
'ದಿ ಕೇರಳ ಸ್ಟೋರಿ 2' ಟ್ರೈಲರ್ ಬಿಡುಗಡೆಯಾಗಿದೆ.
The Kerala Story- 2| ಟ್ರೈಲರ್ ರಿಲೀಸ್: ಮತಾಂತರದ ಕರಾಳ ಮುಖ ಅನಾವರಣಗೊಳಿಸಿದ ಸೀಕ್ವೆಲ್
'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಕೇರಳ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ನಡೆಯುವ ಮತಾಂತರದ ಕರಾಳ ಸತ್ಯಗಳನ್ನು ಈ ಚಿತ್ರ ಅನಾವರಣಗೊಳಿಸಲಿದೆ.
ಕಳೆದ ಕೆಲವು ವರ್ಷಗಳ ಹಿಂದೆ ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದ 'ದಿ ಕೇರಳ ಸ್ಟೋರಿ' ಚಿತ್ರದ ಸೀಕ್ವೆಲ್ 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಈಗ ಮತ್ತೆ ಸುದ್ದಿಯಲ್ಲಿದೆ. ಚಿತ್ರತಂಡವು ಈ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 2022ರಲ್ಲಿ ತೆರೆಕಂಡಿದ್ದ ಮೊದಲ ಭಾಗವು ಕೇವಲ ಕೇರಳಕ್ಕೆ ಸೀಮಿತವಾಗಿದ್ದರೆ, ಈ ಬಾರಿ 'ಗೋಸ್ ಬಿಯಾಂಡ್' ಶೀರ್ಷಿಕೆಯಡಿ ಕಥೆಯು ಕೇರಳದ ಗಡಿ ಮೀರಿ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಘಟನೆಗಳನ್ನು ಚಿತ್ರಿಸಿದೆ.
ಚಿತ್ರದ ಟ್ರೈಲರ್ ಆರಂಭದಲ್ಲೇ ಬರುವ ಒಂದು ಎಚ್ಚರಿಕೆಯ ಸಂದೇಶವು ಪ್ರೇಕ್ಷಕರಲ್ಲಿ ನಡುಕ ಹುಟ್ಟಿಸುವಂತಿದೆ. ಇನ್ನು 25 ವರ್ಷಗಳಲ್ಲಿ ಭಾರತವು ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಗಬಹುದು ಎಂಬ ಎಚ್ಚರಿಕೆಯೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ರಾಜಸ್ಥಾನದ ಹಿನ್ನೆಲೆಯಲ್ಲಿ ಆರಂಭವಾಗುವ ಟ್ರೈಲರ್ನಲ್ಲಿ, 16 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಆಕೆಯ ಪೋಷಕರು ಪೋಲಿಸ್ ಠಾಣೆಯಲ್ಲಿ ದೂರು ನೀಡುವ ದೃಶ್ಯಗಳು ಇವೆ. ಅಲ್ಲಿಂದ ಕಥೆಯು ಮಧ್ಯಪ್ರದೇಶಕ್ಕೆ ಸಾಗುತ್ತದೆ, ಅಲ್ಲಿ ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ಮದುವೆಯಾಗಿ ಮತಾಂತರಕ್ಕೆ ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ.
'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಟ್ರೇಲರ್
ಅಂತಿಮವಾಗಿ ಕಥೆ ಮತ್ತೆ ಕೇರಳಕ್ಕೆ ಮರಳುತ್ತದೆ. ಇಲ್ಲಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಲಿವ್-ಇನ್ ಸಂಬಂಧದ ನಡುವೆ ಧರ್ಮದ ವಿಚಾರ ಹೇಗೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬುದನ್ನು ಚಿತ್ರಿಸಲಾಗಿದೆ. ತನ್ನ ಧರ್ಮವನ್ನು ಬಿಡಲು ನಿರಾಕರಿಸುವ ಯುವತಿಯ ಮೇಲೆ ನಡೆಯುವ ಒತ್ತಡ ಹಾಗೂ ಅವಳ ವೈಯಕ್ತಿಕ ಸ್ವಾತಂತ್ರ್ಯದ ಹೋರಾಟ ಟ್ರೈಲರ್ನ ಪ್ರಮುಖ ಆಕರ್ಷಣೆಯಾಗಿದೆ.
ಈ ಸಿನಿಮಾವನ್ನು ಕಾಮಾಖ್ಯ ನಾರಾಯಣ ಸಿಂಗ್ ನಿರ್ದೇಶಿಸಿದ್ದು, ವಿಪುಲ್ ಅಮೃತಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯ ಓಜಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ಹಿಂದೂ ಯುವತಿಯರು ಮುಸ್ಲಿಂ ಯುವಕರನ್ನು ಪ್ರೀತಿಸಿದ ನಂತರ ಅವರ ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಹಾಗೂ ವ್ಯವಸ್ಥಿತವಾಗಿ ನಡೆಯುವ ಮತಾಂತರದ ಜಾಲವನ್ನು ಈ ಸಿನಿಮಾ ತೆರೆದಿಡಲಿದೆ. ಸದ್ಯ ಈ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದ್ದು, ಸಿನಿಮಾವು ಫೆಬ್ರವರಿ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

