
ಶಿವಕಾರ್ತಿಕೇಯನ್ ಚಿತ್ರಕ್ಕೆ ಸಂಕಷ್ಟ: 'ಪರಾಶಕ್ತಿ' ಬ್ಯಾನ್ ಮಾಡಲು ಯೂತ್ ಕಾಂಗ್ರೆಸ್ ಪಟ್ಟು
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚಿತ್ರತಂಡ, ಸಿನಿಮಾವು ಸೆನ್ಸಾರ್ ಮಂಡಳಿಯ ಪರಿಶೀಲನೆಗೆ ಒಳಪಟ್ಟಿದೆ ಮತ್ತು ಹಲವು ದೃಶ್ಯಗಳಿಗೆ ಕತ್ತರಿ ಹಾಕಿದ ನಂತರವೇ ಬಿಡುಗಡೆಗೆ ಅನುಮತಿ ಸಿಕ್ಕಿದೆ ಎಂದು ಸಮರ್ಥಿಸಿಕೊಂಡಿದೆ.
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ನಟ ಶಿವಕಾರ್ತಿಕೇಯನ್ ಅಭಿನಯದ ಬಹುನಿರೀಕ್ಷಿತ 'ಪರಾಶಕ್ತಿ' (Parasakthi) ಸಿನಿಮಾ ಇದೀಗ ರಾಜಕೀಯ ವಿವಾದದ ಸುಳಿಯಲ್ಲಿ ಸಿಲುಕಿದೆ. ತಮಿಳುನಾಡು ಯೂತ್ ಕಾಂಗ್ರೆಸ್ ಈ ಚಿತ್ರದ ವಿರುದ್ಧ ಕಿಡಿಕಾರಿದ್ದು, ಇತಿಹಾಸವನ್ನು ತಿರುಚಲಾಗಿದೆ ಮತ್ತು ಕಾಂಗ್ರೆಸ್ ಪಕ್ಷವನ್ನು ನಕಾರಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದೆ.
ಈಗಾಗಲೇ ನಟ ವಿಜಯ್ ಅವರ 'ಜನನಾಯಕನ್' ಚಿತ್ರದ ಬಿಡುಗಡೆ ವಿಳಂಬವಾಗಿ ಕಾನೂನು ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ಶಿವಕಾರ್ತಿಕೇಯನ್ ಅವರ ಚಿತ್ರಕ್ಕೂ ರಾಜಕೀಯ ಗ್ರಹಣ ಬಡಿದಂತಾಗಿದೆ.
ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವೇನು?
1960ರ ದಶಕದ ತಮಿಳುನಾಡಿನ 'ಹಿಂದಿ ಹೇರಿಕೆ ವಿರೋಧಿ ಹೋರಾಟ'ದ (Anti-Hindi Agitation) ಹಿನ್ನೆಲೆಯಲ್ಲಿ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಯೂತ್ ಕಾಂಗ್ರೆಸ್ ನಾಯಕರು ಪ್ರಮುಖವಾಗಿ ಮೂರು ಅಂಶಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ: ಚಿತ್ರದ ದೃಶ್ಯವೊಂದರಲ್ಲಿ ಅಂಚೆ ಕಚೇರಿ ಫಾರ್ಮ್‌ಗಳನ್ನು ಹಿಂದಿಯಲ್ಲಿ ಕಡ್ಡಾಯಗೊಳಿಸಿದಂತೆ ತೋರಿಸಲಾಗಿದೆ. ಆದರೆ, ವಾಸ್ತವದಲ್ಲಿ ಆ ಸಮಯದಲ್ಲಿ ಅಂತಹ ಘಟನೆಯೇ ನಡೆದಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1965ರಲ್ಲಿ ಕೊಯಮತ್ತೂರಿನಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಿದ್ದಂತೆ ಮತ್ತು ಅವರ ಸಮ್ಮುಖದಲ್ಲಿಯೇ ಪೊಲೀಸ್ ದೌರ್ಜನ್ಯ ನಡೆದಂತೆ ಚಿತ್ರಿಸಲಾಗಿದೆ. ಇದು ಸಂಪೂರ್ಣವಾಗಿ ಕಾಲ್ಪನಿಕ ಮತ್ತು ಸತ್ಯಕ್ಕೆ ದೂರವಾದ ಸಂಗತಿ ಎಂದು ಕಾಂಗ್ರೆಸ್ ವಾದಿಸಿದೆ.
ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಇಂದಿರಾ ಗಾಂಧಿ, ಲಾಲ್ ಬಹುದ್ದೂರ್ ಶಾಸ್ತ್ರಿ ಮತ್ತು ಕೆ. ಕಾಮರಾಜ್ ಅವರ ನೈಜ ಫೋಟೋಗಳನ್ನು ಬಳಸಲಾಗಿದೆ. ಇದರ ಜೊತೆಗೆ, "ಕಾಂಗ್ರೆಸ್ ಕಾರಣದಿಂದ 200ಕ್ಕೂ ಹೆಚ್ಚು ತಮಿಳರು ಸಾವನ್ನಪ್ಪಿದರು" ಎಂಬರ್ಥದ ಮಾಹಿತಿಯನ್ನು ನೀಡಲಾಗಿದೆ. ಇದಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ ಎಂಬುದು ಯೂತ್ ಕಾಂಗ್ರೆಸ್ ನಾಯಕರ ಆರೋಪವಾಗಿದೆ.
ಡಿಎಂಕೆ ಪರ, ಹಿಂದೂ ವಿರೋಧಿ' ಹಣೆಪಟ್ಟಿ
ಯೂತ್ ಕಾಂಗ್ರೆಸ್ ಈ ಚಿತ್ರವನ್ನು "ಡಿಎಂಕೆ ಪರ ಮತ್ತು ಹಿಂದೂ ವಿರೋಧಿ" ಎಂದು ಜರೆದಿದೆ. ಚಿತ್ರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ವಿವಾದಿತ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಚಿತ್ರತಂಡದವರು ಸಾರ್ವಜನಿಕ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದೆ.
ಚಿತ್ರತಂಡದ ಸ್ಪಷ್ಟನೆ
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚಿತ್ರತಂಡ, ಸಿನಿಮಾವು ಸೆನ್ಸಾರ್ ಮಂಡಳಿಯ (CBFC) ಕಠಿಣ ಪರಿಶೀಲನೆಗೆ ಒಳಪಟ್ಟಿದೆ ಮತ್ತು ಹಲವು ದೃಶ್ಯಗಳಿಗೆ ಕತ್ತರಿ ಹಾಕಿದ ನಂತರವೇ ಬಿಡುಗಡೆಗೆ ಅನುಮತಿ ಸಿಕ್ಕಿದೆ ಎಂದು ಸಮರ್ಥಿಸಿಕೊಂಡಿದೆ. ಅಲ್ಲದೆ, ಕೆಲವು ದೃಶ್ಯಗಳು ಕಾಲ್ಪನಿಕ ನಾಟಕೀಯ ಭಾಗಗಳು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ತಿಳಿಸಿದೆ. ವಿವಾದಗಳ ನಡುವೆಯೂ 'ಪರಾಶಕ್ತಿ' ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಜಾಗತಿಕವಾಗಿ 50 ಕೋಟಿ ರೂ. ಗಳಿಕೆ ದಾಟಿದೆ ಎಂದು ವರದಿಯಾಗಿದೆ.

