
'ದೃಶ್ಯಂ' ಸರಣಿಯ ಮೂರನೇ ಭಾಗ 'ದೃಶ್ಯಂ-3' ಬಿಡುಗಡೆಗೆ ಸಜ್ಜಾಗಿದೆ.
Drishyam 3| ಮೇ 21ಕ್ಕೆ ದೃಶ್ಯಂ-3 ರಿಲೀಸ್; ರಿವೀಲ್ ಆಗುತ್ತಾ, ಜಾರ್ಜ್‌ಕುಟ್ಟಿ ಫ್ಯಾಮಿಲಿ ಸೀಕ್ರೆಟ್?
'ದೃಶ್ಯಂ' ಸರಣಿಯ ಮೂರನೇ ಭಾಗ 'ದೃಶ್ಯಂ-3' ಬಿಡುಗಡೆಗೆ ಸಜ್ಜಾಗಿದೆ. ಮೊದಲು ಏಪ್ರಿಲ್ 2ರಂದು ತೆರೆಗೆ ಬರಬೇಕಿದ್ದ ಈ ಚಿತ್ರವು, ಇದೀಗ ಮೇ 21ಕ್ಕೆ ಬಿಡುಗಡೆಗೆ ಸಿದ್ದವಾಗಿದೆ.
ಮಲಯಾಳಂ ಚಿತ್ರರಂಗದ ಮೋಸ್ಟ್ ವೇಟೆಡ್ ಕ್ರೈಮ್ ಥ್ರಿಲ್ಲರ್ 'ದೃಶ್ಯಂ-3' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಈ ಬಹುನಿರೀಕ್ಷಿತ ಚಿತ್ರವು ಈ ಹಿಂದೆ ಏಪ್ರಿಲ್ 2ರಂದು ತೆರೆಗೆ ಬರಬೇಕಿತ್ತು. ಆದರೆ ಈಗ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಲಾಗಿದೆ.
ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಹುಟ್ಟುಹಬ್ಬ ಮೇ 21ರಂದು 'ದೃಶ್ಯಂ-3' ವಿಶ್ವದಾದ್ಯಂತ ತೆರೆಕಾಣಲಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮೋಹನ್ ಲಾಲ್, "ಹಳೆಯ ನೆನಪುಗಳು ಎಂದಿಗೂ ಮೌನವಾಗಿರುವುದಿಲ್ಲ... ಅವು ಕಾಯುತ್ತಿರುತ್ತವೆ. ಮೇ 21ಕ್ಕೆ ಜಾರ್ಜ್‌ಕುಟ್ಟಿ ಬರುತ್ತಿದ್ದಾನೆ" ಎಂದು ಬರೆದುಕೊಂಡಿದ್ದಾರೆ.
ಬಿಡುಗಡೆ ಮುಂದೂಡಿಕೆಗೆ ಕಾರಣವೇನು?
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದಂತಹ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ನಟ ಯಶ್ ಅವರ 'ಟಾಕ್ಸಿಕ್' ಚಿತ್ರದ ಬಿಡುಗಡೆಯೂ ಸಹ ವಿಳಂಬವಾಗಿತ್ತು. ಮಲಯಾಳಂ ಸಿನಿಮಾಗಳಿಗೆ ವಿದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ದೊಡ್ಡ ಮಾರುಕಟ್ಟೆ ಇರುವುದರಿಂದ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ.
ಆಂಟೋನಿ ಪೆರುಂಬವೂರ್ ನಿರ್ಮಾಣದ ಈ ಚಿತ್ರವನ್ನು ಜೀತು ಜೋಸೆಫ್ ಅವರೇ ನಿರ್ದೇಶಿಸುತ್ತಿದ್ದಾರೆ. ಇದು ದೃಶ್ಯಂ ಸರಣಿಯ ಕೊನೆಯ ಭಾಗವಾಗಲಿದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಮೋಹನ್ ಲಾಲ್ ಅವರೊಂದಿಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಿಂದಿ 'ದೃಶ್ಯಂ-3' ಅಕ್ಟೋಬರ್‌ನಲ್ಲಿ ಬಿಡುಗಡೆ
ಇನ್ನೊಂದೆಡೆ ಅಜಯ್ ದೇವಗನ್ ನಟನೆಯ ಹಿಂದಿ ಆವೃತ್ತಿಯ 'ದೃಶ್ಯಂ-3' ಇದೇ ವರ್ಷ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರ ಜಾಗಕ್ಕೆ ಖ್ಯಾತ ನಟ ಜೈದೀಪ್ ಅಹ್ಲಾವತ್ ಸೇರ್ಪಡೆಯಾಗುತ್ತಿರುವುದು ವಿಶೇಷ. ಒಟ್ಟಿನಲ್ಲಿ ದಕ್ಷಿಣ ಭಾರತದ ಸೂಪರ್ ಹಿಟ್ ಸರಣಿಯ ಕ್ಲೈಮ್ಯಾಕ್ಸ್ ನೋಡಲು ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

