
ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಹೃದಯಾಘಾತ ವದಂತಿಗೆ ತೆರೆ ಎಳೆದ ಮೊಮ್ಮಗಳು
ತಮ್ಮ ಎಕ್ಸ್ (X) ಖಾತೆಯಲ್ಲಿ ಅಜ್ಜಿಯ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಝನೈ ಭೋಂಸ್ಲೆ, ಆಶಾ ಭೋಂಸ್ಲೆ ಅವರು ಆಸ್ಪತ್ರೆಗೆ ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕಿ, 96 ವರ್ಷದ ಆಶಾ ಭೋಂಸ್ಲೆ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಪ್ರಿಲ್ 11 ರಂದು ಆಶಾ ಭೋಂಸ್ಲೆ ಅವರಿಗೆ ಹೃದಯಾಘಾತವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳು ವ್ಯಾಪಕವಾಗಿ ಹರಡಿದ್ದವು. ಆದರೆ, ಈ ಕುರಿತು ಅವರ ಮೊಮ್ಮಗಳು ಝನೈ ಭೋಂಸ್ಲೆ ಸ್ಪಷ್ಟನೆ ನೀಡಿದ್ದು, ಹೃದಯಾಘಾತದ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ತಮ್ಮ ಎಕ್ಸ್ (X) ಖಾತೆಯಲ್ಲಿ ಅಜ್ಜಿಯ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಝನೈ ಭೋಂಸ್ಲೆ, ಆಶಾ ಭೋಂಸ್ಲೆ ಅವರು ಆಸ್ಪತ್ರೆಗೆ ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ. 'ತೀವ್ರ ಬಳಲಿಕೆ ಮತ್ತು ಎದೆಯ ಸೋಂಕಿನಿಂದಾಗಿ ನನ್ನ ಅಜ್ಜಿ ಆಶಾ ಭೋಂಸ್ಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಎಲ್ಲವೂ ಸರಿಯಾಗಲಿದೆ ಎಂಬ ಭರವಸೆ ಇದೆ' ಎಂದು ಅವರು ಬರೆದುಕೊಂಡಿದ್ದಾರೆ.
ಖಾಸಗಿತನ ಗೌರವಿಸಲು ಮನವಿ
ಈ ಕಷ್ಟದ ಸಮಯದಲ್ಲಿ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಝನೈ ಭೋಂಸ್ಲೆ ಅಭಿಮಾನಿಗಳು ಹಾಗೂ ಮಾಧ್ಯಮಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಜ್ಜಿಯ ಆರೋಗ್ಯದ ಕುರಿತು ಸಕಾರಾತ್ಮಕ ಅಪ್‌ಡೇಟ್ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಭಾರತದ ಅತ್ಯಂತ ಗೌರವಾನ್ವಿತ ಗಾಯಕಿಯರಲ್ಲಿ ಒಬ್ಬರಾದ ಆಶಾ ಭೋಂಸ್ಲೆ, ದಾದಾಸಾಹೇಬ್ ಫಾಲ್ಕೆ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದಾರೆ.

