ಧುರಂಧರ್ 2 ಟ್ರೈಲರ್ ರಿಲೀಸ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು
x

ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಧುರಂಧರ್ 2 ಟ್ರೈಲರ್ ರಿಲೀಸ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು

'ಧುರಂಧರ್' ಚಿತ್ರದ ಮೊದಲ ಭಾಗವು 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ 1300 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿತ್ತು.


Click the Play button to hear this message in audio format

ಆದಿತ್ಯ ಧರ್ ನಿರ್ದೇಶನದ, 2025ರ ಬ್ಲಾಕ್‌ಬಸ್ಟರ್ ಚಿತ್ರ 'ಧುರಂಧರ್' ಸಿನಿಮಾದ ಮುಂದುವರಿದ ಭಾಗ 'ಧುರಂಧರ್: ದಿ ರಿವೆಂಜ್' ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಶನಿವಾರ ಬಿಡುಗಡೆಯಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಮೊದಲ ಭಾಗವು ಜಾಗತಿಕ ಮಟ್ಟದಲ್ಲಿ 1300 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿತ್ತು. ಈಗ ಅದರ ಸೀಕ್ವೆಲ್ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

'ಧುರಂಧರ್' 2 ನ ಟ್ರೇಲರ್‌ ಇಲ್ಲಿದೆ..

ಈ ಎರಡನೇ ಭಾಗದ ಟ್ರೈಲರ್‌ನಲ್ಲಿ ರಣವೀರ್ ಸಿಂಗ್ ಮತ್ತೆ ಜಸ್ಕಿರತ್ ಸಿಂಗ್ ರಂಗಿ ಪಾತ್ರದಲ್ಲಿ ಮಿಂಚಿದ್ದಾರೆ. ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ಅಭಿನಯದ ರೆಹಮಾನ್ ಡಕಾಯಿತನ ಗ್ಯಾಂಗ್‌ಗೆ ಭಾರತೀಯ ಗೂಢಚಾರನಾಗಿ ನುಗ್ಗಿದ್ದ ಜಸ್ಕಿರತ್, ಈಗ ಅದೇ ಗ್ಯಾಂಗ್‌ನಲ್ಲಿ 'ಲ್ಯಾರಿಯ ಬಾದ್‌ಶಾ' ಆಗಿ ಬೆಳೆಯುವ ಹಂತವನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಬಾಂಬೆ ರಾಕರ್ಸ್‌ನ ಖ್ಯಾತ 'ಅರಿ ಅರಿ' ಹಾಡಿನ ರಿಮಿಕ್ಸ್ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಟ್ರೈಲರ್‌ನಲ್ಲಿ, ಪಾಕಿಸ್ತಾನದ ಭವಿಷ್ಯವನ್ನು ಇನ್ಮುಂದೆ ಭಾರತವೇ ನಿರ್ಧರಿಸಲಿದೆ ಎಂಬ ರಣವೀರ್ ಸಿಂಗ್ ಅವರ ಖಡಕ್ ಸಂಭಾಷಣೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ವಿಶೇಷವೆಂದರೆ, ಈ ಹಿಂದೆ ಮಾರ್ಚ್ 19ರಂದೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಮಧ್ಯಪ್ರಾಚ್ಯದ ಪ್ರಸ್ತುತ ಯುದ್ಧದ ಸನ್ನಿವೇಶದಿಂದಾಗಿ 'ಟಾಕ್ಸಿಕ್' ಚಿತ್ರತಂಡವು ತನ್ನ ಬಿಡುಗಡೆಯನ್ನು ಜೂನ್ ತಿಂಗಳಿಗೆ ಮುಂದೂಡಿದೆ. ಇದರಿಂದಾಗಿ 'ಧುರಂಧರ್ 2' ಚಿತ್ರಕ್ಕೆ ದೊಡ್ಡ ಮಟ್ಟದ ಸೋಲೋ ಎಂಟ್ರಿ ಸಿಕ್ಕಂತಾಗಿದೆ. ಈ ಬಾರಿ ಚಿತ್ರವು ಕೇವಲ ಹಿಂದಿಯಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ.

ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್ ಅವರಂತಹ ಬಲಿಷ್ಠ ತಾರಾಗಣ ಹೊಂದಿರುವ ಈ ಚಿತ್ರಕ್ಕೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಹೊರತುಪಡಿಸಿ ಬೇರೆ ಯಾವುದೇ ಪ್ರಬಲ ಸ್ಪರ್ಧೆಯಿಲ್ಲ. ರಾಮ್ ಚರಣ್ ಅವರ 'ಪೆದ್ದಿ' ಮತ್ತು ನಾನಿ ಅವರ 'ದಿ ಪ್ಯಾರಡೈಸ್' ಸಿನಿಮಾಗಳು ಕೂಡ ಮಾರ್ಚ್ ಬಿಡುಗಡೆಯಿಂದ ಹಿಂದೆ ಸರಿದಿರುವುದು ಚಿತ್ರಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಿದೆ.

ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿರುವ ಸಂಚಲನಕ್ಕೆ ಹಾಲಿವುಡ್ ಕೂಡ ಬೆಚ್ಚಿಬಿದ್ದಿದೆ. ಹಾಲಿವುಡ್ ಸ್ಟಾರ್ ನಟ ರಯಾನ್ ಗೊಸ್ಲಿಂಗ್ ಅಭಿನಯದ ಬಾಹ್ಯಾಕಾಶ ಸಾಹಸ ಚಿತ್ರ ‘ಪ್ರಾಜೆಕ್ಟ್ ಹೇಲ್ ಮೇರಿ’ ಚಿತ್ರದ ಬಿಡುಗಡೆ ದಿನಾಂಕವು ‘ಧುರಂಧರ್ 2’ ಭೀತಿಯಿಂದಾಗಿ ಮುಂದೂಡಲ್ಪಟ್ಟಿದೆ. ‘ಪ್ರಾಜೆಕ್ಟ್ ಹೇಲ್ ಮೇರಿ’ ಚಿತ್ರವು ಮಾರ್ಚ್ 20 ರಂದು ‘ಧುರಂಧರ್ 2’ ಚಿತ್ರದ ವಾರಾಂತ್ಯದಲ್ಲೇ ಜಾಗತಿಕವಾಗಿ ಬಿಡುಗಡೆಯಾಗಬೇಕಿತ್ತು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ‘ಧುರಂಧರ್ 2’ ಚಿತ್ರಕ್ಕೆ ಇರುವ ಭಾರಿ ಕ್ರೇಜ್ ಮತ್ತು ಕಲೆಕ್ಷನ್ ಮೇಲೆ ಉಂಟಾಗಬಹುದಾದ ಹೊಡೆತವನ್ನು ಗಮನಿಸಿದ ಚಿತ್ರದ ತಯಾರಕರು, ಭಾರತದಲ್ಲಿ ಚಿತ್ರವನ್ನು ಒಂದು ವಾರ ತಡವಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಸೋನಿ ಪಿಕ್ಚರ್ಸ್ ಮತ್ತು ಐಮ್ಯಾಕ್ಸ್ ಇಂಡಿಯಾ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮಾರ್ಚ್ 26 ರಂದು ಸಿನಿಮಾ ತೆರೆಕಾಣಲಿದೆ ಎಂದು ಪೋಸ್ಟರ್ ಹಂಚಿಕೊಂಡಿವೆ.

ಈ ಸಿನಿಮಾ ಆಕಸ್ಮಿಕವಾಗಿ ಅಪರಿಚಿತ ಬಾಹ್ಯಾಕಾಶ ನೌಕೆಯೊಂದರಲ್ಲಿ ಕಣ್ಣು ಬಿಡುವ ಗಗನಯಾತ್ರಿಯ ಸುತ್ತ ಸಾಗುತ್ತದೆ. ತಾನು ಯಾರು ಅಥವಾ ತನ್ನ ಮುಂದಿರುವ ಮಿಷನ್ ಏನು ಎಂಬ ಅರಿವಿಲ್ಲದ ನಾಯಕನ ಹೋರಾಟದ ಕಥೆ ಇದಾಗಿದ್ದು, ಭಾರತದಲ್ಲಿ ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಈ ಚಿತ್ರ ಪ್ರದರ್ಶನಗೊಳ್ಳಲಿದೆ.

Read More
Next Story