ದಿ ಕೇರಳ ಸ್ಟೋರಿ 2 ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅರ್ಜಿದಾರರು
x

ಕಣ್ಣೂರು ಮೂಲದ ಶ್ರೀದೇವ್ ನಂಬೂದರಿ ಎಂಬುವವರು ಈ ಸಿನಿಮಾದ ವಿರುದ್ಧ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.

'ದಿ ಕೇರಳ ಸ್ಟೋರಿ 2' ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅರ್ಜಿದಾರರು

ಸಿನಿಮಾದ ಟ್ರೇಲರ್‌ನಂತೆ, ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ನಡೆಯುವ ಮತಾಂತರ ಮತ್ತು ಅದರ ನಂತರ ಯುವತಿಯರು ಎದುರಿಸುವ ಚಿತ್ರಹಿಂಸೆ ಹಾಗೂ ಸಂಕಷ್ಟಗಳನ್ನು ಈ ಚಿತ್ರವು ಬಿಂಬಿಸುತ್ತದೆ.


Click the Play button to hear this message in audio format

ಸದ್ಯ ದೇಶಾದ್ಯಂತ ಭಾರಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿರುವ 'ದಿ ಕೇರಳ ಸ್ಟೋರಿ 2' ಹಿಂದಿ ಚಲನಚಿತ್ರಕ್ಕೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಈ ಸಿನಿಮಾ ಸುಳ್ಳು ನಿರೂಪಣೆ ಹಾಗೂ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುತ್ತಿದೆ ಎಂದು ಆರೋಪಿಸಿ ಕೇರಳ ಹೈಕೋರ್ಟ್‌ ಅರ್ಜಿ ಸಲ್ಲಿಕೆಯಾಗಿದ್ದು, ನ್ಯಾಯಾಲಯವು ಸೆನ್ಸಾರ್ ಮಂಡಳಿ ಮತ್ತು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಾಲಯದ ಮೆಟ್ಟಿಲೇರಿದ ವಿವಾದ

ಕಣ್ಣೂರು ಮೂಲದ ಶ್ರೀದೇವ್ ನಂಬೂದರಿ ಎಂಬುವವರು ಈ ಸಿನಿಮಾದ ವಿರುದ್ಧ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಿನಿಮಾದ ಟ್ರೇಲರ್ ಹಾಗೂ ಶೀರ್ಷಿಕೆಯು ಕೇರಳ ರಾಜ್ಯವನ್ನು ಕೆಟ್ಟದಾಗಿ ಬಿಂಬಿಸುತ್ತಿದೆ ಮತ್ತು ಇಡೀ ರಾಜ್ಯದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವಂತಿದೆ ಎಂದು ಅವರು ಅರ್ಜಿಯಲ್ಲಿ ದೂರಿದ್ದಾರೆ. ಈ ಚಿತ್ರದಲ್ಲಿ ಮತಾಂತರ ಮತ್ತು ಭಯೋತ್ಪಾದನೆಯಂತಹ ಗಂಭೀರ ವಿಷಯಗಳನ್ನು ಬಳಸಿಕೊಂಡು ಒಂದು ನಿರ್ದಿಷ್ಟ ಸಮುದಾಯ ಹಾಗೂ ಪ್ರದೇಶವನ್ನು ಅವಮಾನಿಸಲಾಗುತ್ತಿದೆ ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಪೀಠವು, ಫೆಬ್ರವರಿ 24ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸೆನ್ಸಾರ್ ಮಂಡಳಿ ಹಾಗೂ ಚಿತ್ರದ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ.

'ದಿ ಕೇರಳ ಸ್ಟೋರಿ 2' ಟ್ರೇಲರ್‌ ನೋಡಿ

ಮುಸ್ಲಿಂ ಜಮಾತ್ ಆಕ್ರೋಶ

ಮತ್ತೊಂದೆಡೆ, ಆಲ್ ಇಂಡಿಯಾ ಮುಸ್ಲಿಂ ಜಮಾತ್ ಸಂಘಟನೆಯು ಸಹ ಚಿತ್ರದ ವಿರುದ್ಧ ಹರಿಹಾಯ್ದಿದೆ. ಸಂಘಟನೆಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ , ಕೇವಲ ಹಣ ಗಳಿಸುವ ಉದ್ದೇಶದಿಂದ ಇಂತಹ ಸುಳ್ಳು ಕಥೆಗಳನ್ನು ಸಿನೆಮಾ ಮಾಡಲಾಗುತ್ತಿದೆ. ಇದು ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಹಾಳುಮಾಡುವ ಪಿತೂರಿಯಾಗಿದೆ ಎಂದು ಕಿಡಿಕಾರಿದ್ದಾರೆ. ಮುಸ್ಲಿಂ ಸಮುದಾಯವನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ಈ ಸಿನಿಮಾ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜಕೀಯ ಪ್ರತಿರೋಧ

ಸಿನಿಮಾದ ಟೀಸರ್ ಬಿಡುಗಡೆಯಾದಾಗಿನಿಂದಲೂ ಕೇರಳದ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಚಿತ್ರದ ವಿಷಯವಸ್ತುವನ್ನು ಖಂಡಿಸಿದ್ದಾರೆ. ಇದೊಂದು ದ್ವೇಷ ಹರಡುವ ಸಿನಿಮಾ ಎಂದು ತರೂರ್ ಟೀಕಿಸಿದರೆ, ಕೇರಳದ ಘನತೆಗೆ ಧಕ್ಕೆ ತರುವ ಪ್ರಯತ್ನ ಎಂದು ಸಿಎಂ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಹಾಗೂ ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ಈ ಚಿತ್ರವು ಫೆಬ್ರವರಿ 27 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈ ಸೀಕ್ವೆಲ್‌ನಲ್ಲಿ ಅದಿತಿ ಭಾಟಿಯಾ, ಐಶ್ವರ್ಯಾ ಓಜಾ ಮತ್ತು ಉಲ್ಕಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2023 ರಲ್ಲಿ ಬಿಡುಗಡೆಯಾಗಿದ್ದ ಇದರ ಮೊದಲ ಭಾಗ 'ದಿ ಕೇರಳ ಸ್ಟೋರಿ' ಕೂಡ ಭಾರಿ ವಿವಾದ ಸೃಷ್ಟಿಸಿತ್ತಾದರೂ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

Read More
Next Story