
ಚೊಚ್ಚಲ ನಿರ್ದೇಶಕಿ ಲಕ್ಷ್ಮಿಪ್ರಿಯಾ ದೇವಿ ಆಕ್ಷನ್ ಕಟ್ ಹೇಳಿರುವ ಮಣಿಪುರಿ ಭಾಷೆಯ ಕಾಮಿಡಿ-ಡ್ರಾಮಾ ಚಿತ್ರ 'ಬೂಂಗ್' ಭಾನುವಾರ ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ಬಾಫ್ಟಾ ಪ್ರಶಸ್ತಿ ಸಮಾರಂಭದಲ್ಲಿ 'ಅತ್ಯುತ್ತಮ ಮಕ್ಕಳ ಮತ್ತು ಕುಟುಂಬ ಚಲನಚಿತ್ರ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಮಣಿಪುರಿ ಚಲನಚಿತ್ರ 'ಬೂಂಗ್'ಗೆ ಲಂಡನ್‌ನಲ್ಲಿ ಪ್ರತಿಷ್ಠಿತ ಬಾಫ್ಟಾ ಪ್ರಶಸ್ತಿ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕಿ ಲಕ್ಷ್ಮಿಪ್ರಿಯಾ ದೇವಿ, ಮಣಿಪುರದಲ್ಲಿ ಶಾಂತಿ ನೆಲೆಸಲಿ ಎಂದು ಭಾವುಕ ಮನವಿ ಮಾಡಿದರು.
ಫರಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್‌ಟೇನ್‌ಮೆಂಟ್ ನಿರ್ಮಿಸಿರುವ ಹಾಗೂ ಚೊಚ್ಚಲ ನಿರ್ದೇಶಕಿ ಲಕ್ಷ್ಮಿಪ್ರಿಯಾ ದೇವಿ ಆಕ್ಷನ್ ಕಟ್ ಹೇಳಿರುವ ಮಣಿಪುರಿ ಭಾಷೆಯ ಕಾಮಿಡಿ-ಡ್ರಾಮಾ ಚಿತ್ರ 'ಬೂಂಗ್' ಭಾನುವಾರ ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ಬಾಫ್ಟಾ ಪ್ರಶಸ್ತಿ ಸಮಾರಂಭದಲ್ಲಿ 'ಅತ್ಯುತ್ತಮ ಮಕ್ಕಳ ಮತ್ತು ಕುಟುಂಬ ಚಲನಚಿತ್ರ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕಿ ಲಕ್ಷ್ಮಿಪ್ರಿಯಾ ದೇವಿ, ಮಣಿಪುರದಲ್ಲಿ ಶಾಂತಿ ನೆಲೆಸಲಿ ಎಂದು ಭಾವುಕ ಮನವಿ ಮಾಡಿದರು.
ವೆಸ್ಟ್ ಎಂಡ್ ಶೋ 'ಪ್ಯಾಡಿಂಗ್‌ಟನ್ ದ ಮ್ಯೂಸಿಕಲ್'ನ ಪ್ರಮುಖ ಪಾತ್ರಧಾರಿ 'ಪ್ಯಾಡಿಂಗ್‌ಟನ್ ಬೇರ್' ಅವರಿಂದ ಲಕ್ಷ್ಮಿಪ್ರಿಯಾ ದೇವಿ ಈ ಪ್ರತಿಷ್ಠಿತ ಟ್ರೋಫಿಯನ್ನು ಸ್ವೀಕರಿಸಿದರು. ಈ ವೇಳೆ ನಿರ್ಮಾಪಕರಾದ ಫರಾನ್ ಅಖ್ತರ್, ರಿತೇಶ್ ಸಿಧ್ವಾನಿ ಮತ್ತು ಚಿತ್ರದ ಸಹಾಯಕ ನಿರ್ದೇಶಕ ರಾಹುಲ್ ಶಾರ್ದಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೇವಿ, ಇಲ್ಲಿಯವರೆಗಿನ ಈ ಪಯಣವು, ನಾವೇ ಹತ್ತುತ್ತಿದ್ದೇವೆ ಎಂದು ನಮಗೆ ತಿಳಿದಿಲ್ಲದ ಪರ್ವತವೊಂದರ ತುದಿಯನ್ನು ತಲುಪುವ ಕೊನೆಯ ಕೆಲವು ಹೆಜ್ಜೆಗಳಂತೆ ಭಾಸವಾಯಿತು ಎಂದು ತಮ್ಮ ಸಂತಸ ಹಂಚಿಕೊಂಡರು.
