
ಸರ್ಸೆ ಸರ್ಸೆ' ಹಾಡಿನ ವಿರುದ್ಧ ಸಿಡಿದೆದ್ದ ಮಹಿಳಾ ಆಯೋಗ
'ಸರ್ಸೆ ನಿನ್ನ ಸೆರಗ ಸರ್ಸೆ' ವಿವಾದ|ಚಿತ್ರತಂಡದ ವಿರುದ್ಧ ಕ್ರಮಕ್ಕೆ ಮಹಿಳಾ ಆಯೋಗದಿಂದ ಸೂಚನೆ
'ಕೆಡಿ: ದಿ ಡೆವಿಲ್' ಚಿತ್ರದ 'ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ' ಹಾಡು ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸುವ ಈ ಹಾಡಿನ ಬಗ್ಗೆ ವರದಿ ನೀಡುವಂತೆ ಸೆನ್ಸಾರ್ ಮಂಡಳಿ ಮತ್ತು ಫಿಲ್ಮ್ ಚೇಂಬರ್‌ಗೆ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚಿಸಿದ್ದಾರೆ.
ಧ್ರುವ ಸರ್ಜಾ ಅಭಿನಯದ 'ಕೆಡಿ: ದಿ ಡೆವಿಲ್' ಸಿನಿಮಾದ "ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ" ಹಾಡಿನ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ. ಹಾಡಿನ ಸಾಹಿತ್ಯವು ಮಹಿಳೆಯರನ್ನು ಅವಹೇಳನ ಮಾಡುವಂತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗವು, ಚಿತ್ರತಂಡದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಈ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ಬಳಸಲಾಗಿರುವ ಪದಗಳು ಅಶ್ಲೀಲತೆಯಿಂದ ಕೂಡಿದ್ದು, ಮಹಿಳೆಯರಿಗೆ ಅಗೌರವ ತರುವಂತಿವೆ ಎಂದು ಅವರು ಆಕ್ಷೇಪಿಸಿದ್ದಾರೆ. ಈ ಸಂಬಂಧ ಪ್ರಾದೇಶಿಕ ಸೆನ್ಸಾರ್ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧಿಕೃತ ಪತ್ರ ಬರೆದಿರುವ ಅವರು, ಕೂಡಲೇ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಮತ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸಿನಿಮಾ ಎಂಬುದು ಸಮಾಜದ ಮೇಲೆ ಬೀರಬಲ್ಲ ಪ್ರಭಾವಶಾಲಿ ಮಾಧ್ಯಮ. ಇಂತಹ ಅಶ್ಲೀಲ ಸಾಹಿತ್ಯವು ಸಮಾಜದಲ್ಲಿ ಮಹಿಳೆಯರ ಬಗ್ಗೆ ಲಘು ಧೋರಣೆ ಮತ್ತು ಅವಹೇಳನಕಾರಿ ವರ್ತನೆಯನ್ನು ಸಾಮಾನ್ಯೀಕರಿಸುವ ಅಪಾಯವಿದೆ ಎಂದು ಡಾ. ನಾಗಲಕ್ಷ್ಮಿ ಆತಂಕ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿಯೂ ಈ ಹಾಡು ತಮಗೆ ತೀವ್ರ ಮುಜುಗರ ಉಂಟುಮಾಡಿದ್ದು, ಸಂಪೂರ್ಣವಾಗಿ ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅವರು ಅಸಹನೆ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ?
ನಿರ್ದೇಶಕ ಪ್ರೇಮ್ ಅವರೇ ಸಾಹಿತ್ಯ ಬರೆದು ನಿರ್ದೇಶಿಸಿರುವ ಈ ಹಾಡಿನಲ್ಲಿ ಸಂಜಯ್ ದತ್ ಮತ್ತು ನೋರಾ ಫತೇಹಿ ಕಾಣಿಸಿಕೊಂಡಿದ್ದಾರೆ. ಹಾಡು ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಸಾರ್ವಜನಿಕರ ದೂರು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಈಗಾಗಲೇ ಈ ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ.
ಕನ್ನಡ ಸೇರಿದಂತೆ ಇತರ ಭಾಷೆಗಳ ಆವೃತ್ತಿಗಳ ಬಗ್ಗೆಯೂ ಆಕ್ಷೇಪಗಳು ಮುಂದುವರಿದಿದ್ದು, ಸಿನಿಮಾ ಕ್ಷೇತ್ರದಲ್ಲಿ ಜವಾಬ್ದಾರಿಯುತ ವಿಷಯಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಚಿತ್ರತಂಡ ಈ ವಿವಾದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

