
ದೃಶ್ಯಂ 3 ಬಿಡುಗಡೆಗೆ ಮುಹೂರ್ತ ಫಿಕ್ಸ್
Drishyam 3| ದೃಶ್ಯಂ 3 ಬಿಡುಗಡೆಗೆ ಮುಹೂರ್ತ ಫಿಕ್ಸ್; ಯಾವಾಗ ರಿಲೀಸ್?
ಜಾರ್ಜ್‌ಕುಟ್ಟಿ ಪಾತ್ರಕ್ಕೆ ಮರಳುವ ಬಗ್ಗೆ ನಟ ಮೋಹನ್‌ಲಾಲ್ ಸಂತಸ ವ್ಯಕ್ತಪಡಿಸಿದ್ದು, ಈ ಬಾರಿಯ ಜಾರ್ಜ್‌ಕುಟ್ಟಿಯ ರಹಸ್ಯಗಳನ್ನು ನೋಡಲು ತಾವು ಕಾತರರಾಗಿರುವುದಾಗಿ ಹೇಳಿದ್ದಾರೆ.
ಖ್ಯಾತ ನಿರ್ದೇಶಕ ಜೀತು ಜೋಸೆಫ್ ಅವರ ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಈ ಬಹುನಿರೀಕ್ಷಿತ ಚಿತ್ರವು ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಸ್ವತಃ ನಿರ್ದೇಶಕರೇ ಘೋಷಿಸಿದ್ದಾರೆ.
ರಾಜಗಿರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ 'ಸೆಂಟರ್ ಫಾರ್ ಅಡ್ವಾನ್ಸ್ಡ್ ಯುರೋ-ಆಂಕೊಲಾಜಿ' ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜೀತು ಜೋಸೆಫ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಸಿನಿಮಾ ಮತ್ತು ಜೀವನದ ಬಗ್ಗೆ ಮಾತನಾಡಿದ ಅವರು, ಸಿನಿಮಾದಲ್ಲಿ ಬರುವ ಅನಿರೀಕ್ಷಿತ ತಿರುವುಗಳಂತೆ ಜೀವನದಲ್ಲೂ ರೋಗಗಳು ಎದುರಾಗುತ್ತವೆ, ಇಂತಹ ಸಂದರ್ಭಗಳನ್ನು ಆತ್ಮವಿಶ್ವಾಸದಿಂದ ಎದುರಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸ್ವಾಗತ ಭಾಷಣದಲ್ಲಿ ಡಾ. ಬಾಲಗೋಪಾಲ್ ನಾಯರ್ ಅವರು 'ದೃಶ್ಯಂ 3' ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಜೀತು ಜೋಸೆಫ್, "ದೃಶ್ಯಂ ಸಿನಿಮಾ ಅನೇಕರ ಮೇಲೆ ಪ್ರಭಾವ ಬೀರಿದೆ. ಅದು ತನ್ನದೇ ಆದ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಆದ್ದರಿಂದ ಪ್ರೇಕ್ಷಕರು ಯಾವುದೇ ಅತಿಯಾದ ನಿರೀಕ್ಷೆಗಳಿಲ್ಲದೆ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬಹುದು. ಅಧಿಕೃತ ಬಿಡುಗಡೆಯ ದಿನಾಂಕ ಶೀಘ್ರದಲ್ಲೇ ಪ್ರಕಟವಾಗಲಿದೆ" ಎಂದು ಹೇಳಿದರು.
ಮೋಹನ್‌ಲಾಲ್
'ದೃಶ್ಯಂ 3' ಗೂ ಮೊದಲು ಜೀತು ಜೋಸೆಫ್ ನಿರ್ದೇಶನದ ಮತ್ತೊಂದು ಸಿನಿಮಾ 'ವಲತುವಶತ್ತೆ ಕಳ್ಳನ್' ಬಿಡುಗಡೆಗೆ ಸಜ್ಜಾಗಿದೆ. ಜನವರಿ 30ರಂದು ಈ ಚಿತ್ರ ತೆರೆಗೆ ಬರಲಿದ್ದು, ಬಿಜು ಮೆನನ್ ಮತ್ತು ಜೋಜು ಜಾರ್ಜ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಕುತೂಹಲ ಮೂಡಿಸಿದ್ದು, ಇದು ಜೀತು ಶೈಲಿಯ ಮಿಸ್ಟರಿ ಥ್ರಿಲ್ಲರ್ ಆಗಿರಲಿದೆ ಎಂಬ ಭರವಸೆ ನೀಡಿದೆ. ಈ ಚಿತ್ರದ ಬಗ್ಗೆ ತಮಗೆ ಅಪಾರ ನಂಬಿಕೆಯಿದೆ ಎಂದು ಜೀತು ತಿಳಿಸಿದ್ದಾರೆ.
