ಆಸ್ಕರ್ 2026: ಬಾಲಿವುಡ್ ದಿಗ್ಗಜ ಧರ್ಮೇಂದ್ರಗೆ ತಪ್ಪಿದ ಗೌರವ; ಭಾರತೀಯ ಅಭಿಮಾನಿಗಳ ಆಕ್ರೋಶ
x

2026ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಬಾರಿ ಸುದೀರ್ಘವಾದ 'ಇನ್ ಮೆಮೋರಿಯಂ' ವಿಭಾಗವಿತ್ತು. ಆದರೆ ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಅಕಾಡೆಮಿ, ಭಾರತದ ಹೆಮ್ಮೆಯ ನಟ ಧರ್ಮೇಂದ್ರ ಅವರನ್ನು ಸ್ಮರಿಸಲು ಮರೆತಿದೆ.

ಆಸ್ಕರ್ 2026: ಬಾಲಿವುಡ್ ದಿಗ್ಗಜ ಧರ್ಮೇಂದ್ರಗೆ ತಪ್ಪಿದ ಗೌರವ; ಭಾರತೀಯ ಅಭಿಮಾನಿಗಳ ಆಕ್ರೋಶ

98ನೇ ಆಸ್ಕರ್ ಪ್ರಶಸ್ತಿ ಸಮಾರಂಭದ 'ಇನ್ ಮೆಮೋರಿಯಂ' ವಿಭಾಗದಲ್ಲಿ ಬಾಲಿವುಡ್ ದಿಗ್ಗಜ ಧರ್ಮೇಂದ್ರ ಅವರಿಗೆ ಗೌರವ ಸಿಗದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.


Click the Play button to hear this message in audio format

ಲಾಸ್ ಏಂಜಲೀಸ್‌ನಲ್ಲಿ ಅದ್ಧೂರಿಯಾಗಿ ಜರುಗಿದ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. 2025ರ ಸಾಲಿನ ಅತ್ಯುತ್ತಮ ಚಿತ್ರಗಳು ಮತ್ತು ಕಲಾವಿದರನ್ನು ಗೌರವಿಸಿದ ಈ ವೇದಿಕೆಯಲ್ಲಿ, ಅಗಲಿದ ಗಣ್ಯರನ್ನು ಸ್ಮರಿಸುವ 'ಇನ್ ಮೆಮೋರಿಯಂ' ವಿಭಾಗವು ಈ ಬಾರಿ ಸುದೀರ್ಘವಾಗಿತ್ತು. ಆದರೆ, ಈ ಸ್ಮರಣಾಂಜಲಿ ವಿಭಾಗದಲ್ಲಿ ಭಾರತದ ಹಿರಿಯ ನಟ, ಬಾಲಿವುಡ್‌ನ 'ಹೀ-ಮ್ಯಾನ್' ಎಂದೇ ಖ್ಯಾತರಾಗಿದ್ದ ಧರ್ಮೇಂದ್ರ ಅವರ ಹೆಸರನ್ನು ಕೈಬಿಟ್ಟಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ಸಂಘಟಕರು ಹೊಸತನಕ್ಕೆ ಮೊರೆ ಹೋಗಿದ್ದರು. ಕೇವಲ ವಿಡಿಯೋ ತುಣುಕುಗಳನ್ನು ಪ್ರದರ್ಶಿಸುವ ಬದಲಿಗೆ, ದಿಗ್ಗಜ ಕಲಾವಿದರಾದ ರಾಬರ್ಟ್ ರೆಡ್‌ಫೋರ್ಡ್ ಮತ್ತು ರಾಬ್ ರೈನರ್ ಅವರಿಗೆ ಸುದೀರ್ಘ ಗೌರವ ಸಲ್ಲಿಸಲಾಯಿತು. ರಾಬ್ ರೈನರ್ ಅವರನ್ನು ಬಿಲ್ಲಿ ಕ್ರಿಸ್ಟಲ್ ಸ್ಮರಿಸಿದರೆ, ರಾಬರ್ಟ್ ರೆಡ್‌ಫೋರ್ಡ್ ಅವರ ಅಭಿನಯದ ವೈಖರಿಯನ್ನು ಬಾರ್ಬರಾ ಸ್ಟ್ರೈಸಾಂಡ್ ಕೊಂಡಾಡಿದರು. ಅಲ್ಲದೆ, ಕೆನಡಾದ ಡಯೇನ್ ಕೀಟನ್ ಅವರಿಗೆ ರಾಚೆಲ್ ಮ್ಯಾಕ್ ಆಡಮ್ಸ್ ಗೌರವ ವಂದನೆ ಸಲ್ಲಿಸಿದರು.

ಆದರೆ, ಕಳೆದ ವರ್ಷ ನವೆಂಬರ್‌ನಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದ ಧರ್ಮೇಂದ್ರ ಅವರನ್ನು ಅಕಾಡೆಮಿಯು ಸಂಪೂರ್ಣವಾಗಿ ಮರೆತಿದೆ. ಈ ಹಿಂದೆ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಅವರಂತಹ ಭಾರತೀಯ ಕಲಾವಿದರನ್ನು ಆಸ್ಕರ್ ವೇದಿಕೆಯಲ್ಲಿ ಸ್ಮರಿಸಲಾಗಿತ್ತು. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆಸ್ಕರ್, ಭಾರತೀಯ ಚಿತ್ರರಂಗಕ್ಕೆ ದಶಕಗಳ ಕಾಲ ಕೊಡುಗೆ ನೀಡಿದ ಧರ್ಮೇಂದ್ರ ಅವರ ಹೆಸರನ್ನು ಕೈಬಿಟ್ಟಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಆಸ್ಕರ್​​ ಹಾಲಿವುಡ್​​ಗೆ ಸೀಮಿತವೇ?

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಸಿನಿಮಾ ಪ್ರೇಮಿಗಳು, ಆಸ್ಕರ್ ಕೇವಲ ಹಾಲಿವುಡ್‌ಗೆ ಸೀಮಿತವಾದ ಪ್ರದರ್ಶನವೇ ಹೊರತು ನಿಜವಾದ ಅರ್ಥದಲ್ಲಿ ಅಂತರಾಷ್ಟ್ರೀಯ ವೇದಿಕೆಯಲ್ಲ ಎಂದು ಟೀಕಿಸಿದ್ದಾರೆ. ಕೇವಲ ಧರ್ಮೇಂದ್ರ ಮಾತ್ರವಲ್ಲದೆ, ಜೇಮ್ಸ್ ವ್ಯಾನ್ ಡೆರ್ ಬೀಕ್, ಎರಿಕ್ ಡೇನ್ ಮತ್ತು ಬ್ರಿಜಿಟ್ ಬಾರ್ಡೋಟ್ ಅವರಂತಹ ಪ್ರಮುಖ ಹೆಸರುಗಳು ಕೂಡ ಈ ಪಟ್ಟಿಯಿಂದ ಹೊರಗುಳಿದಿರುವುದು ಆಶ್ಚರ್ಯ ಮೂಡಿಸಿದೆ.

ಸಿನಿ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಾದ ಆಸ್ಕರ್ ಅವಾರ್ಡ್‌ಗಳ 2026 ಆವೃತ್ತಿಯಲ್ಲಿ ಹಲವು ಪ್ರಮುಖ ಸಿನಿಮಾಗಳು ಮತ್ತು ಕಲಾವಿದರು ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ. ವಿಶೇಷವಾಗಿ “ಸಿನ್ನರ್ಸ್” ಹಾಗೂ “ಒನ್ ಬ್ಯಾಟಲ್ ಆಫ್ಟರ್ ಅನದರ್” ಸಿನಿಮಾಗಳು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ಸಾಧನೆ ಮಾಡಿವೆ. 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ 'ಸಿನರ್ಸ್' (Sinners) ಚಿತ್ರದ ಅದ್ಭುತ ನಟನೆಗಾಗಿ ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇದು ಅವರ ವೃತ್ತಿಜೀವನದ ಮೊದಲ ಆಸ್ಕರ್ ಗೌರವವಾಗಿದೆ. ಮತ್ತೊಂದೆಡೆ 'ಹ್ಯಾಮ್ನೆಟ್' (Hamnet) ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಜೆಸ್ಸಿ ಬಕ್ಲಿ ಅವರು 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಪ್ರಬಲ ಪೈಪೋಟಿಯ ನಡುವೆಯೂ ಜೆಸ್ಸಿ ಬಕ್ಲಿ ಅವರು ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Read More
Next Story