Dhurandhar 2|1,000 ಕೋಟಿ ರೂ. ಗುರಿಯತ್ತ ರಣವೀರ್ ಸಿಂಗ್ ನಟನೆಯ ಧುರಂಧರ್
x

ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಈಗ ಕನ್ನಡದಲ್ಲೂ ಅಬ್ಬರಿಸಲು ಸಿದ್ಧವಾಗಿದೆ.

Dhurandhar 2|1,000 ಕೋಟಿ ರೂ. ಗುರಿಯತ್ತ ರಣವೀರ್ ಸಿಂಗ್ ನಟನೆಯ 'ಧುರಂಧರ್'

ಬಾಲಿವುಡ್‌ನ ಅಸಲಿ 'ಧುರಂಧರ್' ಬಂದೇ ಬಿಟ್ಟ. ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಈಗ ಕನ್ನಡದಲ್ಲೂ ಅಬ್ಬರಿಸಲು ಸಿದ್ಧವಾಗಿದೆ.


Click the Play button to hear this message in audio format

ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲೆಡೆ 'ಧುರಂಧರ್: ದಿ ರಿವೆಂಜ್' ಚಿತ್ರದ್ದೇ ಮಾತು. ರಣವೀರ್ ಸಿಂಗ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ, ದೇಶಾದ್ಯಂತ ಚಿತ್ರದ ಮೇಲಿನ ಕ್ರೇಜ್ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಿಸಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಬರುತ್ತಿರುವ ಈ ಸೀಕ್ವೆಲ್, ಅಡ್ವಾನ್ಸ್ ಬುಕಿಂಗ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದ್ದು, ಚಿತ್ರಮಂದಿರಗಳು ಈಗಾಗಲೇ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ.

ಪೇಯ್ಡ್ ಪ್ರಿವ್ಯೂಗಳಿಂದಲೇ 50 ಕೋಟಿ ಗಳಿಕೆಯ ನಿರೀಕ್ಷೆ

ಚಿತ್ರದ ಬಾಕ್ಸ್ ಆಫೀಸ್ ಭವಿಷ್ಯದ ಬಗ್ಗೆ ಭಾರಿ ವಿಶ್ವಾಸ ವ್ಯಕ್ತಪಡಿಸಿರುವ ಟ್ರೇಡ್ ಎಕ್ಸ್‌ಪರ್ಟ್ ಕಮಲ್ ಜಿಯಾನ್‌ಚಂದನಿ ಅವರು, ಈ ಚಿತ್ರವು ಮೊದಲ ಭಾಗದ ದಾಖಲೆಯನ್ನು ಮುರಿಯುವುದಲ್ಲದೆ, 1,000 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ ಮೊದಲ ಹಿಂದಿ ಚಿತ್ರವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಬುಧವಾರದ ಅರ್ಧ ದಿನದ ಪೇಯ್ಡ್ ಪ್ರಿವ್ಯೂಗಳಿಂದಲೇ ಸುಮಾರು 45 ರಿಂದ 50 ಕೋಟಿ ರೂಪಾಯಿ ಗಳಿಕೆಯಾಗುವ ಅಂದಾಜಿದೆ. ಈಗಾಗಲೇ ಪ್ರಿವ್ಯೂ ಶೋಗಳಿಗಾಗಿ 4 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿರುವುದು ಚಿತ್ರದ ಮೇಲಿರುವ ನಿರೀಕ್ಷೆಗೆ ಸಾಕ್ಷಿಯಾಗಿದೆ.

ದಾಖಲೆ ಮುರಿದ ಅಡ್ವಾನ್ಸ್ ಬುಕಿಂಗ್

ಪಿವಿಆರ್ ಐನಾಕ್ಸ್ ವೇದಿಕೆಯೊಂದರಲ್ಲೇ ಎಲ್ಲಾ ಭಾಷೆಗಳಲ್ಲಿ ಸೇರಿ 10 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಇಂತಹ ಭಾರಿ ಮಟ್ಟದ ಬುಕಿಂಗ್ ಹಿಂದೆಂದೂ ಕಂಡಿಲ್ಲ ಎಂದು ಚಿತ್ರರಂಗದ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ. ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಲ್ಲದೆ, ಪುಣೆ, ಅಹಮದಾಬಾದ್ ಮತ್ತು ಲಕ್ನೋದಂತಹ ನಗರಗಳಲ್ಲೂ ಟಿಕೆಟ್‌ಗಾಗಿ ಜನ ಮುಗಿಬೀಳುತ್ತಿದ್ದಾರೆ.

ಖ್ಯಾತ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಅವರು ಈ ಚಿತ್ರದ ಕ್ರೇಜ್ ಅನ್ನು 'ಶೋಲೆ' ಮತ್ತು 'ಬಾಹುಬಲಿ 2' ಚಿತ್ರಗಳಿಗೆ ಹೋಲಿಸಿದ್ದಾರೆ. "ಇದು ಕೇವಲ ಚಿತ್ರವಲ್ಲ, ಇದೊಂದು ಸುನಾಮಿ. ಮೊದಲ ಭಾಗ ಕೇವಲ ಟ್ರೈಲರ್ ಅಷ್ಟೇ ಇತ್ತು, ಅಸಲಿ ಪಿಕ್ಚರ್ ಈಗ ಶುರುವಾಗಲಿದೆ" ಎಂದು ಅವರು ಬಣ್ಣಿಸಿದ್ದಾರೆ. ಅತ್ತ ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಂದೇ ದಿನದಲ್ಲಿ 120 ಕೋಟಿ ರೂಪಾಯಿ ಗಳಿಸಿದರೂ ಅಚ್ಚರಿಯಿಲ್ಲ ಎಂದಿದ್ದಾರೆ.

ಮಧ್ಯರಾತ್ರಿಯ ಪ್ರದರ್ಶನ

ಬೇಡಿಕೆ ಎಷ್ಟರ ಮಟ್ಟಿಗಿದೆ ಎಂದರೆ ಮುಂಬೈ ಮತ್ತು ಅಹಮದಾಬಾದ್‌ನಂತಹ ನಗರಗಳಲ್ಲಿ ಮುಂಜಾನೆ 2:15ರಿಂದಲೇ ಪ್ರದರ್ಶನಗಳು ಆರಂಭವಾಗುತ್ತಿವೆ. ಮುಂಬೈನ ಐತಿಹಾಸಿಕ ಮರಾಠಾ ಮಂದಿರ ಚಿತ್ರಮಂದಿರವು ದಶಕಗಳಿಂದ ಪ್ರದರ್ಶಿಸುತ್ತಿದ್ದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರದ ಸಮಯವನ್ನು ಬದಲಿಸಿ, 'ಧುರಂಧರ್ 2' ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ನೀಡಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು 'ಜವಾನ್' ಚಿತ್ರದ ದಾಖಲೆಗಳನ್ನು ಮೀರಿ ನಿಲ್ಲುವ ಗುರಿ ಹೊಂದಿದೆ.

Read More
Next Story