
ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ 2 ಅಬ್ಬರ
Dhurandhar 2| ಧುರಂಧರ್ 2 ಒಂದೇ ದಿನಕ್ಕೆ 100 ಕೋಟಿ ಕಲೆಕ್ಷನ್
ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಮೊದಲ ದಿನವೇ 103 ಕೋಟಿ ಗಳಿಸುವ ಮೂಲಕ ಬಾಲಿವುಡ್‌ನ ಸಾರ್ವಕಾಲಿಕ ಅತಿದೊಡ್ಡ ಓಪನರ್ ಆಗಿ ಹೊರಹೊಮ್ಮಿದೆ.
ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಮಾರ್ಚ್ 19 ರಂದು ತೆರೆಕಂಡ ಈ ಸಿನಿಮಾ ಕೇವಲ ಎರಡೇ ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿಗಳ ಗಡಿ ದಾಟುವ ಮೂಲಕ ಬಾಲಿವುಡ್‌ನ ಸಾರ್ವಕಾಲಿಕ ಅತಿದೊಡ್ಡ ಓಪನಿಂಗ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿನೊಂದಿಗೆ ಭಾರತದ ಟಾಪ್ 5 ಅತಿ ಹೆಚ್ಚು ಓಪನಿಂಗ್ ಪಡೆದ ಸಿನಿಮಾಗಳ ಪಟ್ಟಿಯಲ್ಲಿ ಧುರಂಧರ್ 2 ಸ್ಥಾನ ಪಡೆದುಕೊಂಡಿದೆ.
ಚಿತ್ರವು ಮೊದಲ ದಿನವೇ ಭಾರತೀಯ ಚಿತ್ರರಂಗವನ್ನು ಬೆರಗುಗೊಳಿಸುವಂತಹ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಗಳ ಪ್ರಕಾರ, ಧುರಂಧರ್ 2 ಮೊದಲ ದಿನ ಒಟ್ಟು 103 ಕೋಟಿ ರೂಪಾಯಿಗಳನ್ನು ಗಳಿಸಿದೆ. ವಿಶೇಷವೆಂದರೆ, ಸಿನಿಮಾ ಬಿಡುಗಡೆಗೂ ಮುನ್ನ ನಡೆದ ಪೇಯ್ಡ್ ಪ್ರಿವ್ಯೂ ಶೋಗಳಿಂದಲೇ 43 ಕೋಟಿ ರೂಪಾಯಿ ಹರಿದುಬಂದಿದೆ. ಇದರೊಂದಿಗೆ ಇದು ಬಾಲಿವುಡ್‌ನ ನಂಬರ್ 1 ಓಪನರ್ ಆಗಿ ಹೊರಹೊಮ್ಮಿದ್ದು, ಭಾರತೀಯ ಸಿನಿಮಾಗಳ ಒಟ್ಟಾರೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಪ್ರಸ್ತುತ ಈ ಚಿತ್ರದ ವಿಶ್ವಾದ್ಯಂತ ಕಲೆಕ್ಷನ್ 300 ಕೋಟಿ ರೂಪಾಯಿಗಳ ಗಡಿ ದಾಟಿ ಮುನ್ನುಗ್ಗುತ್ತಿದೆ.
ಭಾರತದಲ್ಲಿ ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. 164 ಕೋಟಿ ಗಳಿಕೆಯೊಂದಿಗೆ 'ಪುಷ್ಪ: ದಿ ರೂಲ್ ಪಾರ್ಟ್ 2' ಮೊದಲ ಸ್ಥಾನದಲ್ಲಿದ್ದರೆ, 133 ಕೋಟಿ ಗಳಿಸಿರುವ 'ಆರ್ ಆರ್‌ಆರ್' ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 116 ಕೋಟಿ ಗಳಿಸಿದ 'ಕೆಜಿಎಫ್ ಚಾಪ್ಟರ್ 2' ಇದ್ದು, ಈಗ 103 ಕೋಟಿ ಗಳಿಸಿರುವ 'ಧುರಂಧರ್ 2' ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಐದನೇ ಸ್ಥಾನದಲ್ಲಿ 95 ಕೋಟಿ ಗಳಿಸಿದ್ದ 'ಕಲ್ಕಿ 2898 ಎಡಿ' ಇದೆ. 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಧುರಂಧರ್ ಮೊದಲ ಭಾಗವು ಆ ವರ್ಷದ ಅತಿದೊಡ್ಡ ಹಿಟ್ ಆಗಿತ್ತು. ಆದರೆ ಅದರ ಮುಂದುವರಿದ ಭಾಗವಾದ 'ಧುರಂಧರ್ 2' ಈಗ ಮೊದಲ ಭಾಗದ ದಾಖಲೆಗಳನ್ನೆಲ್ಲ ಉಡೀಸ್ ಮಾಡಿದೆ.
ಧುರಂಧರ್ ಮೊದಲ ಭಾಗವು 2025ರ ಅತಿಹೆಚ್ಚು ಗಳಿಕೆಯ ಸಿನಿಮಾವಾಗಿತ್ತು. ಆದರೆ ಅದರ ಸೀಕ್ವೆಲ್ ಕೇವಲ ಎರಡೇ ದಿನಗಳಲ್ಲಿ ಮೊದಲ ಭಾಗದ ಒಟ್ಟಾರೆ ಓಪನಿಂಗ್ ದಾಖಲೆಗಳನ್ನು ಧೂಳೀಪಟ ಮಾಡಿದೆ. ಪ್ರಸ್ತುತ ಸಿನಿಮಾ ಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಬಾಲಿವುಡ್ ಇತಿಹಾಸದಲ್ಲಿ 'ಪಠಾಣ್' ಮತ್ತು 'ಜವಾನ್' ಸಿನಿಮಾಗಳ ದಾಖಲೆಗಳಿಗೂ ಇದು ಸವಾಲು ಎಸೆಯುತ್ತಿದೆ.

