
ದೃಶ್ಯಂ ಸರಣಿಯ ಕೊನೆಯ ಭಾಗದ ಕಥೆ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.
Drishyam 3 | ದೃಶ್ಯಂ ಸರಣಿಯ ಕೊನೆಯ ಭಾಗದ ಕಥೆ ಆನ್‌ಲೈನ್‌ನಲ್ಲಿ ವೈರಲ್?
ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್ ಮತ್ತು ಮುರಳಿ ಗೋಪಿ ಸೇರಿದಂತೆ ಹಳೆಯ ತಾರಾಬಳಗವೇ ಮೂರನೇ ಭಾಗದಲ್ಲಿಯೂ ಮುಂದುವರಿಯಲಿದ್ದು, ಕಥೆಗೆ ಹೆಚ್ಚಿನ ತೀವ್ರತೆ ಮತ್ತು ಭಾವನಾತ್ಮಕ ಗಾಢತೆ ನೀಡಲಿದೆ.
ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮೋಹನ್ ಲಾಲ್ ನಟನೆಯ ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರವು 'ದೃಶ್ಯಂ 3' ಸರಣಿಯ ಅಂತಿಮ ಭಾಗವಾಗಿದ್ದು, ಇದೀಗ ಚಿತ್ರದ ಕಥೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂಬ ವದಂತಿಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.
ವರದಿಗಳ ಪ್ರಕಾರ, 'ದೃಶ್ಯಂ 3' ಚಿತ್ರದ ಕಥೆಯು ಕೇವಲ ಜಾರ್ಜ್ಕುಟ್ಟಿ ತನ್ನ ಕುಟುಂಬವನ್ನು ಹೊರಜಗತ್ತಿನಿಂದ ರಕ್ಷಿಸುವುದರ ಬಗ್ಗೆ ಮಾತ್ರವಲ್ಲ, ಬದಲಾಗಿ ಆ ಕುಟುಂಬವನ್ನು ಒಂದಾಗಿ ಹಿಡಿದಿಟ್ಟಿರುವ ಕರಾಳ ಸತ್ಯ ಮತ್ತು ಆ ಸತ್ಯದ ಹೊರೆಯಿಂದ ತನ್ನವರನ್ನು ಹೇಗೆ ರಕ್ಷಿಸುತ್ತಾನೆ ಎಂಬುದರ ಮೇಲೆ ಕೇಂದ್ರೀಕರಿಸಲಿದೆ. ಈ ಬಾರಿ ಜಾರ್ಜ್ಕುಟ್ಟಿಯ ಎದುರಾಳಿಗಳು ಹಿಂದೆಂದಿಗಿಂತಲೂ ಹೆಚ್ಚು ಸಂಘಟಿತರಾಗಿದ್ದು, ಶಕ್ತಿಯುತವಾಗಿದ್ದಾರೆ. ಜಾರ್ಜ್ಕುಟ್ಟಿ ಎಚ್ಚರಿಕೆಯಿಂದ ರೂಪಿಸಿದ ಯೋಜನೆಗಳಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಳ್ಳಲಿದ್ದು, ತನ್ನ ಅಸ್ತಿತ್ವ ಮತ್ತು ನೆಮ್ಮದಿಯನ್ನು ಉಳಿಸಿಕೊಳ್ಳಲು ಆತ ಈ ಬಾರಿ ಯಾವ ಮಟ್ಟದ ತ್ಯಾಗಕ್ಕೆ ಸಿದ್ಧನಾಗುತ್ತಾನೆ ಎಂಬುದು ಚಿತ್ರದ ಹೂರಣ ಎನ್ನಲಾಗುತ್ತಿದೆ. ಆದರೆ, ಈ ಕಥೆಯ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ.
ಹಳೆಯವರೇ ಮುಂದುವರಿಕೆ
ದೃಶ್ಯಂ ಸರಣಿಯ ಮೊದಲ ಎರಡು ಭಾಗಗಳ ಯಶಸ್ಸಿನ ನಂತರ, ಮೂರನೇ ಭಾಗದಲ್ಲಿಯೂ ಹಳೆಯ ಪಾತ್ರಗಳೇ ಮುಂದುವರಿಯಲಿವೆ. ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್ ಮತ್ತು ಮುರಳಿ ಗೋಪಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾರ್ಜಕುಟ್ಟಿ ಮತ್ತು ಕುಟುಂಬದ ಸಾಗಾ ಈ ಚಿತ್ರದೊಂದಿಗೆ ಅಂತ್ಯಗೊಳ್ಳಲಿದೆ ಎಂದು ನಿರ್ದೇಶಕ ಜೀತು ಜೋಸೆಫ್ ಈಗಾಗಲೇ ಸುಳಿವು ನೀಡಿದ್ದಾರೆ.
ಚಿತ್ರವು ಏಪ್ರಿಲ್ 2ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ, ಅಜಯ್ ದೇವಗನ್ ನಟನೆಯ ಹಿಂದಿ ರಿಮೇಕ್ ಆವೃತ್ತಿಯು ಇದೇ ವರ್ಷದ ಅಕ್ಟೋಬರ್ 2ರಂದು ತೆರೆಗೆ ಬರಲು ಸಿದ್ಧವಾಗಿದೆ.