ಮತ್ತೆ ಜಾರ್ಜ್‌ಕುಟ್ಟಿಯಾಗಿ ಮೋಹನ್‌ಲಾಲ್
ಜಾರ್ಜ್‌ಕುಟ್ಟಿ ಪಾತ್ರಕ್ಕೆ ಮರಳುತ್ತಿರುವ ಬಗ್ಗೆ ನಟ ಮೋಹನ್‌ಲಾಲ್ ಈ ಹಿಂದೆ ಮಾತನಾಡುತ್ತಾ, "ಜಾರ್ಜ್‌ಕುಟ್ಟಿ ಪ್ರೇಕ್ಷಕರ ಭಾವನೆಗಳೊಂದಿಗೆ ಬೆರೆತುಹೋಗಿರುವ ಪಾತ್ರ. ಆ ಪಾತ್ರಕ್ಕೆ ಮರಳುವುದು ಹಳೆಯ ಗೆಳೆಯನನ್ನು ಹೊಸ ರಹಸ್ಯಗಳೊಂದಿಗೆ ಭೇಟಿಯಾದಂತೆ ಅನಿಸುತ್ತದೆ. ಈ ಬಾರಿ ಜಾರ್ಜ್‌ಕುಟ್ಟಿಯ ಪಯಣ ಎಲ್ಲಿಗೆ ತಲುಪಲಿದೆ ಎಂಬುದನ್ನು ನೋಡಲು ನಾನು ಕೂಡ ಕಾತರನಾಗಿದ್ದೇನೆ" ಎಂದು ಹೇಳಿದ್ದರು.
ಈಗಾಗಲೇ ಎರಡು ಭಾಗಗಳ ಮೂಲಕ ದಾಖಲೆ ಬರೆದಿರುವ 'ದೃಶ್ಯಂ' ಸರಣಿಯ ಮೂರನೇ ಭಾಗದ ಮೇಲೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮನೆಮಾಡಿದೆ.
ಬಾಲಿವುಡ್‌ನಲ್ಲೂ ದೃಶ್ಯಂ 3 ಹವಾ
ಇತ್ತ ಬಾಲಿವುಡ್‌ನಲ್ಲೂ 'ದೃಶ್ಯಂ 3' ಹವಾ ಜೋರಾಗಿದ್ದು, ಅಜಯ್ ದೇವಗನ್ ನಟನೆಯ ಹಿಂದಿ ಆವೃತ್ತಿಯು ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ. ಅಭಿಷೇಕ್ ಪಾಠಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ತಬೂ ಹಾಗೂ ಶ್ರಿಯಾ ಶರಣ್ ಪ್ರಮುಖ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಆದರೆ, ಈ ಚಿತ್ರದ ಕುರಿತು ಸದ್ಯ ಒಂದು ವಿವಾದಾತ್ಮಕ ಸುದ್ದಿ ಹರಿದಾಡುತ್ತಿದೆ. ದೃಶ್ಯಂ 2ರಲ್ಲಿ ಅದ್ಭುತವಾಗಿ ನಟಿಸಿದ್ದ ಅಕ್ಷಯ್ ಖನ್ನಾ ಈ ಬಾರಿ ಚಿತ್ರದಿಂದ ಹೊರನಡೆದಿದ್ದಾರೆ.
ಅಕ್ಷಯ್ ಖನ್ನಾ ಅವರ ಸಂಭಾವನೆಯನ್ನು ಮೂರು ಬಾರಿ ಮರುಸಂಧಾನ ಮಾಡಲಾಗಿತ್ತು. ಆದರೂ ಕೊನೆ ಕ್ಷಣದಲ್ಲಿ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ. ಕೇವಲ ಹಣವಷ್ಟೇ ಅಲ್ಲದೆ, ತಮ್ಮ ಪಾತ್ರದ ಹೇರ್-ಸ್ಟೈಲ್ ವಿಚಾರದಲ್ಲೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಒಪ್ಪಂದ ಮಾಡಿಕೊಂಡೂ ಚಿತ್ರೀಕರಣಕ್ಕೆ ಬರದ ಕಾರಣ ನಿರ್ಮಾಣ ಸಂಸ್ಥೆಯು ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ನಡುವೆ, ಅಕ್ಷಯ್ ಖನ್ನಾ ಬದಲಿಗೆ ಪ್ರತಿಭಾವಂತ ನಟ ಜೈದೀಪ್ ಅಹ್ಲಾವತ್ ಅವರನ್ನು ಚಿತ್ರಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ವರದಿಗಳಿವೆ.

