KD Movie| ನಿರ್ದೇಶಕ ಪ್ರೇಮ್, ನೋರಾ ಫತೇಹಿ, ಸಂಜಯ್ ದತ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸಮನ್ಸ್
x

ರಾಷ್ಟ್ರೀಯ ಮಹಿಳಾ ಆಯೋಗದಿಂದ ಚಿತ್ರತಂಡಕ್ಕೆ ಸಮನ್ಸ್

KD Movie| ನಿರ್ದೇಶಕ ಪ್ರೇಮ್, ನೋರಾ ಫತೇಹಿ, ಸಂಜಯ್ ದತ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸಮನ್ಸ್

ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್ ತೇರಿ ಸರ್ಕೆ’ ಹಾಡು ಈಗ ದೊಡ್ಡ ಕಾನೂನು ಸಂಕಷ್ಟಕ್ಕೆ ಸಿಲುಕಿದೆ.


Click the Play button to hear this message in audio format

‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್ ತೇರಿ ಸರ್ಕೆ’ ಹಾಡಿನ ವಿಚಾರವಾಗಿ ಈಗ ರಾಷ್ಟ್ರೀಯ ಮಹಿಳಾ ಆಯೋಗವು ನಿರ್ದೇಶಕ ಪ್ರೇಮ್ ಸೇರಿದಂತೆ, ಚಿತ್ರದ ನಿರ್ಮಾಪಕ ವೆಂಕಟ್ ಕೆ. ನಾರಾಯಣ, ಹಾಡಿನಲ್ಲಿ ನಟಿಸಿರುವ ನಟಿ ನೋರಾ ಫತೇಹಿ ಚಿತ್ರದ ಪ್ರಮುಖ ನಟ ಸಂಜಯ್ ದತ್, ಹಿಂದಿ ಅವತರಣಿಕೆಯ ಗೀತರಚನೆಕಾರ ರಕೀಬ್ ಆಲಂ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಎಲ್ಲರೂ ಮಾರ್ಚ್ 24 ರಂದು ಮಧ್ಯಾಹ್ನ 12:30ಕ್ಕೆ ಸೂಕ್ತ ದಾಖಲೆಗಳೊಂದಿಗೆ ಆಯೋಗದ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ.

ಈ ಹಾಡಿನಲ್ಲಿರುವ ಅಶ್ಲೀಲ ಸಾಹಿತ್ಯ ಮತ್ತು ಆಕ್ಷೇಪಾರ್ಹ ನೃತ್ಯ ಸಂಯೋಜನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆಯೋಗವು ಈ ಕ್ರಮ ಕೈಗೊಂಡಿದೆ. ಈ ಹಾಡಿನ ಸಾಹಿತ್ಯವು ಲೈಂಗಿಕವಾಗಿ ಪ್ರಚೋದಿಸುವಂತಿದ್ದು, ಭಾರತೀಯ ನ್ಯಾಯ ಸಂಹಿತೆ, ಐಟಿ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆಯೋಗವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಒಂದು ವೇಳೆ ವಿಚಾರಣೆಗೆ ಹಾಜರಾಗಲು ವಿಫಲರಾದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಪ್ರೇಮ್ ನಿರ್ದೇಶನದ ಈ ಚಿತ್ರದ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಹಾಡಿನ ಆರಂಭಿಕ ಸಾಲುಗಳು ದ್ವಂದ್ವಾರ್ಥದಿಂದ ಕೂಡಿದ್ದು, ನೋಡುಗರಲ್ಲಿ ಮುಜುಗರ ಉಂಟುಮಾಡುವಂತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು.

ವಿವಾದ ತಾರಕಕ್ಕೇರುತ್ತಿದ್ದಂತೆ ಯೂಟ್ಯೂಬ್‌ನಿಂದ ಈ ಹಾಡಿನ ಹಿಂದಿ ಆವೃತ್ತಿಯನ್ನು ಈಗಾಗಲೇ ತೆಗೆದುಹಾಕಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ನೋರಾ ಫತೇಹಿ, ಇಂತಹ ಕಂಟೆಂಟ್ ಅನ್ನು ತಾನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರ ಒತ್ತಡ ಮತ್ತು ಆಕ್ರೋಶದಿಂದಾಗಿ ಚಿತ್ರತಂಡವು ಹಾಡನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿರುವುದಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಪ್ರಸ್ತುತ ಈ ವಿವಾದವು ಸ್ಯಾಂಡಲ್‌ವುಡ್ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹಾಡನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿಷಯಗಳು ಅತಿವೇಗದಲ್ಲಿ ಹರಡುವ ಯುಗದಲ್ಲಿ ಸಮಾಜದ ಹಿತಾಸಕ್ತಿಯನ್ನು ರಕ್ಷಿಸುವುದು ಅನಿವಾರ್ಯವಾಗಿದೆ. ವಿಶೇಷವಾಗಿ ಮಹಿಳೆಯರ ಮತ್ತು ವಂಚಿತ ವರ್ಗಗಳ ಗೌರವಕ್ಕೆ ಧಕ್ಕೆ ಬರುವಂತ ಯಾವುದೇ ವಿಷಯಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ದವಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದರು.

Read More
Next Story