್ದೀರಿ?" ಎಂದು ಐಎಸ್ಐ ಹಿರಿಯ ಅಧಿಕಾರಿಯೊಬ್ಬ ಇಕ್ಬಾಲ್‌ನನ್ನು ವ್ಯಂಗ್ಯವಾಗಿ ಪ್ರಶ್ನಿಸುತ್ತಾನೆ.
ಈ ಒಂದು ಸಂಭಾಷಣೆಯ ಮೂಲಕ, ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳನ್ನೆಲ್ಲಾ ದೇಶದ ಶತ್ರುಗಳು ಎಂಬಂತೆ ಚಿತ್ರಿಸಲಾಗಿದೆ. ನೀವು ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೆ, ನಿಮಗೆ ಪಾಕಿಸ್ತಾನದಿಂದ ಹಣ ಸಂದಾಯವಾಗುತ್ತಿದೆ ಎಂದು ಈ ಚಿತ್ರ ಹೇಳುತ್ತದೆ. ಕಾಂಗ್ರೆಸ್ ಚುನಾವಣೆಯಲ್ಲಿ ಸೋತಾಗ ಐಎಸ್ಐ ಅಧಿಕಾರಿಗಳು ಅವರು "ಹಮಾರಾ ಪಸಂದ್ ವಾಲೆ ಲೋಗ್" (ನಮಗೆ ಇಷ್ಟವಾದ ಜನರು) ಎಂದು ಮರುಗುವುದನ್ನು ತೋರಿಸುವ ಮೂಲಕ ಈ ನಿರೂಪಣೆಯನ್ನು ಬಲಪಡಿಸಲಾಗಿದೆ.
ನೋಟ್ ಬ್ಯಾನ್ ಎಂಬ ಮಾಸ್ಟರ್ಸ್ಟ್ರೋಕ್!
ಇನ್ನು ಎರಡನೆಯ ಅಂಶವನ್ನು ಗಮನಿಸಿ, ಈ ಚಿತ್ರವು 2016ರ ನೋಟು ಅಮಾನ್ಯೀಕರಣ ಕ್ರಮವನ್ನು ಒಂದು ʼಮಾಸ್ಟರ್ ಸ್ಟ್ರೋಕ್ʼ ಎಂದು ಬಿಂಬಿಸುತ್ತದೆ. ಇದು ಪಾಕಿಸ್ತಾನಿ ಭಯೋತ್ಪಾದಕರ ಯೋಜನೆಗಳನ್ನು ಏಕಾಏಕಿ ಹಳಿ ತಪ್ಪಿಸಿತು ಎನ್ನಲಾಗುತ್ತದೆ. ಚಿತ್ರದ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಪಾಕಿಸ್ತಾನಿ ವಿಲನ್ ಮೋದಿಯವರನ್ನು "ಚಾಯ್ವಾಲಾ" ಎಂದು ಕರೆಯುತ್ತಾ ಶಪಿಸುವುದನ್ನು ತೋರಿಸಲಾಗಿದೆ. ಒಂದು ಕಡೆ ದಾವೂದ್ ಇಬ್ರಾಹಿಂನ ಸಹಚರನೊಬ್ಬ, "ಚಾಯ್ವಾಲೆ ನೆ ಗಾಂಡ್ ಮಾರ್ ದಿ ಯಾರ್" ಎಂದು ಅಸಹಾಯಕತೆಯಿಂದ ನುಡಿಯುತ್ತಿರುವುದನ್ನು ಕಾಣಬಹುದು.
ಮೂರನೆಯದಾಗಿ, ಅತೀಫ್ ಅಹ್ಮದ್ ಎಂಬ ವಿಲನ್ ಪಾತ್ರ (ಇದು ನೈಜ ಜೀವನದ ಗ್ಯಾಂಗ್ಸ್ಟರ್ ಮತ್ತು ಸಮಾಜವಾದಿ ಪಕ್ಷದ ರಾಜಕಾರಣಿ ಅತೀಕ್ ಅಹ್ಮದ್ ಆಧಾರಿತವಾಗಿದೆ) ಇಲ್ಲಿರುವ ಮತ್ತೊಂದು ಪ್ರಮುಖ ಅಂಶವಾಗಿದೆ. 2023ರಲ್ಲಿ, ಅಹ್ಮದ್ ಮತ್ತು ಆತನ ಸಹೋದರನನ್ನು ಡಜನ್ಗಟ್ಟಲೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂದೃಭದಲ್ಲಿಯೇ ಗುಂಡಿಕ್ಕಿ ಕೊಲ್ಲಲಾಯಿತು.
ಧುರಂಧರ್: ದಿ ರಿವೆಂಜ್ ಈ ಘಟನೆಯನ್ನು ನಾಟಕೀಯವಾಗಿ ಚಿತ್ರಿಸುತ್ತದೆ ಮತ್ತು ಅಹ್ಮದ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಸಲ್ಲಿಸಿದ ನಂತರದ ಚಾರ್ಜ್‌ಶೀಟ್‌ಗೆ ಜೀವ ನೀಡುತ್ತದೆ.
