ದಿ ಕೇರಳ ಸ್ಟೋರಿ 2 ಸಿನಿಮಾ ಕೇರಳದ ಸಂಸ್ಕೃತಿ ವಿರೋಧಿ: ರಾಹುಲ್‌ ಗಾಂಧಿ ಕಿಡಿ
x

'ದಿ ಕೇರಳ ಸ್ಟೋರಿ 2' 

'ದಿ ಕೇರಳ ಸ್ಟೋರಿ 2' ಸಿನಿಮಾ ಕೇರಳದ ಸಂಸ್ಕೃತಿ ವಿರೋಧಿ: ರಾಹುಲ್‌ ಗಾಂಧಿ ಕಿಡಿ

ದಿ ಕೇರಳ ಸ್ಟೋರಿ 2 ಬಿಡುಗಡೆಯಾದ ಬೆನ್ನಲ್ಲೇ ರಾಜಕೀಯ ಕಿಡಿ ಹೊತ್ತಿಕೊಂಡಿದೆ. ರಾಹುಲ್ ಗಾಂಧಿ ಅವರ ಟೀಕೆ ಮತ್ತು ಬಿಜೆಪಿ ಸಂಸದ ಮನೋಜ್ ತಿವಾರಿ ಪತ್ನಿ ಸುರಭಿ ತಿವಾರಿ ಅವರ ಸಮರ್ಥನೆಯ ವಿವರಣೆ ಇಲ್ಲಿದೆ.


Click the Play button to hear this message in audio format

ಬಹುನಿರೀಕ್ಷಿತ ವಿವಾದಿತ ಸಿನಿಮಾ 'ದಿ ಕೇರಳ ಸ್ಟೋರಿ 2' ಫೆಬ್ರವರಿ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ದೇಶಾದ್ಯಂತ ಪರ-ವಿರೋಧದ ಚರ್ಚೆಗಳ ನಡುವೆ ಇದೀಗ ಚಿತ್ರದ ವಸ್ತುನಿಷ್ಠತೆ ಮತ್ತು ಅದರ ಉದ್ದೇಶದ ಬಗ್ಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಬಿಜೆಪಿ ಸಂಸದ ಮನೋಜ್ ತಿವಾರಿ ಅವರ ಪತ್ನಿ ಸುರಭಿ ತಿವಾರಿ ಪರಸ್ಪರ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧಿಕೃತ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಅವರು, 'ದಿ ಕೇರಳ ಸ್ಟೋರಿ 2' ಚಿತ್ರವನ್ನು ಯಾರೂ ಅಷ್ಟಾಗಿ ವೀಕ್ಷಿಸುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಭಾರತದ ಬಹುಸಂಖ್ಯಾತ ಜನರಿಗೆ ಕೇರಳದ ನೈಜ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅರಿವಿದೆ ಎಂಬುದು ಇದರಿಂದ ಸಾಬೀತಾಗಿದೆ. ಪ್ರಸ್ತುತ ದಿನಗಳಲ್ಲಿ ಚಲನಚಿತ್ರಗಳು, ದೂರದರ್ಶನ ಮತ್ತು ಮಾಧ್ಯಮಗಳನ್ನು ಕೆಲವು ಸಮುದಾಯಗಳನ್ನು ಗುರಿಯಾಗಿಸಲು ಹಾಗೂ ಸಮಾಜದಲ್ಲಿ ವಿಭಜನೆ ಮೂಡಿಸಲು ಅಸ್ತ್ರಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಒಂದು ನಿರ್ದಿಷ್ಟ ಸಿದ್ಧಾಂತವನ್ನು ಬಿತ್ತಲು ಈ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಇದು ಸಮಾಜದ ಶಾಂತಿಗೆ ಧಕ್ಕೆ ತರುತ್ತಿದೆ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ರಾಹುಲ್ ಗಾಂಧಿ ಅವರ ಟೀಕೆಗಳಿಗೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ಮನೋಜ್ ತಿವಾರಿ ಅವರ ಪತ್ನಿ ಸುರಭಿ ತಿವಾರಿ ಅವರು ಚಿತ್ರವನ್ನು 'ಸಮಾಜದ ಕನ್ನಡಿ' ಎಂದು ಬಣ್ಣಿಸಿದ್ದಾರೆ. ಜನರು ಮನೆಯಲ್ಲಿ ಕುಳಿತು ವಿಮರ್ಶೆ ಮಾಡುವ ಬದಲು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು. ಈ ಚಿತ್ರವು ಕೇವಲ ಮನರಂಜನೆಯಲ್ಲ, ಬದಲಾಗಿ ಹಿಂದೂ ಹುಡುಗಿಯರು ಎದುರಿಸುತ್ತಿರುವ ನೈಜ ಸಮಸ್ಯೆಗಳ ಅನಾವರಣವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು, ಅನ್ಯಧರ್ಮೀಯರನ್ನು ವಿವಾಹವಾದ ನಂತರ ದೌರ್ಜನ್ಯಕ್ಕೆ ಒಳಗಾಗುವ ಮೂವರು ಮಹಿಳೆಯರ ಕಥೆಯನ್ನು ಹೊಂದಿದೆ. ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತಾದರೂ, ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಚಿತ್ರದ ಪ್ರದರ್ಶನಕ್ಕೆ ಹಾದಿ ಸುಗಮಗೊಳಿಸಿತ್ತು.

Read More
Next Story