ನಟ ದರ್ಶನ್  ರೇಣುಕಾಸ್ವಾಮಿ ಕೊಲೆ ಆಧರಿಸಿದ ಬಾಸ್ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ!
x

'ಬಾಸ್' ಚಿತ್ರದ ಬಿಡುಗಡೆಗೆ ಬೆಂಗಳೂರಿನ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. 

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಆಧರಿಸಿದ 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ!

ನ್ಯಾಯಾಲಯದ ಆದೇಶದನ್ವಯ, ದರ್ಶನ್‌-ವಿಜಯಲಕ್ಷ್ಮಿ ದಂಪತಿಯ ಖಾಸಗಿ ಜೀವನ, ಕುಟುಂಬ, ಘನತೆ ಹಾಗೂ ಪ್ರಸ್ತುತ ನ್ಯಾಯಾಂಗದ ಪರಿಶೀಲನೆಯಲ್ಲಿರುವ ಕ್ರಿಮಿನಲ್‌ ಪ್ರಕರಣವನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಳಸಿಕೊಳ್ಳುವಂತಿಲ್ಲ.


Click the Play button to hear this message in audio format

ನಟ ದರ್ಶನ್‌, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ 'ರೇಣುಕಾಸ್ವಾಮಿ ಕೊಲೆ ಪ್ರಕರಣ'ವನ್ನು ಆಧರಿಸಿ ನಿರ್ಮಾಣವಾಗುತ್ತಿದೆ ಎನ್ನಲಾದ 'ಬಾಸ್' (Boss) ಚಿತ್ರದ ಬಿಡುಗಡೆಗೆ ಬೆಂಗಳೂರಿನ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.

ಚಿತ್ರದ ಬಿಡುಗಡೆಯನ್ನು ವಿರೋಧಿಸಿ ನಟ ದರ್ಶನ್ ಶ್ರೀನಿವಾಸ್ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರು ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ 17ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶೆ ಎಂ. ಅನಿತಾ ಅವರ ಪೀಠವು ಗುರುವಾರ (ಏ. 9) ಈ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆವರೆಗೆ ಚಿತ್ರವನ್ನು ಚಿತ್ರಮಂದಿರಗಳಲ್ಲಾಗಲೀ ಅಥವಾ ಒಟಿಟಿ (OTT) ವೇದಿಕೆಗಳಲ್ಲಾಗಲೀ ಬಿಡುಗಡೆ ಮಾಡುವಂತಿಲ್ಲ ಎಂದು ಸಿರಿ ಪ್ರೊಡಕ್ಷನ್ಸ್‌ ಮತ್ತು ನಿರ್ಮಾಪಕ ವಿ. ಲಾವಾ ಅವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಕೋರ್ಟ್ ಆದೇಶದಲ್ಲಿ ಏನಿದೆ?

ನ್ಯಾಯಾಲಯದ ಆದೇಶದನ್ವಯ, ದರ್ಶನ್‌-ವಿಜಯಲಕ್ಷ್ಮಿ ದಂಪತಿಯ ಖಾಸಗಿ ಜೀವನ, ಕುಟುಂಬ, ಘನತೆ ಹಾಗೂ ಪ್ರಸ್ತುತ ನ್ಯಾಯಾಂಗದ ಪರಿಶೀಲನೆಯಲ್ಲಿರುವ ಕ್ರಿಮಿನಲ್‌ ಪ್ರಕರಣವನ್ನು (ರೇಣುಕಾಸ್ವಾಮಿ ಹತ್ಯೆ) ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಳಸಿಕೊಳ್ಳುವಂತಿಲ್ಲ. ಅಲ್ಲದೆ, ಸಿನಿಮಾ ಅಥವಾ ವೆಬ್‌ ಸರಣಿಯ ನಿರ್ಮಾಣ, ಚಿತ್ರೀಕರಣ, ಸಂಕಲನ, ಪ್ರಚಾರ, ಮಾರ್ಕೆಟಿಂಗ್, ಸ್ಟ್ರೀಮಿಂಗ್‌ ಹಾಗೂ ಮಾರಾಟಕ್ಕೆ ಸಂಪೂರ್ಣ ತಡೆ ನೀಡಲಾಗಿದೆ.

ಪೋಸ್ಟರ್‌, ಟೀಸರ್‌ ಬಿಡುಗಡೆ, ಮಾಧ್ಯಮ ಗೋಷ್ಠಿ, ಸಂದರ್ಶನಗಳಲ್ಲಿ ದರ್ಶನ್ ದಂಪತಿಯ ವರ್ಚಸ್ಸು ಅಥವಾ ಅವರ ವ್ಯಕ್ತಿತ್ವದ ಉಲ್ಲೇಖ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮೇ 2ಕ್ಕೆ ವಿಚಾರಣೆ ಮುಂದೂಡಿಕೆ:

ಮೂಲಗಳ ಪ್ರಕಾರ 'ಬಾಸ್' ಸಿನಿಮಾವನ್ನು ಇದೇ ಏಪ್ರಿಲ್ 14ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿತ್ತು. ಆದರೆ ಇದೀಗ ಕೋರ್ಟ್ ತಡೆಯಾಜ್ಞೆಯಿಂದಾಗಿ ಚಿತ್ರದ ಬಿಡುಗಡೆಗೆ ಬ್ರೇಕ್ ಬಿದ್ದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸಿರಿ ಪ್ರೊಡಕ್ಷನ್ಸ್‌, ವಿ. ಲಾವಾ, ಸೆನ್ಸಾರ್ ಮಂಡಳಿ (CBFC), ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಸೇರಿದಂತೆ ಗೂಗಲ್, ಮೆಟಾ (ಫೇಸ್‌ಬುಕ್), ಎಕ್ಸ್ (X) ಸಂಸ್ಥೆಗಳು ಹಾಗೂ ಕೆಲ ಮಾಧ್ಯಮ ಸಂಸ್ಥೆಗಳಿಗೆ ಸಮನ್ಸ್‌ ಮತ್ತು ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಮೇ 2ನೇ ತಾರೀಖಿಗೆ ಮುಂದೂಡಿದೆ.

Read More
Next Story