ಸೋಷಿಯಲ್ ಮೀಡಿಯಾಗೆ ಕರಣ್ ಜೋಹರ್ ಗುಡ್‌ ಬೈ!
x

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಒಂದು ವಾರಗಳ ಕಾಲ ಇನ್‌ಸ್ಟಾಗ್ರಾಮ್‌ನಿಂದ ದೂರವಿರಲು ನಿರ್ಧರಿಸಿದ್ದಾರೆ.

ಸೋಷಿಯಲ್ ಮೀಡಿಯಾಗೆ ಕರಣ್ ಜೋಹರ್ ಗುಡ್‌ ಬೈ!

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಒಂದು ವಾರ ಇನ್‌ಸ್ಟಾಗ್ರಾಮ್‌ನಿಂದ ದೂರವಿರಲು ನಿರ್ಧರಿಸಿದ್ದಾರೆ. ಟ್ರೋಲ್‌ಗಳ ಹಾವಳಿ ಮತ್ತು ವರುಣ್ ಧವನ್ ಬೆಂಬಲಕ್ಕೆ ನಿಂತ ಬೆನ್ನಲ್ಲೇ ಈ ಡಿಜಿಟಲ್ ಡಿಟಾಕ್ಸ್ ಘೋಷಣೆ ಹೊರಬಿದ್ದಿದೆ.


Click the Play button to hear this message in audio format

ಬಾಲಿವುಡ್ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರು ಸೋಷಿಯಲ್ ಮೀಡಿಯಾದಿಂದ ತಾತ್ಕಾಲಿಕ ವಿರಾಮ ಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಸುಮಾರು ಒಂದು ವಾರದವರೆಗೆ ಡಿಜಿಟಲ್ ಲೋಕದಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

"ಒಂದು ವಾರದವರೆಗೆ ಡಿಜಿಟಲ್ ಡಿಟಾಕ್ಸ್!, ಯಾವುದೇ ಡೂಮ್ ಸ್ಕ್ರೋಲಿಂಗ್ ಇಲ್ಲ, ಡಿಎಂ ಇಲ್ಲ, ಯಾವುದೇ ಪೋಸ್ಟ್‌ಗಳೂ ಇರುವುದಿಲ್ಲ. ಇದರಿಂದ ದೂರವಿರಲು ಬ್ರಹ್ಮಾಂಡವು ನನಗೆ ಶಕ್ತಿ ನೀಡಲಿ" ಎಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ದಿಕ್ಕಿನ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳು ಮತ್ತು ಆನ್‌ಲೈನ್ ಟೀಕೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.

ನಟ ವರುಣ್ ಧವನ್ ಪರ ಬ್ಯಾಟಿಂಗ್

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ "ಅರ್ಥಹೀನ ಸದ್ದುಗಳ ಬಗ್ಗೆ ಕರಣ್ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಶೇಷವಾಗಿ 'ಬಾರ್ಡರ್ 2' ಚಿತ್ರದ ಪ್ರಚಾರದ ವೇಳೆ ನಟ ವರುಣ್ ಧವನ್ ಅವರ ನಗುವಿನ ಬಗ್ಗೆ ವ್ಯಕ್ತವಾದ ಟ್ರೋಲ್‌ಗಳ ವಿರುದ್ಧ ಅವರು ಕಿಡಿಕಾರಿದ್ದರು. ವರ್ಚುವಲ್ ಜಗತ್ತಿನಲ್ಲಿ ಸದ್ದು ಮಾಡುವವರು ಏನೇ ಮಾಡಿದರೂ ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ. ಕಲಾವಿದನ ನಗುವನ್ನು ನೋಡಿ ಟ್ರೋಲ್ ಮಾಡುವವರು, ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಪ್ರೀತಿ ಸಿಕ್ಕಾಗ ಅದೇ ಕಲಾವಿದ ನಗುವುದನ್ನು ನೋಡಬೇಕಾಗುತ್ತದೆ" ಎಂದು ವರುಣ್ ಬೆಂಬಲಕ್ಕೆ ನಿಂತಿದ್ದರು.

