
ಶಿವಕಾರ್ತಿಕೇಯನ್ ಅವರ ವೃತ್ತಿಜೀವನದ ಅತ್ಯಂತ ಗಂಭೀರ ಪಾತ್ರ ಇದಾಗಿದ್ದು, ರವಿ ಮೋಹನ್ ಪ್ರಬಲ ಖಳನಾಯಕನಾಗಿ ನಟಿಸಿದ್ದಾರೆ.
ಶಿವಕಾರ್ತಿಕೇಯನ್ ‘ಪರಾಶಕ್ತಿ’ ಓಟಿಟಿ ರಿಲೀಸ್ ಡೇಟ್ ಫಿಕ್ಸ್
ಪರಾಶಕ್ತಿ 1950 ಮತ್ತು 60ರ ದಶಕದ ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರವು ಹೇರಿದ್ದ ಹಿಂದಿ ಭಾಷಾ ನೀತಿಯ ವಿರುದ್ಧ ತಮಿಳುನಾಡಿನಲ್ಲಿ ನಡೆದ ಐತಿಹಾಸಿಕ ಪ್ರತಿಭಟನೆಗಳು ಈ ಚಿತ್ರದ ಮುಖ್ಯ ಕಥಾವಸ್ತು.
ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸುಧಾ ಕೊಂಗರಾ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಷ್ಟೊಂದು ದಾಖಲೆ ಬರೆಯದಿದ್ದರೂ ಶೀಘ್ರದಲ್ಲೇ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.
ನಟ ಶಿವಕಾರ್ತಿಕೇಯನ್ ಮುಖ್ಯ ಭೂಮಿಕೆಯಲ್ಲಿರುವ 'ಪರಾಶಕ್ತಿ' ಚಿತ್ರದ ಓಟಿಟಿ ಹಕ್ಕುಗಳನ್ನು ಜೀ5 ಸಂಸ್ಥೆಯು ಭಾರಿ ಮೊತ್ತಕ್ಕೆ ಖರೀದಿಸಿದೆ. ಈ ಚಿತ್ರವು ಫೆಬ್ರವರಿ 7 ರಂದು ಜೀ5 ವೇದಿಕೆಯಲ್ಲಿ ಪ್ರೀಮಿಯರ್ ಆಗಲಿದ್ದು, ಓಟಿಟಿಪ್ಲೇ ಪ್ರೀಮಿಯಂ ಮೂಲಕವೂ ವೀಕ್ಷಣೆಗೆ ಲಭ್ಯವಿರಲಿದೆ. ಜನವರಿ 10 ರಂದು ಪೊಂಗಲ್ ಹಬ್ಬದ ಸಂದರ್ಭಕ್ಕೆ ಈ ಸಿನಿಮಾ ಬಿಡುಗಡೆಯಾಗಿತ್ತು.
ಈ ಸಿನಿಮಾ ಸ್ಯಾಕ್ನಿಲ್ಕ್ ವರದಿಯ ಪ್ರಕಾರ 'ಪರಾಶಕ್ತಿ' ಚಿತ್ರವು ವಿಶ್ವದಾದ್ಯಂತ ಸುಮಾರು 85 ಕೋಟಿ ರೂಪಾಯಿಗಳನ್ನು ಗಳಿಸಿದೆ. ಭಾರತದಲ್ಲಿ ಈ ಚಿತ್ರದ ಒಟ್ಟು ಸಂಗ್ರಹ 62 ಕೋಟಿ ರೂಪಾಯಿಗಳಾಗಿದ್ದರೆ, ಉಳಿದ 23 ಕೋಟಿ ರೂಪಾಯಿಗಳು ವಿದೇಶಿ ಮಾರುಕಟ್ಟೆಯಿಂದ ಬಂದಿದೆ. 2026ರ ಆರಂಭದಲ್ಲಿ ಬಿಡುಗಡೆಯಾದ ಪ್ರಮುಖ ಚಿತ್ರಗಳಲ್ಲಿ 'ಪರಾಶಕ್ತಿ' ಸದ್ಯ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಈ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪೊಂಗಲ್ ರೇಸ್‌ನಲ್ಲಿದ್ದ ವಿಜಯ್ ಅವರ 'ಜನ ನಾಯಕನ್' ಸಿನಿಮಾ ಮುಂದೂಡಲ್ಪಟ್ಟಿದ್ದು ಶಿವಕಾರ್ತಿಕೇಯನ್ ಅವರ ಈ ಚಿತ್ರಕ್ಕೆ ವರದಾನವಾಯಿತು.
ಈ ಸಿನಿಮಾ 1950-60ರ ದಶಕದ ತಮಿಳುನಾಡಿನ ಹಿನ್ನೆಲೆಯನ್ನು ಹೊಂದಿದ್ದು, ಅಂದಿನ ಹಿಂದಿ ವಿರೋಧಿ ಚಳವಳಿ ಮತ್ತು ಕೇಂದ್ರ ಸರ್ಕಾರದ ಭಾಷಾ ನೀತಿಯ ವಿರುದ್ಧ ನಡೆದ ಪ್ರತಿಭಟನೆಗಳ ಕಥೆಯನ್ನು ಹೇಳುತ್ತದೆ. ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಇಬ್ಬರು ಸಹೋದರರು ಒಂದು ದುರಂತ ಘಟನೆಯ ನಂತರ ಹೇಗೆ ಒಂದಾಗುತ್ತಾರೆ ಮತ್ತು 'ಪುರನಾನೂರು ಪಡೆ' ಎಂಬ ವಿದ್ಯಾರ್ಥಿ ಸಂಘಟನೆ ಹೇಗೆ ಹೋರಾಟ ರೂಪಿಸುತ್ತದೆ ಎಂಬುದು ಚಿತ್ರದ ಸಾರಾಂಶ.
ಚಿತ್ರದಲ್ಲಿ ರವಿ ಮೋಹನ್ ಖಳನಾಯಕನಾಗಿ ನಟಿಸಿದ್ದು, ಅಥರ್ವಾ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ರಾಣಾ ದಗ್ಗುಬಾಟಿ, ಬೆಸಿಲ್ ಜೋಸೆಫ್ ಮತ್ತು ಕನ್ನಡದ ಡಾಲಿ ಧನಂಜಯ್ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಈ ಚಿತ್ರಕ್ಕಿದೆ. ಮೊದಲು ಈ ಪ್ರಾಜೆಕ್ಟ್ ನಟ ಸೂರ್ಯ ಅವರೊಂದಿಗೆ ಘೋಷಣೆಯಾಗಿತ್ತಾದರೂ, ನಂತರ ಕಾರಣಾಂತರಗಳಿಂದ ಅವರು ಚಿತ್ರದಿಂದ ಹೊರನಡೆದಿದ್ದರು.

