
ಖ್ಯಾತ ಗಾಯಕಿ ಆಶಾ ಭೋಂಸ್ಲೆ
Asha Bhonsle | ಭಾರತೀಯ ಸಂಗೀತ ಲೋಕದ ಧ್ರುವತಾರೆ ಅಸ್ತಂಗತ: ಖ್ಯಾತ ಗಾಯಕಿ ಆಶಾ ಭೋಂಸ್ಲೆ ನಿಧನ
ಆಶಾ ಭೋಂಸ್ಲೆ ಅವರು ಕೇವಲ ಹಿಂದಿ ಮಾತ್ರವಲ್ಲದೆ, ಕನ್ನಡ ಸೇರಿದಂತೆ ಭಾರತದ ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
ಭಾರತೀಯ ಚಿತ್ರರಂಗದ ಅದ್ವಿತೀಯ ಗಾಯಕಿ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ 'ದಾದಾಸಾಹೇಬ್ ಫಾಲ್ಕೆ' ಪುರಸ್ಕೃತೆ ಆಶಾ ಭೋಂಸ್ಲೆ (92) ಭಾನುವಾರ ಮುಂಬೈನಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಶನಿವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಐಸಿಯುಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಅವರು ಇಹಲೋಕ ತ್ಯಜಿಸಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಂಗೀತದ ಬಹುಮುಖ ಪ್ರತಿಭೆ
ಆಶಾ ಭೋಂಸ್ಲೆ ಅವರು ಕೇವಲ ಹಿಂದಿ ಮಾತ್ರವಲ್ಲದೆ, ಕನ್ನಡ ಸೇರಿದಂತೆ ಭಾರತದ ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಪಾಪ್, ಗಜಲ್, ಭಜನೆ, ಶಾಸ್ತ್ರೀಯ ಮತ್ತು ಜಾನಪದ ಹೀಗೆ ಪ್ರತಿಯೊಂದು ಪ್ರಕಾರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಅತ್ಯಂತ ಹೆಚ್ಚು ಹಾಡುಗಳನ್ನು ಧ್ವನಿಮುದ್ರಿಸಿದ ಗಾಯಕಿ ಎಂಬ ಹೆಗ್ಗಳಿಕೆಯೊಂದಿಗೆ ಅವರು ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದ್ದರು.
ಕನ್ನಡ ಚಿತ್ರರಂಗದೊಂದಿಗೆ ನಂಟು
ಕನ್ನಡಿಗರಿಗೂ ಆಶಾ ಭೋಂಸ್ಲೆ ಅತ್ಯಂತ ಚಿರಪರಿಚಿತರು. ಅವರು ಕನ್ನಡದ ಸೂಪರ್ ಹಿಟ್ ಚಿತ್ರಗಳನ್ನು ಹಾಡಿದ್ದು, ವರನಟ ಡಾ.ರಾಜ್‌ಕುಮಾರ್ ನಟನೆಯ ʼದೂರದ ಬೆಟ್ಟʼ ಚಿತ್ರದಲ್ಲಿ ಅಣ್ಣಾವ್ರ ಜೊತೆ ಹಾಡಿದ "ಸವಾಲು ಹಾಕಿ ಸೋಲಿಸಿ" ಹಾಡು ಇಂದಿಗೂ ಮನೆಮಾತಾಗಿದೆ. ಇತ್ತೀಚಿನ ವರ್ಷಗಳಲ್ಲಿ 'ಮತ್ತೆ ಮುಂಗಾರು' ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಮರಳಿದ್ದ ಅವರು, ತಮ್ಮ ಗಾಯನದ ಮೂಲಕ ಕನ್ನಡಿಗರನ್ನು ಮತ್ತೆ ಮೋಡಿ ಮಾಡಿದ್ದರು.
ಗೌರವ ಮತ್ತು ಪ್ರಶಸ್ತಿಗಳು
ಸಂಗೀತ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರನ್ನು ಉನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನದ ನಂತರ ಆಶಾ ಭೋಂಸ್ಲೆ ಅವರ ಅಗಲಿಕೆ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಒಂದು ಸುವರ್ಣ ಯುಗದ ಅಂತ್ಯವೆಂದೇ ಪರಿಗಣಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಚಿತ್ರರಂಗದ ದಿಗ್ಗಜರು ಆಶಾ ಭೋಂಸ್ಲೆ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