ಶಾಂತಿಗಾಗಿ ಮನವಿ
ಇದೇ ಅವಕಾಶವನ್ನು ಬಳಸಿಕೊಂಡು ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಅವರು ಪ್ರಾರ್ಥಿಸಿದರು. ಮಣಿಪುರಕ್ಕೆ ಮತ್ತೆ ಶಾಂತಿ ಮರಳಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಚಿತ್ರದಲ್ಲಿ ನಟಿಸಿರುವ ಬಾಲ ಕಲಾವಿದರು ಸೇರಿದಂತೆ ಆಂತರಿಕವಾಗಿ ಸ್ಥಳಾಂತರಗೊಂಡಿರುವ ಎಲ್ಲಾ ಮಕ್ಕಳು ತಮ್ಮ ಸಂತೋಷ, ಮುಗ್ಧತೆ ಮತ್ತು ತಮ್ಮ ಕನಸುಗಳನ್ನು ಮರಳಿ ಪಡೆಯಲಿ ಎಂದು ನಾವು ಆಶಿಸುತ್ತೇವೆ. ಮನುಷ್ಯರಾಗಿ ನಾವೆಲ್ಲರೂ ಹೊಂದಿರುವ 'ಕ್ಷಮೆ' ಎಂಬ ಏಕೈಕ ಮಹಾಶಕ್ತಿಯನ್ನು ನಾಶಪಡಿಸುವಷ್ಟು ಯಾವುದೇ ಸಂಘರ್ಷವೂ ಪ್ರಬಲವಾಗಿರುವುದಿಲ್ಲ. ಪ್ರಶಸ್ತಿಯನ್ನು ಮಾತ್ರವಲ್ಲದೆ, ನಮ್ಮ ಭರವಸೆಯನ್ನು ವ್ಯಕ್ತಪಡಿಸಲು ಈ ವೇದಿಕೆಯನ್ನು ನೀಡಿದ ಬಾಫ್ಟಾಗೆ ಧನ್ಯವಾದಗಳು ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಚಿತ್ರಗಳನ್ನು ಹಿಂದಿಕ್ಕಿದ 'ಬೂಂಗ್'
ಗುಗುನ್ ಕಿಪ್ಜೆನ್ ಮತ್ತು ಬಾಲಾ ಹಿಜಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಮಣಿಪುರಿ ಚಿತ್ರವು, ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಮನಿರ್ದೇಶನಗೊಂಡಿದ್ದ 'ಲಿಲೋ ಆ್ಯಂಡ್ ಸ್ಟಿಚ್', 'ಆರ್ಕೊ' ಮತ್ತು 'ಝೂಟ್ರೋಪೊಲಿಸ್ 2' ಚಿತ್ರಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿದ ಆಲಿಯಾ ಭಟ್
ಥೇಮ್ಸ್ ನದಿ ತಟದ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆದ ಈ 2026ರ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ಸ್ (ಬಾಫ್ಟಾ) ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಸೆಲೆಬ್ರಿಟಿ ಅತಿಥಿಯಾಗಿ ಪಾಲ್ಗೊಂಡಿದ್ದರು. ನಾರ್ಡಿಕ್ ಡ್ರಾಮಾ 'ಸೆಂಟಿಮೆಂಟಲ್ ವ್ಯಾಲ್ಯೂ' ಚಿತ್ರಕ್ಕೆ 'ಇಂಗ್ಲಿಷ್ ಭಾಷೆಯಲ್ಲದ ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಅವರು ಪ್ರದಾನ ಮಾಡಿದರು. ನಮಸ್ತೆ ಎಂದು ಹಿಂದಿಯಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಅವರು, ನಂತರ ಇಂಗ್ಲಿಷ್‌ನಲ್ಲಿ ಮಾತನಾಡಿ, ಚಲನಚಿತ್ರವು ಅಸಂಖ್ಯಾತ ಧ್ವನಿಗಳಲ್ಲಿ ಮಾತನಾಡುತ್ತದೆ, ಆದರೆ ನಾವು ಯಾವಾಗಲೂ ಆಚರಿಸುವುದು ಸಿನಿಮಾದ ಭಾಷೆಯನ್ನು ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರಶಸ್ತಿ ಸಮಾರಂಭದ ರೆಡ್ ಕಾರ್ಪೆಟ್‌ನಲ್ಲಿ ಮಿನುಗುವ ಗುಸ್ಸಿ (Gucci) ಗೌನ್‌ನಲ್ಲಿ ಕಂಗೊಳಿಸಿದ ಆಲಿಯಾ ಭಟ್ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರು. ಕ್ಯಾಮರಾದ ಮುಂದೆ ಇದ್ದಾಗ ನಾನು ನಾನಾಗಿರುತ್ತೇನೆ. ನಾನು ನನ್ನ ಕೆಲಸವನ್ನು ತುಂಬಾ ಆಳವಾಗಿ ಪ್ರೀತಿಸುತ್ತೇನೆ. ಆದರೆ ಪ್ರಸ್ತುತ ನನ್ನ ನಿಜವಾದ ಸ್ಫೂರ್ತಿ ಮತ್ತು ಮ್ಯಾಜಿಕ್ ಎಂದರೆ ನನ್ನ ಮಗಳು. ಅವಳಿಗೀಗ ಮೂರು ವರ್ಷ, ನನ್ನ ಹಾಡುಗಳಿಗೆ ಅವಳು ನೃತ್ಯ ಮಾಡುವುದನ್ನು ನೋಡುವಾಗ, ಇದೇ ಜೀವನ ಎನಿಸುತ್ತದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸಿನಿಮಾ ಬಗ್ಗೆ ನಾನು ಇಷ್ಟಪಡುವ ವಿಷಯಗಳಲ್ಲಿ ಒಂದೆಂದರೆ, ಸಿನಿಮಾವನ್ನು ನಿಜವಾಗಿಯೂ ಆನಂದಿಸಲು ನಿಮಗೆ ಕೇವಲ ಒಂದೇ ಭಾಷೆ ತಿಳಿದಿರಬೇಕಾಗಿಲ್ಲ. ಆ ಭಾಷೆ ನಿಮಗೆ ಅರ್ಥವಾಗಬೇಕಿಲ್ಲ, ಏಕೆಂದರೆ ದೊಡ್ಡ ಪರದೆಯ ಮೂಲಕ ನಿಮ್ಮೆಡೆಗೆ ಹರಿಯುವ ಆ ಭಾವನೆಗಳೇ ಸಿನಿಮಾವನ್ನು ಮುನ್ನಡೆಸುತ್ತವೆ. ಇಂದಿನ ರಾತ್ರಿ ಸಿನಿಮಾಗಳ ಮೇಲಿನ ಪ್ರೀತಿಗಾಗಿಯೇ ಮೀಸಲು ಎಂದು ಅವರು ತಿಳಿಸಿದರು.
ಇತರ ಪ್ರಮುಖ ಪ್ರಶಸ್ತಿಗಳು
ಲಿಯೊನಾರ್ಡೊ ಡಿ ಕ್ಯಾಪ್ರಿಯೊ ಅಭಿನಯದ 'ಒನ್ ಬ್ಯಾಟಲ್ ಆಫ್ಟರ್ ಅನದರ್' ಚಿತ್ರವು ಸಮಾರಂಭದಲ್ಲಿ ಒಟ್ಟು ಆರು ಟ್ರೋಫಿಗಳನ್ನು ಗೆಲ್ಲುವ ಮೂಲಕ ಮುಂಚೂಣಿಯಲ್ಲಿತ್ತು. ಬಾಫ್ಟಾ ಅಧ್ಯಕ್ಷರಾದ ಪ್ರಿನ್ಸ್ ವಿಲಿಯಂ ಮತ್ತು ಅವರ ಪತ್ನಿ ಕೇಟ್ ಮಿಡ್ಲ್ಟನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎನ್‌ಬಿಸಿ (NBC) ಯೂನಿವರ್ಸಲ್ ಎಂಟರ್‌ಟೇನ್‌ಮೆಂಟ್‌ನ ಅಧ್ಯಕ್ಷರಾದ ಡೇಮ್ ಡೊನ್ನಾ ಲ್ಯಾಂಗ್ಲಿ ಅವರಿಗೆ ಈ ವರ್ಷದ 'ಬಾಫ್ಟಾ ಫೆಲೋಶಿಪ್' ಅನ್ನು ಪ್ರಿನ್ಸ್ ಆಫ್ ವೇಲ್ಸ್ ಪ್ರದಾನ ಮಾಡಿದರು.

