ಧುರಂಧರ್ 2 | ಮಾರ್ಚ್ 3ಕ್ಕೆ ಬರಲಿದೆ ಬಹುನಿರೀಕ್ಷಿತ ಟ್ರೈಲರ್ ರಿಲೀಸ್‌
x

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರದ ಟ್ರೈಲರ್ ಮಾರ್ಚ್ 3 ರಂದು ಬಿಡುಗಡೆಯಾಗಲಿದೆ.

ಧುರಂಧರ್ 2 | ಮಾರ್ಚ್ 3ಕ್ಕೆ ಬರಲಿದೆ ಬಹುನಿರೀಕ್ಷಿತ ಟ್ರೈಲರ್ ರಿಲೀಸ್‌

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರದ ಟ್ರೈಲರ್ ಮಾರ್ಚ್ 3 ರಂದು ಬಿಡುಗಡೆಯಾಗಲಿದೆ. ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಮಾರ್ಚ್ 19 ರಂದು ತೆರೆಕಾಣಲಿದೆ.


Click the Play button to hear this message in audio format

ಬಿಗ್ ಬಜೆಟ್ ಚಿತ್ರಗಳಾದ 'ಬಾಹುಬಲಿ 2' ಮತ್ತು 'ಪುಷ್ಪ 2' ನಂತರ ಭಾರತೀಯ ಚಿತ್ರರಂಗದಲ್ಲಿ ಅಷ್ಟೇ ಮಟ್ಟದ ಸಂಚಲನ ಮೂಡಿಸಿರುವ ಚಿತ್ರವೆಂದರೆ ಅದು ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2'. 2025ರ ಅತಿದೊಡ್ಡ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಈ ಸ್ಪೈ ಥ್ರಿಲ್ಲರ್ ಚಿತ್ರದ ಎರಡನೇ ಭಾಗದ ಮೇಲೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ. ಈ ಬಾರಿ ಬಾಕ್ಸ್ ಆಫೀಸ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದೊಂದಿಗೆ 'ಧುರಂಧರ್ 2' ನೇರ ಪೈಪೋಟಿ ನಡೆಸಲಿದ್ದು, ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದರೂ ಚಿತ್ರತಂಡವು ಇದುವರೆಗೆ ಯಾವುದೇ ಪ್ರಚಾರ ಕಾರ್ಯಗಳನ್ನು ಆರಂಭಿಸದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಈ ಹಿಂದೆ ಮೊದಲ ಭಾಗದ ಕೊನೆಯಲ್ಲಿ ಕೇವಲ ಮಾಂಟೇಜ್ ಶಾಟ್‌ಗಳನ್ನು ಒಳಗೊಂಡ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡವು ಪ್ರೇಕ್ಷಕರಿಂದ ಟೀಕೆಗೆ ಗುರಿಯಾಗಿತ್ತು. ಆದರೆ ಈಗ ಲಭ್ಯವಿರುವ ಮಾಹಿತಿಯ ಪ್ರಕಾರ, ಚಿತ್ರತಂಡವು ಬಿಡುಗಡೆಗೂ ಮುನ್ನವೇ ಪ್ರೇಕ್ಷಕರ ಗಮನ ಸೆಳೆಯಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದು, ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 3ರಂದು ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

'ಧುರಂಧರ್: ದಿ ರಿವೆಂಜ್' ಹೆಸರಿನ ಈ ಸೀಕ್ವೆಲ್‌ನಲ್ಲಿ ರಣವೀರ್ ಸಿಂಗ್ ಮತ್ತೊಮ್ಮೆ ಪಾಕಿಸ್ತಾನದ ಕ್ರಿಮಿನಲ್ ಲೋಕಕ್ಕೆ ನುಗ್ಗುವ ಭಾರತೀಯ ಗೂಢಚಾರಿ ಹಮ್ಜಾ ಅಲಿ ಮಜಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ನಟ ಅಕ್ಷಯ್ ಖನ್ನಾ ಅವರ ಪಾತ್ರವೂ ಈ ಭಾಗದಲ್ಲಿ ಹಿನ್ನಲೆಯ ಕಥೆಯೊಂದಿಗೆ ಮರಳಲಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಆದಿತ್ಯ ಧರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಮೊದಲ ಭಾಗವು ವಿವಾದಾತ್ಮಕ ವಿಷಯಗಳಿಂದಾಗಿ ಕೆಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿತ್ತು. ಸದ್ಯ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಂತಹ ಜಾಗತಿಕ ಉದ್ವಿಗ್ನ ಪರಿಸ್ಥಿತಿಗಳ ನಡುವೆ, ದೇಶಪ್ರೇಮದ ಕಥಾಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರಿಂದ ಎಂತಹ ಪ್ರತಿಕ್ರಿಯೆ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಕಾಣಲಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.

Read More
Next Story