ಅಹ್ಮದ್ ಕೊಲೆಯಾದ ನಂತರ, ಆತ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾಗಿ ಮತ್ತು ಅವರಿಂದ ಶಸ್ತ್ರಾಸ್ತ್ರ ಹಾಗೂ ಹಣವನ್ನು ಪಡೆಯುತ್ತಿದ್ದಾಗಿ ಒಪ್ಪಿಕೊಂಡಿದ್ದ ಎಂದು ಉತ್ತರ ಪ್ರದೇಶ ಪೊಲೀಸರು ಪ್ರತಿಪಾದಿಸಿದ್ದರು. ಸಹಜವಾಗಿಯೇ, ಅಹ್ಮದ್ ಮತ್ತು ಆತನ ಸಹೋದರ ಮೃತಪಟ್ಟ ನಂತರ, ಪೊಲೀಸರ ಈ ವಾದವನ್ನು ಸುಳ್ಳು ಎಂದು ಸಾಬೀತುಪಡಿಸಲು ಯಾವುದೇ ದಾರಿಯಿರಲಿಲ್ಲ. ಇಂದಿಗೂ, ಉತ್ತರ ಪ್ರದೇಶ ಪೊಲೀಸರ ಹೇಳಿಕೆಯನ್ನು ಹೊರತುಪಡಿಸಿ, ಈತನ ಪಾಕಿಸ್ತಾನಿ ಸಂಪರ್ಕದ ಬಗ್ಗೆ ಯಾವುದೇ ದಾಖಲೆ ಅಥವಾ ಪುರಾವೆಗಳಿಲ್ಲ.
ಪಾಕಿಸ್ತಾನ ಭವಿಷ್ಯ ಭಾರತದ ಕೈಯಲ್ಲಿ!
ನಾಲ್ಕನೆಯ ಅಂಶವೇನೆಂದರೆ, ಪಂಜಾಬ್ ರಾಜ್ಯವನ್ನು ಇಲ್ಲಿ ಮಾದಕ ದ್ರವ್ಯ, ಭ್ರಷ್ಟಾಚಾರ ಮತ್ತು ಅಂತಿಮವಾಗಿ ದೇಶದ್ರೋಹದ ಕೇಂದ್ರ ಎಂಬಂತೆ ಚಿತ್ರಿಸಲಾಗಿದೆ. ಇದೇ ಪಂಜಾಬ್ ರಾಜ್ಯವು 2020-21ರ ರೈತ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತಿತ್ತು, ಆ ಪ್ರತಿಭಟನೆಯಿಂದಾಗಿಯೇ ಮೋದಿಯವರು ಅಪರೂಪದ ನಿರ್ಧಾರವೊಂದನ್ನು ತೆಗೆದುಕೊಂಡು ಕೃಷಿ ವಲಯದ ಕಾನೂನು ಸುಧಾರಣೆಗಳನ್ನು ಹಿಂಪಡೆಯುವಂತೆ ಮಾಡಿತ್ತು. ಚಿತ್ರದಲ್ಲಿ ಜಸ್ಕಿರತ್ನ ಬಾಲ್ಯದ ಗೆಳೆಯ ಬಿಂದಾ ಎಂಬ ಪಾತ್ರದ ಮೂಲಕ ಈ ನಿರೂಪಣೆಯನ್ನು ಕಟ್ಟಿಕೊಡಲಾಗಿದೆ. ಬಿಂದಾನನ್ನು ತಿದ್ದಲಾಗದ ಮಾದಕ ವ್ಯಸನಿ ಮತ್ತು ಅಂತಿಮವಾಗಿ "ಆಜಾದ್ ಪಂಜಾಬ್" ಕನಸು ಕಾಣುವ ಒಬ್ಬ ಖಾಲಿಸ್ತಾನಿ ಭಯೋತ್ಪಾದಕನಂತೆ ತೋರಿಸಲಾಗಿದೆ. ಆತ ಭಾರತದ ವಿರುದ್ಧ ತನ್ನ ದ್ವೇಷವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಾನೆ. ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಕೈಜೋಡಿಸಿ, ಪಂಜಾಬ್ ಗಡಿಯ ಮೂಲಕ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಬಿಂದಾನ ಕೃತ್ಯವು ಹಮ್ಜಾ/ಜಸ್ಕಿರತ್ಗೆ ಆಘಾತ ಮತ್ತು ನಿರಾಸೆಯನ್ನುಂಟು ಮಾಡುತ್ತದೆ.
"ಪಾಕಿಸ್ತಾನ್ ಕಾ ಮುಸ್ತಕ್ಬಿಲ್ ಅಬ್ ಹಿಂದೂಸ್ತಾನ್ ತಯ್ ಕರೇಗಾ" (ಪಾಕಿಸ್ತಾನದ ಭವಿಷ್ಯವನ್ನು ಇನ್ಮುಂದೆ ಭಾರತವೇ ನಿರ್ಧರಿಸುತ್ತದೆ) ಎಂದು 'ಧುರಂಧರ್: ದಿ ರಿವೆಂಜ್' ಚಿತ್ರದ ಕೊನೆಯ ಅರ್ಧ ಗಂಟೆಯಲ್ಲಿ ಹಮ್ಜಾ/ಜಸ್ಕಿರತ್ ಹೇಳುತ್ತಾನೆ. ಈ ಸಂಭಾಷಣೆಯು ಚಿತ್ರದ 'ಇಚ್ಛಾ ಪೂರೈಕೆಯ' ಮಹತ್ವಾಕಾಂಕ್ಷೆಯನ್ನು ಬಹಳ ನೇರವಾಗಿ ಬಿಚ್ಚಿಡುತ್ತದೆ. ಒಬ್ಬ ಅಪ್ಪಟ ಮೋದಿ ಅಭಿಮಾನಿಯ ನಿಜವಾದ ಕಾಳಜಿಯಿಂದ ಇದಕ್ಕಿಂತ ಹೆಚ್ಚಿನದನ್ನು ಏನನ್ನು ತಾನೆ ಬಯಸಲು ಸಾಧ್ಯ?

