
ಚಿತ್ರೀಕರಣದ ವೇಳೆ ನಿರ್ದೇಶಕ ಸನೋಜ್ ಮಿಶ್ರಾ ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡುತ್ತಿದ್ದರು ಎಂದು ಮೋನಾಲಿಸಾ ಭೋಸ್ಲೆ ಬಹಿರಂಗಪಡಿಸಿದ್ದಾರೆ.
Monalisa| "ಆತ ಖಾಸಗಿ ಅಂಗ ಮುಟ್ಟಿ ಟಾರ್ಚರ್ ಮಾಡ್ತಿದ್ದ"
Monalisa|ಪ್ರಯಾಗ್‌ರಾಜ್ ಕುಂಭಮೇಳದ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ ಮೋನಾಲಿಸಾ ಭೋಸ್ಲೆ, ತಮ್ಮ ಮೊದಲ ಸಿನಿಮಾದ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ.
ಪ್ರಯಾಗ್‌ರಾಜ್ ಕುಂಭಮೇಳದ ಮೂಲಕ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದ ತಾರೆಯಾಗಿ ಹೊರಹೊಮ್ಮಿದ್ದ ಮೋನಾಲಿಸಾ ಭೋಸ್ಲೆ, ಇದೀಗ ತಮ್ಮ ಮೊದಲ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕರು ಪದೇ ಪದೇ ತಮ್ಮ ದೇಹದ ಭಾಗಗಳನ್ನು ಮುಟ್ಟುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಆ ಸಮಯದಲ್ಲಿ ತಮಗೆ ಕೇವಲ 18 ವರ್ಷ ವಯಸ್ಸಾಗಿದ್ದು, ಅಸಹಾಯಕತೆಯಿಂದ ಮೌನವಾಗಿರಬೇಕಾಯಿತು ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ತಮ್ಮ ಪತಿ ಫರ್ಮನ್ ಖಾನ್ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಮೋನಾಲಿಸಾ, ತಮಗೆ ಕಿರುಕುಳ ನೀಡಿದ ನಿರ್ದೇಶಕನ ವಿರುದ್ಧ ಶೀಘ್ರದಲ್ಲೇ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಫರ್ಮನ್ ಖಾನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿರುವ ಮೋನಾಲಿಸಾ ಅವರ ವೈಯಕ್ತಿಕ ಜೀವನದ ಮೇಲೆ ಸನೋಜ್ ಮಿಶ್ರಾ 'ಲವ್ ಜಿಹಾದ್' ಎಂಬ ಹಣೆಪಟ್ಟಿ ಹಚ್ಚಿರುವುದು ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ.
ತನ್ನ ಮೇಲಿನ ಹಳೆಯ ದ್ವೇಶವನ್ನು ತೀರಿಸಿಕೊಳ್ಳಲು ನಿರ್ದೇಶಕರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೋನಾಲಿಸಾ ಆರೋಪಿಸಿದ್ದಾರೆ. ಕೇರಳದ ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲಾ ವಿಷಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ತಮಗೆ ಪ್ರಾಣಭಯವಿದ್ದು ರಕ್ಷಣೆ ಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ನಟಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ಈ ಹಿಂದೆ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸನೋಜ್ ಮಿಶ್ರಾ ಅವರಿಗೆ, ಮೋನಾಲಿಸಾ ಅವರ ಈ ಹೊಸ ಆರೋಪಗಳು ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಈ ಕಿರುಕುಳದ ಕುರಿತು ಶೀಘ್ರದಲ್ಲೇ ಅಧಿಕೃತವಾಗಿ ಪೊಲೀಸ್ ದೂರು ದಾಖಲಿಸುವುದಾಗಿ ನಟಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋನಾಲಿಸಾ ಪರವಾಗಿ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದ್ದು, ಚಿತ್ರರಂಗದ ಈ ಕರಾಳ ಮುಖದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಚಲನಚಿತ್ರರಂಗದಲ್ಲಿ 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ನಂತಹ ವಿವಾದಾತ್ಮಕ ಚಿತ್ರಗಳ ಮೂಲಕ ಸದ್ದು ಮಾಡುತ್ತಿರುವ ಸನೋಜ್ ಮಿಶ್ರಾ ವಿರುದ್ಧ ದಶಕಗಳ ಹಿಂದೆಯೇ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಮೂಲತಃ ಉತ್ತರ ಪ್ರದೇಶದವರಾದ ಮಿಶ್ರಾ ಅವರು ಚಿತ್ರರಂಗಕ್ಕೆ ಬರುವ ಮೊದಲು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಲಕ್ನೋ ಮತ್ತು ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅವರ ವಿರುದ್ಧ ಈ ಹಿಂದೆ ಹತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಪ್ರಮುಖವಾಗಿ ಕೊಲೆ ಯತ್ನ, ಸುಲಿಗೆ, ಬೆದರಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಕೇಸುಗಳು ದಾಖಲಾಗಿದ್ದವು ಎಂಬುದು ಪೊಲೀಸ್ ಮೂಲಗಳ ಮಾಹಿತಿ. 90ರ ದಶಕದ ಅಂತ್ಯದಲ್ಲಿ ಮತ್ತು 2000ರ ಆರಂಭದ ವರ್ಷಗಳಲ್ಲಿ ಮಿಶ್ರಾ ಅವರ ಹೆಸರು ಸ್ಥಳೀಯ ಅಪರಾಧ ಜಗತ್ತಿನಲ್ಲಿ ಕೇಳಿಬರುತ್ತಿತ್ತು.
ಒಂದು ಕಾಲದಲ್ಲಿ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದ ಇವರು, ನಂತರದ ದಿನಗಳಲ್ಲಿ ತಮ್ಮ ಹಾದಿಯನ್ನು ಬದಲಿಸಿ ಚಿತ್ರರಂಗದತ್ತ ಮುಖ ಮಾಡಿದರು. ಸಿನಿಮಾ ರಂಗಕ್ಕೆ ಬಂದ ನಂತರವೂ ಅವರು ನಿರ್ದೇಶಿಸುವ ಚಿತ್ರಗಳ ಕಥಾವಸ್ತುಗಳು ಅನೇಕ ಬಾರಿ ಕಾನೂನು ಸಂಘರ್ಷಕ್ಕೆ ಕಾರಣವಾಗಿವೆ. ಪಶ್ಚಿಮ ಬಂಗಾಳದ ಕುರಿತಾದ ಅವರ ಇತ್ತೀಚಿನ ಚಿತ್ರದ ವಿವಾದದ ಸಂದರ್ಭದಲ್ಲೂ, ಅವರ ಹಳೆಯ ಕ್ರಿಮಿನಲ್ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಮತ್ತೆ ಚರ್ಚೆಗೆ ಬಂದಿವೆ.

