
82 ಕೋಟಿ ಲೂಟಿ ಮಾಡಿದ 'ಕಲಂಕಾವಲ್' ಈಗ ಒಟಿಟಿಗೆ ಲಗ್ಗೆ.
ಸೈನೈಡ್ ಮೋಹನ್ ಪ್ರಕರಣದಿಂದ ಪ್ರೇರಿತ ಸಿನಿಮಾ 'ಕಲಂಕಾವಲ್' ಈಗ ಒಟಿಟಿಗೆ
'ಕಲಂಕಾವಲ್' ಇದು ಒಂದು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಮಹಿಳೆಯರನ್ನು ಗುರಿಯಾಗಿಸಿ ಕೊಲೆ ಮಾಡುವ 'ಸ್ಟಾನ್ಲಿ ದಾಸ್' ಎಂಬ ಕ್ರೂರ ಸರಣಿ ಹಂತಕನ ಸುತ್ತ ಕಥೆ ಸಾಗುತ್ತದೆ.
ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮಮ್ಮುಟ್ಟಿ ನಟನೆಯ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ 'ಕಲಂಕಾವಲ್' ಇದೀಗ ಒಟಿಟಿಗೆ ಬರಲು ಸಿದ್ದವಾಗಿದೆ. ಕಳೆದ ವರ್ಷ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈಗ 40 ದಿನಗಳ ಯಶಸ್ವಿ ಪ್ರದರ್ಶನದ ನಂತರ ಈ ಕ್ರೈಮ್ ಥ್ರಿಲ್ಲರ್ ಒಟಿಟಿ ವೇದಿಕೆಗೆ ಲಗ್ಗೆ ಇಟ್ಟಿದೆ.
ಸೋನಿ ಲೈವ್‌ನಲ್ಲಿ ಬಿಡುಗಡೆ
ಸಿನಿಮಾ ಪ್ರೇಮಿಗಳು ಬಹುಕಾಲದಿಂದ ಕಾಯುತ್ತಿದ್ದ 'ಕಲಂಕಾವಲ್' ಚಿತ್ರದ ಒಟಿಟಿ ಬಿಡುಗಡೆಯನ್ನು ಸೋನಿ ಲೈವ್ ಅಧಿಕೃತವಾಗಿ ಘೋಷಿಸಿದೆ. ಜನವರಿ 16ರ ಮಧ್ಯರಾತ್ರಿಯಿಂದಲೇ ಈ ಸಿನಿಮಾ ಡಿಜಿಟಲ್ ಪ್ರಸಾರ ಆರಂಭಿಸಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಈ ಚಿತ್ರ ಲಭ್ಯವಿದೆ.
ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್
ನಿರ್ದೇಶಕ ಜಿತಿನ್ ಕೆ. ಜೋಸ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಜಾಗತಿಕವಾಗಿ ಸುಮಾರು 82 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಮಮ್ಮುಟ್ಟಿ ಅವರ ವೃತ್ತಿಜೀವನದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಗೆ ಇದು ಸೇರಿದೆ.
ಕಥಾ ಹಂದರ
ಸೈಕೋ ಕಿಲ್ಲರ್ ಮತ್ತು ಪೊಲೀಸ್ ನಡುವಿನ ಸಂಘರ್ಷ 'ಕಲಂಕಾವಲ್' ಒಂದು ಡಾರ್ಕ್ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಸ್ಟಾನ್ಲಿ ದಾಸ್ ಎಂಬ ಸರಣಿ ಹಂತಕನ ಸುತ್ತ ಕಥೆ ಸಾಗುತ್ತದೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುವ ಈ ಕ್ರೂರ ಹಂತಕನನ್ನು ಪತ್ತೆಹಚ್ಚಲು ಪೊಲೀಸ್ ಅಧಿಕಾರಿ ನಡೆಸುವ ಹೋರಾಟವೇ ಸಿನಿಮಾದ ಜೀವಾಳ. ಕರ್ನಾಟಕವನ್ನು ನಡುಗಿಸಿದ್ದ ಕುಖ್ಯಾತ 'ಸೈನೈಡ್ ಮೋಹನ್' ಪ್ರಕರಣದಿಂದ ಪ್ರೇರಿತಗೊಂಡು ಈ ಕಥೆಯನ್ನು ಹೆಣೆಯಲಾಗಿದೆ.
ಈ ಸಿನಿಮಾದ ಪ್ರಮುಖ ಆಕರ್ಷಣೆಯೇ ಮಮ್ಮುಟ್ಟಿ ಮತ್ತು ವಿನಾಯಕನ್ ಅವರ ನಟನೆ. ಸುದೀರ್ಘ ಕಾಲದ ನಂತರ ಮಮ್ಮುಟ್ಟಿ ಅವರು ಪೂರ್ಣ ಪ್ರಮಾಣದ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ತನಿಖಾಧಿಕಾರಿಯಾಗಿ ವಿನಾಯಕನ್ ಅವರು ತಮ್ಮ ವಿಭಿನ್ನ ಶೈಲಿಯ ಅಭಿನಯದ ಮೂಲಕ ಮಮ್ಮುಟ್ಟಿ ಅವರಿಗೆ ತಕ್ಕ ಪೈಪೋಟಿ ನೀಡಿದ್ದಾರೆ.
ಮಮ್ಮುಟ್ಟಿ ಕಂಪನಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ರಾಜಿಶಾ ವಿಜಯನ್, ಶ್ರುತಿ ರಾಮಚಂದ್ರನ್, ಗಾಯತ್ರಿ ಅರುಣ್, ಅಜೀಸ್ ನೆಡುಮಂಗಾಡ್ ಮತ್ತು ಕುಂಚನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಜಿತಿನ್ ಕೆ. ಜೋಸ್ ಮತ್ತು ಜಿಷ್ಣು ಶ್ರೀಕುಮಾರ್ ಅವರ ಚಿತ್ರಕಥೆ ಈ ಸಿನಿಮಾಕ್ಕೆ ಇದೆ.

