
ಬಾಲಿವುಡ್ ಸ್ಟಾರ್ ಅಲಿಯಾ ಭಟ್ ನಟನೆಯ, ವೈಆರ್‌ಎಫ್ ಸ್ಪೈ ಯುನಿವರ್ಸ್‌ನ ಬಹುನಿರೀಕ್ಷಿತ 'ಆಲ್ಫಾ' ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.
ಅಲಿಯಾ ಭಟ್ ನಟನೆಯ 'ಆಲ್ಫಾ' ಸಿನಿಮಾದ ಫಸ್ಟ್ ಲುಕ್
ಬಾಲಿವುಡ್ ಸ್ಟಾರ್ ಅಲಿಯಾ ಭಟ್ ನಟನೆಯ, ವೈಆರ್‌ಎಫ್ ಸ್ಪೈ ಯುನಿವರ್ಸ್‌ನ ಬಹುನಿರೀಕ್ಷಿತ 'ಆಲ್ಫಾ' ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಸಿನಿಮಾ ಜುಲೈ 10ರಂದು ಬೆಳ್ಳಿತೆರೆಗೆ ಬರಲಿದೆ.
ಕಳೆದ ಎರಡು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರವಿದ್ದ ಬಾಲಿವುಡ್‌ನ ಸ್ಟಾರ್ ನಟಿ ಅಲಿಯಾ ಭಟ್, ಇದೀಗ ತಮ್ಮ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಆಲ್ಫಾ' ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
2024ರಲ್ಲಿ ತೆರೆಕಂಡ 'ಜಿಗ್ರಾ' ಚಿತ್ರದ ನಂತರ ಅಲಿಯಾ ಅಭಿನಯದ ಯಾವುದೇ ಸಿನಿಮಾ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದರು. ಇಂದು ಸಾಮಾಜಿಕ ಜಾಲತಾಣದ ಮೂಲಕ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿರುವ ನಟಿ, ಸಿನಿಮಾ ಜುಲೈ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ.
ವೈಆರ್‌ಎಫ್ ಸ್ಪೈ ಯುನಿವರ್ಸ್‌ನ ಏಳನೇ ಭಾಗವಾಗಿರುವ 'ಆಲ್ಫಾ' ಚಿತ್ರವು ವಿಶೇಷ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ. 'ಏಕ್ ಥಾ ಟೈಗರ್', 'ವಾರ್' ಮತ್ತು 'ಪಠಾಣ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ನಂತರ ಬರುತ್ತಿರುವ ಈ ಚಿತ್ರವು, ಈ ಸರಣಿಯ ಮೊದಲ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಪೋಸ್ಟರ್‌ನಲ್ಲಿ ಅಲಿಯಾ ಭಟ್ ಗಾಯಗೊಂಡ ಮುಖ ಹಾಗೂ ತೀವ್ರವಾದ ನೋಟದೊಂದಿಗೆ ಕಾಣಿಸಿಕೊಂಡಿದ್ದು, ಅವರ ರಗಡ್ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ವದಂತಿಗಳಿಗೆ ಈ ಪೋಸ್ಟ್ ತೆರೆ ಎಳೆದಿದ್ದು, ಅದ್ದೂರಿಯಾಗಿ ಚಿತ್ರಮಂದಿರಗಳಲ್ಲೇ ಈ ಚಿತ್ರ ತೆರೆಗೆ ಬರಲಿದೆ.
ಶಿವ್ ರವೈಲ್ ನಿರ್ದೇಶನದ ಈ ಚಿತ್ರದಲ್ಲಿ ಅಲಿಯಾ ಭಟ್ ಜೊತೆಗೆ ಶಾರ್ವರಿ ವಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಭೂಮಿಕೆಗಳಲ್ಲಿ ನಟಿಸಿದ್ದಾರೆ.
ಅಲಿಯಾ ಅವರ ಆಕ್ಷನ್ ಅವತಾರವನ್ನು ನೋಡಲು ಕಾತರರಾಗಿದ್ದೇವೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಸಿನಿಮಾದ ಹೊರತಾಗಿ ಅಲಿಯಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರ 'ಲವ್ ಅಂಡ್ ವಾರ್' ಚಿತ್ರದಲ್ಲೂ ನಟಿಸುತ್ತಿದ್ದು, ಅದರಲ್ಲಿ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.