ಬಾಲಿವುಡ್ ಯಶಸ್ಸಿನ ಸಂಭ್ರಮ ಒಂದೆಡೆ ಟ್ರೋಲ್‌ಗಳ ವಿರುದ್ಧ ವಾಗ್ದಾಳಿ ನಡೆಸುತ್ತಲೇ, ಮತ್ತೊಂದೆಡೆ ಬಾಲಿವುಡ್‌ನ ಇತ್ತೀಚಿನ ಚಿತ್ರಗಳಾದ 'ಧುರಂಧರ್' ಮತ್ತು 'ಬಾರ್ಡರ್ 2' ಚಿತ್ರಗಳ ಭರ್ಜರಿ ಯಶಸ್ಸನ್ನು ಕರಣ್ ಕೊಂಡಾಡಿದ್ದಾರೆ. ಹಿಂದಿ ಚಿತ್ರರಂಗದ ಇತ್ತೀಚಿನ ಹಿಟ್‌ಗಳು ಬಾಲಿವುಡ್ ಈಸ್ ಬ್ಯಾಕ್ ಎಂಬುದನ್ನು ಸಾಬೀತುಪಡಿಸಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊರನಡೆದಿದ್ದು, ತಮ್ಮ ಜವಾಬ್ದಾರಿಗಳು, ಸಂಬಂಧಗಳು ಮತ್ತು ಕೆಲಸದಿಂದ ವಿರಾಮ ಪಡೆಯುತ್ತಿರುವುದಾಗಿ ತಿಳಿಸಿರುವ ಅವರು, "ಮರಳಿ ಬರುತ್ತೇನೋ ಇಲ್ಲವೋ ತಿಳಿಯದು" ಎಂದು ಬರೆದುಕೊಂಡಿದ್ದರು. ಅವರ ಇತ್ತೀಚಿನ 'ಕ್ಯಾಂಡಿ ಶಾಪ್' ಹಾಡಿನ ಬಗ್ಗೆ ಕೇಳಿಬಂದ ಟೀಕೆಗಳ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದ್ದು, ತಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ಅವರು ವಿನಂತಿಸಿದ್ದರು.

ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ಜಾಕಿರ್ ಖಾನ್ ಅವರು ತಮ್ಮ ವೃತ್ತಿಜೀವನದಲ್ಲಿ ಸುದೀರ್ಘ ವಿರಾಮ ತೆಗೆದುಕೊಳ್ಳುವ ಸೂಚನೆ ನೀಡಿದ್ದರು. ಸತತ ಪ್ರದರ್ಶನಗಳು ಮತ್ತು ಬಿಡುವಿಲ್ಲದ ಕೆಲಸದ ನಡುವೆ ಆರೋಗ್ಯದ ಕಡೆಗೆ ಗಮನಹರಿಸಲು ನಿರ್ಧರಿಸಿ, ಸುಮಾರು 3 ರಿಂದ 5 ವರ್ಷಗಳ ಕಾಲ ವೇದಿಕೆಯಿಂದ ದೂರವಿರಲು ಯೋಜಿಸಿದ್ದಾರೆ. ಇದೇ ಹಾದಿಯಲ್ಲಿ ಕಾಮಿಡಿ ಕಲಾವಿದೆ ಜೇಮಿ ಲಿವರ್ ಸಹ Bigg Boss 19ರ ಸ್ಪರ್ಧಿ ತನ್ಯಾ ಮಿತ್ತಲ್ ಅವರ ಮಿಮಿಕ್ರಿ ವಿಡಿಯೋಗೆ ವ್ಯಕ್ತವಾದ ಟೀಕೆಗಳಿಂದ ಬೇಸತ್ತು, "ನನ್ನಲ್ಲಿನ ಒಂದು ಸಣ್ಣ ಭಾಗವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ" ಎಂದು ಅವರು ಸೊಶಿಯಲ್‌ ಮಿಡಿಯಾದಲ್ಲಿ ಹೊರಗುಳಿಯುವ ನಿರ್ಧಾರದ ಬಗ್ಗೆ ತಿಳಿಸಿದ್ದರು.

ಹಿರಿಯ ನಟ ರೋನಿತ್ ರಾಯ್ ಕೂಡ ನವೆಂಬರ್ 2025ರಲ್ಲಿಯೇ ಸಾಮಾಜಿಕ ಜಾಲತಾಣದಿಂದ ದೂರ ಸರಿಯುವುದಾಗಿ ಘೋಷಿಸಿದ್ದರು. ವೈಯಕ್ತಿಕ ಬೆಳವಣಿಗೆ, ಮಾನಸಿಕ ನೆಮ್ಮದಿ ಮತ್ತು ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಈ 'ಡಿಜಿಟಲ್ ಡಿಟಾಕ್ಸ್' ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದರು. ಸತತವಾಗಿ ಆನ್‌ಲೈನ್‌ನಲ್ಲಿ ಸಕ್ರಿಯವಾಗಿರಬೇಕಾದ ಒತ್ತಡ ಮತ್ತು ಕೆಲಸದ ನಡುವಿನ ಸಮತೋಲನ ತಪ್ಪುತ್ತಿರುವುದು ಈ ಎಲ್ಲಾ ಕಲಾವಿದರ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ. ಸಾರ್ವಜನಿಕ ಜೀವನದ ಸತತ ಕಣ್ಗಾವಲು ಮತ್ತು ಟ್ರೋಲಿಂಗ್‌ ಸಂಸ್ಕೃತಿಯಿಂದಾಗಿ ತಾರೆಯರು ತಮ್ಮ ಮಾನಸಿಕ ಆರೋಗ್ಯಕ್ಕಾಗಿ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

Read More
Next Story