ಅಂತಧರ್ಮೀಯ ಯುವಕನನ್ನು ವರಿಸಿದ ಕುಂಭಮೇಳ ವೈರಲ್‌ ಗರ್ಲ್‌ ಮೋನಾಲಿಸಾ
x

ಅಂತಧರ್ಮೀಯ ಯುವಕನನ್ನು ವರಿಸಿದ ಕುಂಭಮೇಳ ವೈರಲ್‌ ಗರ್ಲ್‌ ಮೋನಾಲಿಸಾ

ಮಹಾ ಕುಂಭಮೇಳದ ಮೂಲಕ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಮೋನಾಲಿಸಾ ಭೋಸಲೆ, ಈಗ ಕೇರಳದ ದೇವಸ್ಥಾನವೊಂದರಲ್ಲಿ ತಮ್ಮ ಪ್ರಿಯತಮ ಫರ್ಮನ್ ಖಾನ್ ಅವರನ್ನು ವರಿಸಿದ್ದಾರೆ.


Click the Play button to hear this message in audio format

ಪ್ರಯಾಗ್‌ರಾಜ್‌ನಲ್ಲಿ ಕಳೆದ ವರ್ಷ ನಡೆದ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದ ಮೋನಾಲಿಸಾ ಭೋಸಲೆ ಕುಟುಂಬದ ವಿರೋಧದ ನಡುವೆಯೂ ಕೇರಳದ ದೇವಸ್ಥಾನವೊಂದರಲ್ಲಿ ತಮ್ಮ ಪ್ರಿಯತಮ ಫರ್ಮನ್ ಖಾನ್ ಅವರನ್ನು ಕೈಹಿಡಿದಿದ್ದಾರೆ.

ಮೂಲತಃ ಮಧ್ಯಪ್ರದೇಶದವರಾದ ಮೋನಾಲಿಸಾ, ಉತ್ತರ ಪ್ರದೇಶದ ಫರ್ಮನ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಈ ಪ್ರೇಮ ವಿವಾಹಕ್ಕೆ ಮೋನಾಲಿಸಾ ಅವರ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಗ್ರಾಮದ ಹುಡುಗನನ್ನೇ ಮದುವೆಯಾಗಬೇಕೆಂದು ಕುಟುಂಬಸ್ಥರು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಭಾವಿಸಿದ ಮೋನಾಲಿಸಾ, ಕೇರಳದ ತಂಪನೂರು ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಿದ್ದರು. ಚಿತ್ರವೊಂದರ ಪೂಜೆಗಾಗಿ ತಂದೆಯೊಂದಿಗೆ ಕೇರಳಕ್ಕೆ ಬಂದಿದ್ದ ಅವರು, ಬಳಿಕ ತಂದೆಯ ಜೊತೆ ಹಿಂತಿರುಗಲು ನಿರಾಕರಿಸಿದ್ದರು. ತಾನು ವಯಸ್ಕಳಾಗಿದ್ದು, ತನ್ನ ಇಚ್ಛೆಯಂತೆ ಬದುಕಲು ಸ್ವತಂತ್ರಳು ಎಂದು ಪೊಲೀಸರಿಗೆ ತಿಳಿಸಿದ ಬಳಿಕ ಫರ್ಮನ್ ಜೊತೆ ಮದುವೆಯಾಗಲು ನಿರ್ಧರಿಸಿದ್ದಾರೆ.

ಕೊನೆಗೂ ತಿರುವನಂತಪುರದ ನೈನಾರ್ ದೇವಸ್ಥಾನದಲ್ಲಿ ಈ ಜೋಡಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ವಿ.ಶಿವನ್ ಕುಟ್ಟಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಭಾಗವಹಿಸಿ ಶುಭ ಹಾರೈಸಿದ್ದು ವಿಶೇಷವಾಗಿತ್ತು.

ಬಳಿಕ ಮಾಧ್ಯಮದವೊಂದಿಗೆ ಮಾತನಾಡಿದ ಮೋನಾಲಿಸಾ, "ನನ್ನ ಮನೆಯವರು ನನ್ನನ್ನು ಬೇರೆಡೆ ಮದುವೆಯಾಗಲು ಬಯಸಿದ್ದರು. ನಮ್ಮ ಹಳ್ಳಿಯಲ್ಲಿ ಒಬ್ಬರನ್ನು ಮದುವೆಯಾಗಲು ಬಯಸಿದ್ದರು. ಆದರೆ ನಾನು ನಿರಾಕರಿಸಿದೆ" ಎಂದು ತಿಳಿಸಿದ್ದಾರೆ.

ಫರ್ಮನ್ ಖಾನ್ ಕೂಡ ನಟನಾಗಿದ್ದು, ಕಳೆದ ಆರು ತಿಂಗಳಿನಿಂದ ಇವರು ಪ್ರೀತಿಸುತ್ತಿದ್ದರು. ಕೇರಳದ ಸಂಸ್ಕೃತಿ ಮತ್ತು ವಾತಾವರಣ ಇಷ್ಟವಾದ ಕಾರಣ ಅಲ್ಲಿಯೇ ವಿವಾಹವಾಗಲು ನಿರ್ಧರಿಸಿದ್ದಾಗಿ ಈ ದಂಪತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯ ಕುಟುಂಬದ ಒತ್ತಡದಿಂದ ಹೊರಬಂದು ಮದುವೆಯಾಗಿರುವುದಕ್ಕೆ ಮೋನಾಲಿಸಾ ಸಂತೋಷ ವ್ಯಕ್ತಪಡಿಸಿದ್ದಾರೆ.

Read More
Next Story